– ಗೋಡ್ಸೆ ಒಬ್ಬ ಭಯೋತ್ಪಾದಕ, ಕೊಲೆಗಾರ ಅಂತ ಗುಡುಗಿದ ಕೆಪಿಸಿಸಿ ನೂತನ ಅಧ್ಯಕ್ಷ
– ನಮ್ಮ ಜಾತಿ ಕಾಂಗ್ರೆಸ್, ನಮ್ಮ ಧರ್ಮ ಸಂವಿಧಾನ
ಬೆಂಗಳೂರು: ಆರ್‌ಎಸ್‌ಎಸ್‌ನವರು (RSS) ಪುಕ್ಕಲರು, ಅವರಿಗೆ ಧೈರ್ಯ ಇಲ್ಲ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (B.K.Hariprasad) ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಬಳಿಕ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ಪುಕ್ಕಲರು, ಅವರಿಗೆ ಧೈರ್ಯ ಇಲ್ಲ. ಆದರೆ, ನಾವು ಮೈಮರೆಯುತ್ತಿದ್ದೇವೆ. ಅದಕ್ಕಾಗಿಯೇ ಅವರು ವಿಜೃಂಭಿಸುತ್ತಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ.ಕೆ.ಹರಿಪ್ರಸಾದ್
ನನ್ನ ಜೀವನದ ಮಹತ್ವಪೂರ್ಣ ದಿನ. ಇದು ಅಧಿಕಾರ ಅಲ್ಲ. 141 ವರ್ಷಗಳ ಪವಿತ್ರ ಪಕ್ಷ ಕಾಂಗ್ರೆಸ್. ಇದರ ಜವಾಬ್ದಾರಿ ವಹಿಸಿಕೊಳ್ಳಲು ಕಾರಣ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ವೇಣುಗೋಪಾಲ ಸುರ್ಜೆವಾಲಾ. ಇವರಿಗೆಲ್ಲ ಶತಕೋಟಿ ನಮಸ್ಕಾರ. ಇದು ಪವಿತ್ರವಾದ ಪಕ್ಷ, ಇದು ದೇವಸ್ಥಾನದಲ್ಲೋ ಮಸೀದಿಯಲ್ಲೋ, ಚರ್ಚಿನಲ್ಲೋ ಇಲ್ಲ. ಬ್ರಿಟಿಷರ ಕೆಳಗಡೆ ಗುಲಾಮಗಿರಿ ಇದ್ದಾಗ ಹೋರಾಟ ಮಾಡಿದ ಪಕ್ಷ ಕಾಂಗ್ರೆಸ್ ಹಲವು ಧರ್ಮಗಳು ಇರುವ ಬಹುತ್ವದ ರಾಷ್ಟ್ರ ಇದು. ಮಹಾತ್ಮಾ ಗಾಂಧಿ ಪರಿಕಲ್ಪನೆಯ ಅಡಿಯಲ್ಲಿ ನಿರ್ಮಾಣವಾದ ರಾಷ್ಟ್ರ ಇದು. ಇದಕ್ಕಾಗಿಯೇ ಪವಿತ್ರವಾದ ಪಕ್ಷ. ನಮ್ಮ ಜಾತಿ ಕಾಂಗ್ರೆಸ್, ನಮ್ಮ ಧರ್ಮ ಸಂವಿಧಾನ ಎಂದು ಹೇಳಿದರು.
ಸಂಕಲ್ಪ ಸಮಾವೇಶದಲ್ಲಿ ನಮ್ಮ ಮುಂದೆ ದೊಡ್ಡ ಸವಾಲಿದೆ. 2028-2029ರ ಚುನಾವಣೆ ಇದೆ. ಸ್ವಾತಂತ್ರ‍್ಯ ಹೋರಾಟದ ಪರಂಪರೆ ಇರುವ ಪಕ್ಷ ಕಾಂಗ್ರೆಸ್. ಸ್ವಾತಂತ್ರ‍್ಯ ಹೋರಾಟದಲ್ಲಿ ಯಾವುದೇ ಕೊಡುಗೆ ಇಲ್ಲದ ಬಿಜೆಪಿ ಆರ್‌ಎಸ್‌ಎಸ್. ಇವರು ನಮ್ಮ ಮುಂದೆ ದೊಡ್ಡ ಸವಾಲನ್ನೇ ತಂದಿಟ್ಟಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ಆಯುಧಗಳಾಗಿ ಮಾಡಿಕೊಂಡಿದ್ದಾರೆ. ತ್ರಿವರ್ಣ ಧ್ವಜದ ವಿರುದ್ಧ ಇದ್ದವರು ವಾಮ ಮಾರ್ಗದ ಮೂಲಕ ಅಧಿಕಾರ ಹಿಡಿದು, ಸಂವಿಧಾನವನ್ನೇ ಮುಗಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಈ ವರ್ಷದಿಂದಲೇ ವಿದ್ಯಾರ್ಥಿ ಚುನಾವಣೆ ಆರಂಭಿಸುತ್ತೇವೆ: ಡಿ.ಕೆ ಶಿವಕುಮಾರ್
ನಾವೇನಾದರೂ ಸ್ವಲ್ಪ ಎಚ್ಚರ ತಪ್ಪಿದರೆ, ಪೂರ್ವಜರು ತಂದುಕೊಟ್ಟ ಸ್ವಾತಂತ್ರ‍್ಯವನ್ನೇ ನಿರ್ನಾಮ ಮಾಡಲು ಕಾಯುತ್ತಿದ್ದಾರೆ. ಗೋಡ್ಸೆ ಒಬ್ಬ ಭಯೋತ್ಪಾದಕ, ಕೊಲೆಗಾರ ಅಂತ ಇದುವರೆಗೆ ಬಿಜೆಪಿ ಹೇಳಿಲ್ಲ ಎಂದು ಹರಿಹಾಯ್ದರು.
