Connect with us

Districts

ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿಯ ಅದ್ಧೂರಿ ಕಲ್ಯಾಣೋತ್ಸವ

Published

on

ಕೋಲಾರ: ಸಿಂಹಾಚಲಂನಿಂದ ಬಂದಿದ್ದ ವರಹಲಕ್ಷ್ಮಿನರಸಿಂಹಸ್ವಾಮಿ ಕಲ್ಯಾಣೋತ್ಸವ ಕೋಲಾರದ ಶ್ರೀನಿವಾಸಪುರದಲ್ಲಿ ಅದ್ಧೂರಿಯಾಗಿ ನಡೆಯಿತು.

ಶ್ರೀನಿವಾಸಪುರದ ಜನ್ಮ ಭೂಮಿ ವೇದಿಕೆ ವತಿಯಿಂದ ಆಯೋಜನೆ ಮಾಡಲಾಗಿದ್ದ ಕಲ್ಯಾಣೊತ್ಸವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಮೂಲೆ-ಮೂಲೆಗಳಿಂದ ಸಾವಿರಾರು ಸಂಖ್ಯೆಯ ಭಕ್ತರ ದಂಡು ಆಗಮಿಸಿತ್ತು.

ಕಲ್ಯಾಣೋತ್ಸವ ಕೊನೆಯ ದಿನದ ಕಾರ್ಯಕ್ರಮ ಅಂಗವಾಗಿ ಸಿಂಹಾಚಲಂ ವರಹಲಕ್ಷ್ಮೀನರಸಿಂಹಸ್ವಾಮಿ ಕಲ್ಯಾಣೋತ್ಸವವನ್ನು ಅತ್ಯಂತ ವೈಭವೋಪೇತವಾಗಿ ನೆರವೇರಿಸಲಾಯಿತು. ತೆಲಂಗಾಣ ರಾಜ್ಯದ ವಿಶಾಖಪಟ್ಟಣಂ ಜಿಲ್ಲೆಯ ವೈಷ್ಣವ ಪುಣ್ಯ ಕ್ಷೇತ್ರ ಸಿಂಹಾಚಲ ಬೆಟ್ಟದ ಮೇಲಿರುವ ಶ್ರೀವರಹಲಕ್ಷ್ಮೀನರಸಿಂಹಸ್ವಾಮಿ ದೇವಾಲಯವು ಅತಿ ವಿಶೇಷವಾದದ್ದು, ಅಲ್ಲಿಂದಲೇ ಆಗಮಿಸಿದ ಆಗಮಿಕರು ವೇದ-ಮಂತ್ರ ಘೋಷಗಳೊಂದಿಗೆ ಮಂಗಳ ವಾದ್ಯಗಳ ಜೊತೆಗೆ ವರಹ ಲಕ್ಷ್ಮೀನರಸಿಂಹ ಸ್ವಾಮಿಗೆ ನೂತನ ಯಜ್ನೋಪವಿತ ಧಾರಣೆ ಮಾಡಿದರು.

ಗೋತ್ರ ಪ್ರವರಗಳ ಮುಖೇನ ಮಂತ್ರ ಘೋಷಗಳ ನಡುವೆ ಸ್ವಾಮಿಗೆ ನೂತನ ವಸ್ತ್ರಾಭರಣಗಳನ್ನು ಹಾಕಿ ಆಲಂಕಾರ ಮಾಡಲಾಯಿತು. ನಂತರ ಕನ್ಯಾದಾನ, ಮಾಂಗಲ್ಯ ಧಾರಣೆ, ಮಹೂರ್ತಗಳನ್ನ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಕೋಲಾರದಲ್ಲಿ ಉತ್ತಮವಾದ ಮಳೆ- ಬೆಳೆ ಆಗಿಲ್ಲ. ಬರಗಾಲದ ಛಾಯೆ ಆವರಿಸಿದ್ದು, ಕೆರೆಗಳು ತುಂಬಿ ಹರಿಯಲಿ ಎಂದು ಧಾರ್ಮಿಕ ಕಾರ್ಯಕ್ರಮ ನೆರವೇರಿಸೋದರ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಬೇಡಿಕೊಳ್ಳಲಾಯಿತು.

ಒಟ್ಟಿನಲ್ಲಿ ಕೋಲಾರ ಜಿಲ್ಲೆಯ ಮಾವಿನ ಮಡಿಲು ಶ್ರೀನಿವಾಸಪುರ ಇಂದು ನರಸಿಂಹಸ್ವಾಮಿಯ ಭಕ್ತಿಯಲ್ಲಿ ಮಿಂದೆದ್ದಿತ್ತು. ಉತ್ತಮ ಮಳೆ ಬೆಳೆಯಾಗಲೀ ಜನರು ಸಮೃದ್ಧಿಯಾಗಿರಲೆಂದು ಬಂದಿದ್ದ ಜನರು ಪ್ರಾರ್ಥಿಸಿದರು. ಈ ಮೂಲಕ ಜನರು ಭಕ್ತಿಯಲ್ಲಿ ಮಿಂದೆದ್ದು ದೇವರ ಕೃಪೆಗೆ ಪಾತ್ರರಾದರು.