ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹಳದಿ ರೇಷ್ಮೆ ಧೋತಿಯನ್ನು ಹೊಸ ಡ್ರೆಸ್ ಕೋಡ್ ಆಗಿ ಜಾರಿಗೆ ತರಲಾಗಿದೆ. ರಾಮನಂದಿ ಸಂಪ್ರದಾಯಕ್ಕೆ ಅನುಗುಣವಾಗಿ ಈ ಉಡುಪನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಧಾರ್ಮಿಕ ಸಮಿತಿ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೇವಾಲಯ ಟ್ರಸ್ಟ್‌ನ ಧಾರ್ಮಿಕ ಸಮಿತಿಯ ಸದಸ್ಯ ಮಿಥಿಲೇಶ್ ನಂದಿನಿ ಶರಣ್, ರಾಮನಂದಿ ಸಂಪ್ರದಾಯಕ್ಕೆ ಅನುಗುಣವಾಗಿ ಉಡುಪುಗಳನ್ನು ಸೂಚಿಸಲಾಗಿದೆ. ಅರ್ಚಕರು ತಿಳಿ-ಹಳದಿ ರೇಷ್ಮೆ ಧೋತಿಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ರೇಷ್ಮೆ ಉತ್ತರೀಯಗಳನ್ನು ಧರಿಸುತ್ತಾರೆ. ತಿಳಿ ಹಳದಿ ಬಣ್ಣವನ್ನು ಭಗವಾನ್ ರಾಮನಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ವಸ್ತ್ರ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಮಮಂದಿರ ಟ್ರಸ್ಟ್ ಸಿಇಒ ನೇಮಕಕ್ಕೆ ಸಂದರ್ಶನ ಮುಕ್ತಾಯ – ಪ್ರಕ್ರಿಯೆ ಹೇಗಿತ್ತು? ಮುಂದಿನ ಹಂತ ಏನು?
ಇದರೊಂದಿಗೆ ಅರ್ಚಕರು ‘ಪಂಚಕೇಶ್’ ಸಂಪ್ರದಾಯವನ್ನು (ಸಂಪೂರ್ಣವಾಗಿ ಕ್ಷೌರ ಮಾಡಿಕೊಳ್ಳುತ್ತಾರೆ) ಅನುಸರಿಸುತ್ತಾರೆ. ಸಾಂಪ್ರದಾಯಿಕ ರಾಮನಂದಿ ತಿಲಕವನ್ನು ಧರಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ. ಆ.15 ರಿಂದ ರಾಮಮಂದಿರದ ಅರ್ಚಕರು ಈ ಹೊಸ ಉಡುಗೆಯನ್ನು ಧರಿಸಲು ಪ್ರಾರಂಭಿಸಿದ್ದಾರೆ.
ರೇಷ್ಮೆ ವಸ್ತ್ರಗಳನ್ನು ಅವುಗಳ ಪಾವಿತ್ರ್ಯ ಮತ್ತು ಪರಿಶುದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಸಮವಸ್ತ್ರದ ಉಡುಗೆ ರಾಮಲಲ್ಲಾ ಪೂಜೆ ಮತ್ತು ಸೇವೆಗೆ ಹೆಚ್ಚಿನ ಶಿಸ್ತು, ಏಕರೂಪತೆ ಮತ್ತು ಧಾರ್ಮಿಕ ಘನತೆಯನ್ನು ತರುತ್ತದೆ ಎಂದು ಸಮಿತಿ ಹೇಳಿದೆ. ಇದನ್ನೂ ಓದಿ: ಅಯೋಧ್ಯೆ ಶ್ರೀರಾಮ ಮಂದಿರ ಟ್ರಸ್ಟ್ ಸಿಇಒ ಹುದ್ದೆಗೆ ಅರ್ಜಿ ಆಹ್ವಾನ – ಆಕರ್ಷಕ ವೇತನ, ಬಂಗಲೆ ಸೌಲಭ್ಯ!
