ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwar Hills) ಚಿರತೆ ಆತಂಕ ಮುಂದುವರೆದಿದೆ. ಇತ್ತ ಬೀದರ್‌ನಲ್ಲಿ ಹೆಬ್ಬಾವು ಕೋತಿಯನ್ನು ನುಂಗಿದ್ದು, ಕೋತಿ ಸಾವನ್ನಪ್ಪಿದೆ.
ಇತ್ತೀಚಿಗಷ್ಟೇ ನಾಗಮಲೆ ಬೆಟ್ಟದಲ್ಲಿ ಚಿರತೆ ಬಾಲಕನನ್ನು ಹೊತ್ತೊಯ್ದು ಕೊಂದು ಹಾಕಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ನಾಲ್ಕು ಬೋನ್ ಅಳವಡಿಸಿ, ಚಿರತೆ ಸೆರೆ ಕಾರ್ಯಾಚರಣೆ ಕೈಗೊಂಡಿತ್ತು. ಇದೇ ಹೊತ್ತಲ್ಲೇ ಇದೀಗ ಮೇಕೆಯೊಂದನ್ನು ಹೊತ್ತೊಯ್ದಿದೆ. ಇದನ್ನೂ ಓದಿ: ತಕ್ಷಣವೇ ದಲಿತರ ಮೀಸಲಾತಿ ಹೆಚ್ಚಿಸಬೇಕು – ಛಲವಾದಿ ಆಗ್ರಹ
ಚಿರತೆ ಜೊತೆಗೆ ಕಾಡಾನೆ ಉಪಟಳವು ಹೆಚ್ಚಾಗಿದೆ. ಹಲಸಿನ ಹಣ್ಣು ತಿಂದು ಕೃಷಿ ಪರಿಕರಗಳಿಗೆ ಹಾನಿ ಮಾಡಿದ್ದು ರೈತರಲ್ಲಿ ಆತಂಕ ಹೆಚ್ಚಿಸಿದೆ. ಇತ್ತ, ಕನಕಪುರ (Kanakapura) ಭಾಗದಲ್ಲೂ ಚಿರತೆ ಹಾವಳಿ ನಿಲ್ಲುತ್ತಿಲ್ಲ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕುರಿ ಹಾಗೂ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿದ್ದು, 2 ಕುರಿ, 2 ಮೇಕೆಗಳು ಸಾವನ್ನಪ್ಪಿವೆ. ಚಿರತೆ ಹಾವಳಿ ತಪ್ಪಿಸದ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಮಂಗನನ್ನು ಹೆಬ್ಬಾವು ನುಂಗಿ ಹಾಕಿದ ಪರಿಣಾಮ ಮಂಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೀದರ್ (Bidar) ಜಿಲ್ಲೆಯ ಭಾಲ್ಕಿ ತಾಲೂಕಿನ ಕೊಸಮ್ ಗ್ರಾಮದಲ್ಲಿ ನಡೆದಿದೆ. ಮಂಗ ಹಾಗೂ ಹೆಬ್ಬಾವು ಬೇರ್ಪಡಿಸಿದ ಉರಗ ತಜ್ಞ ಸುರೇಶ್ ಸುರಕ್ಷಿತವಾಗಿ ಹೆಬ್ಬಾವುವನ್ನು ಕಾಡಿಗೆ ಬಿಟ್ಟು ಬಂದಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ (Shivamogga) ಕಾಡಾನೆ ಉಪಟಳ ಮುಂದುವರಿದಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾ.ಪಂ ವ್ಯಾಪ್ತಿಯ ಕಾಕನಹಸೂಡಿ ಬಳಿ ಆನೆ ಹಿಮ್ಮೆಟ್ಟಿಸಲು ಹೋದ ಗ್ರಾಮಸ್ಥರನ್ನೇ ಬೆನ್ನಟ್ಟಿ ಬಂದಿದೆ. ಹಾಸನದಲ್ಲೂ ಗಜ ಗಲಾಟೆ ಮುಂದುವರೆದಿದ್ದು, ಬೆಳ್ಳಂಬೆಳಿಗ್ಗೆ 25ಕ್ಕೂ ಹೆಚ್ಚು ಕಾಡಾನೆಗಳು ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಪರೇಡ್ ನಡೆಸಿದ ಘಟನೆ ಬೇಲೂರು ತಾಲ್ಲೂಕಿನ ಕೋರಲಗದ್ದೆ, ನಾರ್ವೆ ರಸ್ತೆ ಮಾರ್ಗದಲ್ಲಿ ನಡೆದಿದೆ. ಕಾಫಿ ತೋಟದಲ್ಲೇ ಗಜಪಡೆ ಬೀಡು ಬಿಟ್ಟಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿವೆ. ಇದನ್ನೂ ಓದಿ: ಶಾಲಾ-ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ನಿರ್ಬಂಧ, ಹಿಜಬ್‌ಗೆ ಅವಕಾಶ – ರಾಜ್ಯ ಸರ್ಕಾರ ಆದೇಶ

