ಲಕ್ನೋ: ಮದುವೆಯಾಗಿ ಕೇವಲ 6 ತಿಂಗಳಲ್ಲೇ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ (Lucknow) ನಡೆದಿದೆ.
26 ವರ್ಷದ ಶ್ವೇತಾ ಸಿಂಗ್ ಮೃತ ಗೃಹಿಣಿ. ಮದುವೆಯಾದ ಮೊದಲ ದಿನದಿಂದಲೇ ಗಂಡನ ಮನೆಯವರು ವರದಕ್ಷಿಣೆ ವಿಚಾರವಾಗಿ ಶ್ವೇತಾಳಿಗೆ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯ, ಪ್ರೀತಿಸಿ ಮದುವೆ – ಎರಡೇ ತಿಂಗಳಲ್ಲಿ ಪತ್ನಿ ಬೇಡ ಎಂದ ಪತಿ
ಶ್ವೇತಾ ಸಿಂಗ್ 2025ರ ನವೆಂಬರ್ 22ರಂದು ಭೂಪೇಂದ್ರ ಸಿಂಗ್‌ನನ್ನು ವಿವಾಹವಾಗಿದ್ದಳು. ಮದುವೆಯ ದಿನವೇ ವರ ಹಾಗೂ ಅವರ ತಂದೆ 10 ಲಕ್ಷ ರೂ. ಮತ್ತು ಸ್ಕಾರ್ಪಿಯೋ ಕಾರು ಬೇಡಿಕೆ ಇಟ್ಟಿದ್ದರು ಎಂದು ಶ್ವೇತಾ ಸಹೋದರಿಯರಾದ ಕೋಮಲ್ ಮತ್ತು ಜ್ಯೋತಿ ಆರೋಪಿಸಿದ್ದಾರೆ. ಮದುವೆಯ ನಂತರ ಹೆಣ್ಣನ್ನು ಕಳುಹಿಸಿಕೊಡುವ ಸಂದರ್ಭದಲ್ಲಿ ಶ್ವೇತಾ ತಂದೆ ಉಮೇಶ್ ಕುಮಾರ್ ಸಿಂಗ್ ಅವರು ಕೈಮುಗಿದು ಬೇಡಿಕೊಂಡರೂ ಗಂಡನ ಮನೆಯವರು ಒಪ್ಪಲಿಲ್ಲ ಎಂದು ಕುಟುಂಬ ಹೇಳಿದೆ.
ಮದುವೆಯಾದ ಬಳಿಕ ಶ್ವೇತಾಗೆ ಪ್ರತಿದಿನ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ವರದಕ್ಷಿಣೆ ನೀಡಿಲ್ಲವೆಂಬ ವಿಚಾರಕ್ಕೆ ಅತ್ತೆ ಹಾಗೂ ಮನೆಯವರು ಅವಳನ್ನು ಅವಮಾನಿಸುತ್ತಿದ್ದರು. ನೋಯ್ಡಾದಲ್ಲಿ ವಾಸವಾಗಿದ್ದ ನಾದಿನಿ ಕೂಡ ಶ್ವೇತಾ ಮತ್ತು ಆಕೆಯ ಕುಟುಂಬದ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಳು ಎಂದು ಆರೋಪಿಸಲಾಗಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾಗೆ ಮದುವೆಯ ಬಳಿಕ ಕೆಲಸ ಬಿಡುವಂತೆ ಒತ್ತಾಯಿಸಲಾಗಿತ್ತು. ಕೆಲವು ತಿಂಗಳ ಬಳಿಕ ಮತ್ತೆ ಕೆಲಸಕ್ಕೆ ಹೋಗಬಹುದು ಎಂದು ಭರವಸೆ ನೀಡಿದ್ದರೂ, ನಂತರ ಅದಕ್ಕೆ ಅವಕಾಶ ನೀಡಲಾಗಲಿಲ್ಲ. ಇದರಿಂದ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಕುಟುಂಬ ತಿಳಿಸಿದೆ. ಶ್ವೇತಾಗೆ ತನ್ನ ಮನೆಯವರನ್ನು ಭೇಟಿಯಾಗಲು ಕೂಡ ಅವಕಾಶ ನೀಡುತ್ತಿರಲಿಲ್ಲ. ಪತಿ ಭೂಪೇಂದ್ರ ಅವಳ ಮೇಲೆ ಸದಾ ಅನುಮಾನ ಪಡುತ್ತಿದ್ದ. ತಾಯಿಯನ್ನು ನೋಡಲು ಮನೆಗೆ ಹೋದರೂ ಗಲಾಟೆ ಮಾಡುತ್ತಿದ್ದ ಎಂದು ಸಹೋದರಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕರ್ತವ್ಯನಿರತ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ಸಾವು
ಆತ್ಮಹತ್ಯೆ ಮಾಡಿಕೊಳ್ಳುವ 2 ಗಂಟೆಗಳಿಗೂ ಮುನ್ನ ಶ್ವೇತಾ ತನ್ನ ತಂದೆ ಹಾಗೂ ಮನೆಯವರೊಂದಿಗೆ ಕರೆ ಮಾಡಿ ಮಾತನಾಡಿದ್ದಾಳೆ. ನಂತರ ಶ್ವೇತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬAಧ ಲಕ್ನೋ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತಿ ಭೂಪೇಂದ್ರ ಸಿಂಗ್ ಹಾಗೂ ಅವನ ತಂದೆ ಕೌಶ್ಲೇಂದ್ರ ಸಿಂಗ್‌ನನ್ನು ಬಂಧಿಸಿದ್ದಾರೆ. ಪತಿ, ಅತ್ತೆ, ಮಾವ, ಬಾವ, ನಾದಿನಿ ಸೇರಿ ಹಲವು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಶ್ವೇತಾ ನೇಣು ಬಿಗಿದು ಮೃತಪಟ್ಟಿರುವುದು ದೃಢಪಟ್ಟಿದೆ.
