ನವದೆಹಲಿ/ಚೆನ್ನೈ: ಕರೂರು ದುರಂತದ (Karur Stampede) ಸಂತ್ರಸ್ತರ ಕುಟುಂಬಸ್ಥರಿಗೆ ಸಿಎಂ ವಿಜಯ್ (CM Vijay) ಹೊರಡಿಸಿದ್ದ ಸರ್ಕಾರಿ ಉದ್ಯೋಗ ನೇಮಕಾತಿ ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ (Madras High Court) ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ತಡೆ ನೀಡಿದೆ.

ಸುಪ್ರೀಂಕೋರ್ಟ್ ನ್ಯಾ.ಜೆ.ಬಿ.ಪರ್ದಿವಾಲಾ, ನ್ಯಾ.ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆ, ದುರಂತದಲ್ಲಿ ಜನರು ಸಾವನ್ನಪ್ಪಿದಾಗ ಸಂತ್ರಸ್ತರಿಗೆ ಪರಿಹಾರ ನೀಡಲು ಸರ್ಕಾರ ಮುಂದಾದರೆ ಅದನ್ನು ನೀವು ಹೇಗೆ ಪ್ರಶ್ನಿಸುತ್ತೀರಿ? ಕುಟುಂಬದ ಏಕೈಕ ಆಧಾರಸ್ತಂಭವೇ ಸಾವನ್ನಪ್ಪಿದ್ದರೆ, ಮಗ ಅಥವಾ ಮಗಳಿಗೆ ಸರ್ಕಾರ ಉದ್ಯೋಗ ನೀಡುವುದರಲ್ಲಿ ತಪ್ಪೇನಿದೆ ಎಂದು ಪೀಠ ಪ್ರಶ್ನಿಸಿದೆ. ಇದೇ ವೇಳೆ ತಮಿಳುನಾಡು ಮುಖ್ಯ ಕಾರ್ಯದರ್ಶಿ ಹಾಗೂ ಇತರರಿಗೆ ನೋಟಿಸ್ ಜಾರಿಗೊಳಿಸಿದೆ. ಇದನ್ನೂ ಓದಿ: ಕರೂರು ಕಾಲ್ತುಳಿತ ಸಂತ್ರಸ್ತರಿಗೆ ಉದ್ಯೋಗ ನೀಡಿದ ವಿಜಯ್‌ಗೆ ಶಾಕ್ – ಆದೇಶವೇ ರದ್ದು

ಮದ್ರಾಸ್ ಹೈಕೋರ್ಟ್ ಆದೇಶವೇನು?
ಜುಲೈ ತಿಂಗಳ ಆರಂಭದಲ್ಲಿ, ಮುಖ್ಯಮಂತ್ರಿ ವಿಜಯ್ ಕರೂರಿಗೆ ಭೇಟಿ ನೀಡಿದ್ದರು. ಈ ವೇಳೆ 41 ಸಂತ್ರಸ್ತರ ಕುಟುಂಬಗಳ ಪೈಕಿ, 32 ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೇಮಕಾತಿ ಆದೇಶ ಪ್ರತಿಯನ್ನು ವಿತರಿಸಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ಜುಲೈ 27ರಂದು ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಇದು ಸಂವಿಧಾನದ ಆರ್ಟಿಕಲ್ 14 (ಸಮಾನತೆಯ ಹಕ್ಕು) ಮತ್ತು ಆರ್ಟಿಕಲ್ 16ನ್ನು (ಸರ್ಕಾರಿ ಉದ್ಯೋಗದಲ್ಲಿ ಅವಕಾಶದ ಸಮಾನತೆ) ಉಲ್ಲಂಘಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತ್ತು.
ಏನಿದು ಪ್ರಕರಣ?
ಕಳೆದ ವರ್ಷ ಡಿಎಂಕೆ ಅಧಿಕಾರದಲ್ಲಿದ್ದಾಗ ನಡೆದ ವಿಜಯ್ ಅವರ ಟಿವಿಕೆ ರ‍್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಕ್ಕಳು ಸೇರಿದಂತೆ 41 ಜನರು ಪ್ರಾಣ ಕಳೆದುಕೊಂಡಿದ್ದರು.
ಈ ದುರಂತಕ್ಕೆ ವಿಜಯ್ ಅವರ ತಡವಾದ ಆಗಮನ ಮತ್ತು ವ್ಯವಸ್ಥೆಯ ವೈಫಲ್ಯ ಕಾರಣವೆಂದು ಪೊಲೀಸರು ಆರೋಪಿಸಿದ್ದರು. ಆದರೆ, ಇದನ್ನು ತಳ್ಳಿಹಾಕಿದ ಟಿವಿಕೆ, ಇದು ಪೊಲೀಸ್ ವೈಫಲ್ಯ ಹಾಗೂ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರ ಪಿತೂರಿ ಎಂದು ಆರೋಪಿಸಿತ್ತು.ಇದನ್ನೂ ಓದಿ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ ವಿಜಯ್ – ಕರೂರು ದುರಂತ ಸಂತ್ರಸ್ತರ 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗ

