ಮಡಿಕೇರಿ: ಕೊಡಗು ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ಡಿಪೋ (Kushalnagar KSRTC Bus Depot) ಕಾಮಗಾರಿ ಇದೀಗ ಅಂತಿಮ ಹಂತ ತಲುಪಿದೆ. ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಡಿಪೋ ಕಾರ್ಯಾರಂಭ ಮಾಡಿದರೆ ಜಿಲ್ಲೆಯ ಸಾರಿಗೆ ವ್ಯವಸ್ಥೆಗೆ ಹೊಸ ಚೈತನ್ಯ ಸಿಗುವ ನಿರೀಕ್ಷೆಯಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ಉದ್ಯೋಗಿಗಳು, ಗ್ರಾಮೀಣ ಭಾಗದ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ (Tourists) ಹೆಚ್ಚಿನ ಅನುಕೂಲವಾಗಲಿದೆ.
ಕೊಡಗು ಜಿಲ್ಲೆಯ ಎರಡನೇ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಆಗಿ ನಿರ್ಮಾಣವಾಗುತ್ತಿರುವ ಕುಶಾಲನಗರದ ಬಸವನಹಳ್ಳಿ ಡಿಪೋ ಕಾಮಗಾರಿ ಭರದಿಂದ ಸಾಗುತ್ತಿದೆ. ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಡೀಸೆಲ್ ಟ್ಯಾಂಕ್ ಕಾಮಗಾರಿ ಹಾಗೂ ಯಂತ್ರೋಪಕರಣಗಳ ಅಳವಡಿಕೆ ಸೇರಿದಂತೆ ಕೆಲವೇ ಕೆಲಸಗಳು ಬಾಕಿ ಉಳಿದಿವೆ.
ಸದ್ಯ ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರ ಕೆಎಸ್‌ಆರ್‌ಟಿಸಿ ಡಿಪೋ ಕಾರ್ಯನಿರ್ವಹಿಸುತ್ತಿದೆ. ಮಡಿಕೇರಿ ಡಿಪೋದಿಂದ 125 ಬಸ್‌ಗಳು 112 ಮಾರ್ಗಗಳಲ್ಲಿ ಸಂಚರಿಸುತ್ತಿದ್ದರೂ, ಗ್ರಾಮೀಣ ಭಾಗಗಳಿಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನೂ ಪ್ರವಾಸಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಭಾಗಮಂಡಲ, ತಲಕಾವೇರಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಸಮರ್ಪಕ ಸರ್ಕಾರಿ ಬಸ್ ವ್ಯವಸ್ಥೆಯ ಕೊರತೆಯಿಂದ ಪ್ರವಾಸಿಗರು ಹಾಗೂ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇದೆ. ಕುಶಾಲನಗರ ಡಿಪೋ ಕಾರ್ಯಾರಂಭವಾದರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆಯಿದೆ.
2024ರ ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಪೋಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ ಶಾಸಕ ಡಾ. ಮಂಥರ್ ಗೌಡ ಅವರು ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ ಕಾಮಗಾರಿ ಶೇ.90ಕ್ಕೂ ಹೆಚ್ಚು ಪೂರ್ಣಗೊಂಡಿದ್ದು, ಇನ್ನೂ ಒಂದರಿಂದ ಎರಡು ತಿಂಗಳೊಳಗೆ ಡಿಪೋ ಸಿದ್ಧವಾಗುವ ವಿಶ್ವಾಸವನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ನೂತನ ಡಿಪೋದಲ್ಲಿ ಪೆಟ್ರೋಲ್ ಬಂಕ್, ವರ್ಕ್‌ಶಾಪ್, ಆಡಳಿತ ಕಚೇರಿ, ಡಿಪೋ ಮ್ಯಾನೇಜರ್ ಕಚೇರಿ ಹಾಗೂ ಸಿಬ್ಬಂದಿ ವಸತಿ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ.
ಭವಿಷ್ಯದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಇದರ ಜೊತೆಗೆ ಮೈಸೂರು–ಕುಶಾಲನಗರ ಚತುಷ್ಪಥ ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸುವ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ.
ಮೈಸೂರು ಹಾಗೂ ಹಾಸನ ಜಿಲ್ಲೆಗಳ ಸಂಪರ್ಕ ಕೇಂದ್ರವಾಗಿರುವ ಕುಶಾಲನಗರದಲ್ಲಿ ಹೊಸ ಡಿಪೋ ಆರಂಭವಾದರೆ, ಮತ್ತಷ್ಟು ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ದೊರೆಯಲಿದೆ. ಇದರಿಂದ ಗ್ರಾಮೀಣ ಭಾಗಗಳಿಗೆ ಹೊಸ ಮಾರ್ಗಗಳು ಹಾಗೂ ಹೆಚ್ಚುವರಿ ಬಸ್ ಸೇವೆಗಳು ಲಭ್ಯವಾಗುವ ನಿರೀಕ್ಷೆಯಿದೆ.
ಒಟ್ಟಾರೆ, ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್ ಡಿಪೋ ಇದೀಗ ಸಾಕಾರವಾಗುವ ಹಂತಕ್ಕೆ ತಲುಪಿದೆ. ಡಿಪೋ ಕಾರ್ಯಾರಂಭವಾದರೆ ಕೊಡಗಿನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದ್ದು, ವಿದ್ಯಾರ್ಥಿಗಳು, ಉದ್ಯೋಗಿಗಳು, ಗ್ರಾಮೀಣ ಭಾಗದ ಜನರು ಹಾಗೂ ಪ್ರವಾಸಿಗರಿಗೆ ಇದು ಹೊಸ ಆಶಾಕಿರಣವಾಗಲಿದೆ.

