– ಹೈಕಮಾಂಡ್ ನಿರ್ಧಾರ ನನಗೆ ಬಹಳ ಮುಖ್ಯ ಎಂದ ಸಿದ್ದರಾಮಯ್ಯ
ಕೋಲಾರ: ನಗರದಲ್ಲಿ ಶನಿವಾರ ನಡೆದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮತ್ತೆ ʻಮುಂದಿನ ಸಿಎಂ ಸಿದ್ದರಾಮಯ್ಯʼ, ʻಕೋಲಾರ ಶಾಸಕ ಸಿದ್ದರಾಮಯ್ಯʼ ಎಂಬ ಘೋಷಣೆಗಳು ಕೇಳಿಬಂದಿವೆ.
ಏಪ್ರಿಲ್ 9ರಂದು ಕೋಲಾರದಲ್ಲಿ ನಡೆಯಲಿರುವ ಸತ್ಯಮೇವ ಜಯತೆ ಕಾರ್ಯಕ್ರಮದ ಕುರಿತು ಮುಖಂಡರ ಜೊತೆ ಇಲ್ಲಿನ ಖಾಸಗಿ ಭವನದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಗೆ ರಾಜ್ಯ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸುರ್ಜೆವಾಲಾ (Randeep Surjewala), ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದರು. ಸಭೆಗೆ ಹಾಜರಾಗುತ್ತಿದ್ದಂತೆ ಕಾರ್ಯಕರ್ತರು ಮುಂದಿನ ʻಸಿಎಂ ಮತ್ತು ಕೋಲಾರದ ಶಾಸಕ ಸಿದ್ದರಾಮಯ್ಯʼ ಎಂದು ಘೋಷಣೆ ಕೂಗಿದರು, ಸಿದ್ದು ಸಿದ್ದು ಎಂದು ಜೈಕಾರ ಹಾಕುತ್ತಾ, ಸುರ್ಜೆವಾಲಾ ಅವರ ಭಾಷಣಕ್ಕೂ ಅಡ್ಡಿಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ರೆಡ್ ಸಿಗ್ನಲ್ – ಕೋಲಾರ ಕಾಂಗ್ರೆಸ್‌ನಲ್ಲಿ ಮತ್ತೆ ಆರಂಭವಾಯ್ತು ಗುಂಪುಗಾರಿಕೆ
ಕೊನೆಗೆ ಸಿದ್ದರಾಮಯ್ಯ (Siddaramaiah) ಅವರೇ ಸ್ವತಃ ಮೈಕ್ ಹಿಡಿದು, ಸಭೆಯ ಗೌರವ ಕಾಪಾಡಿ, ಸುರ್ಜೆವಾಲಾ ಅವರ ಭಾಷಣಕ್ಕೆ ಅನುವು ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು. ಇದಕ್ಕೂ ಕಾರ್ಯಕರ್ತರು ಜಗ್ಗದೇ ಇದ್ದಾಗ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. ವರುಣಾ ಮತ್ತು ಕೋಲಾರ ಕ್ಷೇತ್ರಗಳಿಂದ ಸ್ಪರ್ಧೆ ಮಾಡಲು ಮಾನಸಿಕವಾಗಿ ಸಿದ್ದನಿದ್ದೇನೆ. ಆದ್ರೆ ಕೋಲಾರದ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ ಎನ್ನುವ ಮೂಲಕ ಹೈಕಮಾಂಡ್‌ನತ್ತ ಬೊಟ್ಟು ತೋರಿಸಿ, ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಇದನ್ನೂ ಓದಿ: ಆಗ ಭಾಷಣ ಮಾಡಿದ್ದಕ್ಕೆ ಅನರ್ಹತೆ; ಈಗ ಸತ್ಯಮೇವ ಜಯತೆ – ಸಂಸದ ಸ್ಥಾನ ಕಸಿದುಕೊಂಡ ಕೋಲಾರಕ್ಕೆ ಮತ್ತೆ ರಾಗಾ
ನಂತರ ಭಾಷಣ ಮಾಡಿದ ಸಿದ್ದರಾಮಯ್ಯ ಅವರು, ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿರುವ ಸಂದರ್ಭದಲ್ಲಿ ದೇಶವನ್ನ ಉಳಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ಸಿಗರ ಮೇಲಿದೆ. ರಾಹುಲ್ ಗಾಂಧಿ (Rahul Gandhi) ಅವರು ಸ್ವಾರ್ಥಕ್ಕಾಗಿ ಹೋರಾಟ ಮಾಡುತ್ತಿಲ್ಲ. ದೇಶದ ಜನತೆಯ ನೆಮ್ಮದಿ, ಐಕ್ಯತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಆದ್ರೆ ಬಿಜೆಪಿ ತನ್ನ ದ್ವೇಷದ ಹಾಗೂ ಸೇಡಿನ ರಾಜಕಾರಣದಿಂದ ದೇಶದಲ್ಲಿ ಸಾಮರಸ್ಯ ಹಾಳು ಮಾಡುತ್ತಿದೆ. ರಾಹುಲ್ ಸದಸ್ಯತ್ವ ರದ್ದು ಮಾಡಿದ್ದು ಸಹ ಬೇರೆಯವರಿಗೆ ಹೆದರಿಕೆ ಉಂಟಾಗಲಿ ಎನ್ನುವ ಕಾರಣಕ್ಕೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದ ಜನರ ಸಂಪತ್ತನ್ನ ಕೊಳ್ಳೆ ಹೊಡೆದುಕೊಂಡು ಹೋದವರ ಬಗ್ಗೆ ರಾಹುಲ್ ಮಾತನಾಡಿದ್ದು ತಪ್ಪಾ? 2019ರ ಲೋಕಸಭೆ ಚುನಾವಣೆಯಲ್ಲಿ ಅಂದು ನಾನು ಸಹ ಬಂದಿದ್ದೇ ಕಳ್ಳರನ್ನ ಕಳ್ಳರು ಅಂದರೆ ಅದು ತಪ್ಪಾ? ಕಳ್ಳರನ್ನ ಕಳ್ಳ ಎನ್ನದೇ ಸಾಚಾ ಅನ್ನೋಕೆ ಆಗುತ್ತಾ? ಎಂದು ಕಿಡಿ ಕಾರಿದರು.