– ಆರೋಗ್ಯ ಸೌಧದಲ್ಲಿ ಸಚಿವ ಯು.ಟಿ ಖಾದರ್ ನೇತೃತ್ವದಲ್ಲಿ ಸಂವಾದ
– ʻಋತುತಾರೆ/ಋತುಬಂಧʼ ಮಹಿಳಾ ಆರೋಗ್ಯ ನೀತಿ ರೂಪಿಸಲು ಸರ್ಕಾರ ಚಿಂತನೆ
ಬೆಂಗಳೂರು: ಇತ್ತೀಚೆಗೆ ಮಹಿಳೆಯರಲ್ಲಿ (Womens) ಹೆಚ್ಚುತ್ತಿರುವ ಮೆನೋಪಾಸ್ (ಋತುಬಂಧ ಅಥವಾ ಮುಟ್ಟು ನಿಲ್ಲುವಿಕೆ) ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೌಧದಲ್ಲಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ, ವೈದ್ಯಕೀಯ ತಜ್ಞರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಸಮಗ್ರ ಚರ್ಚೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್ (UT Khader), ಮಹಿಳೆಯರ ಆರೋಗ್ಯಕ್ಕೆ ವಿಶೇಷ ಆದ್ಯತೆ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಮಹಿಳಾ ಆರೋಗ್ಯಕ್ಕೆ (Women Health) ಸಂಬಂಧಿಸಿದ 6 ವಿಶೇಷ ಯೋಜನೆಗಳನ್ನ ಜಾರಿಗೆ ತರಲು ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ಮಹಿಳೆಯರಿಗಾಗಿ ವಿಶೇಷ ಆರೋಗ್ಯ ನೀತಿ ರೂಪಿಸಲಾಗುತ್ತಿದ್ದು, ʻಋತುತಾರೆʼ ಅಥವಾ ʻಋತುಬಂಧʼ ಎಂಬ ಹೆಸರಿನ ಪಾಲಿಸಿಯನ್ನ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ನೀತಿಯಡಿ ಮಹಿಳೆಯರ ಜೀವನಶೈಲಿ, ಆಹಾರ ಪದ್ಧತಿ, ನಿದ್ರೆ ಸೇರಿದಂತೆ ವಿವಿಧ ಆರೋಗ್ಯ ಅಂಶಗಳ ಕುರಿತು ತಜ್ಞ ವೈದ್ಯರ ಮಾರ್ಗದರ್ಶನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ನೀತಿ ರೂಪಿಸಲು ಡಾ. ಜೋತ್ಸ್ನಾ ಅವರ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಲಾಗುತ್ತಿದ್ದು, ನಟಿ ರಮ್ಯಾ ಅವರನ್ನು ಯೋಜನೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗುವುದು. ಜೊತೆಗೆ, ಈ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ತಜ್ಞರಿಗೆ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಆಶಾ ಕಾರ್ಯಕರ್ತರ ಮೂಲಕ ರಾಜ್ಯಾದ್ಯಂತ ಮನೆ-ಮನೆ ಸಮೀಕ್ಷೆ ನಡೆಸಿ, ಮಹಿಳೆಯರಲ್ಲಿ ಮೆನೋಪಾಸ್ ಸ್ಥಿತಿ, ಅದರ ಲಕ್ಷಣಗಳು ಹಾಗೂ ಸಂಬಂಧಿತ ಆರೋಗ್ಯ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಸಮೀಕ್ಷೆಯ ಆಧಾರದ ಮೇಲೆ ಸಮಿತಿ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಖಾದರ್ ಹೇಳಿದರು.
ಸಭೆಯಲ್ಲಿ ಮಾತನಾಡಿದ ಡಾ. ಜೋತ್ಸ್ನಾ, ಮಹಿಳೆಯರಲ್ಲಿ ಯಾವ ವಯಸ್ಸಿನಲ್ಲಿ ಋತುಬಂಧ ಸಂಭವಿಸುತ್ತಿದೆ, ಅದು ಸಹಜವಾಗಿದೆಯೇ ಅಥವಾ ಶಸ್ತ್ರಚಿಕಿತ್ಸೆಯಿಂದ ಉಂಟಾಗಿದೆಯೇ ಎಂಬುದನ್ನ ಅಧ್ಯಯನ ಮಾಡಲಾಗುತ್ತದೆ. ಸಮಯಕ್ಕೆ ಸರಿಯಾಗಿ ಮೆನೋಪಾಸ್ ಆಗದಿದ್ದರೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅತಿಯಾದ ಒತ್ತಡದ ಜೀವನಶೈಲಿ, ಜಂಕ್ ಫುಡ್ ಸೇವನೆ, ಅತಿಯಾದ ರಕ್ತಸ್ರಾವ ಸೇರಿದಂತೆ ಹಲವು ಕಾರಣಗಳಿಂದ ಮಹಿಳೆಯರಲ್ಲಿ ಸಮಸ್ಯೆಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.

ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಮಾತನಾಡಿ, ಮೆನೋಪಾಸ್ ಕುರಿತು ಸಮಾಜದಲ್ಲಿ ಇನ್ನೂ ಸಾಕಷ್ಟು ಜಾಗೃತಿ ಕೊರತೆಯಿದೆ. ಇದೇ ಕಾರಣದಿಂದ ಅನೇಕ ಮಹಿಳೆಯರು ವಿವಿಧ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಈ ಕುರಿತು ಮನವಿ ಸಲ್ಲಿಸಲು ಬಂದಿದ್ದ ನನಗೇ ಸರ್ಕಾರ ಬ್ರ್ಯಾಂಡ್ ಅಂಬಾಸಿಡರ್ ಜವಾಬ್ದಾರಿ ನೀಡಿರುವುದು ಸಂತಸದ ವಿಷಯ ಎಂದು ಹೇಳಿದರು.
ಇದೇ ವೇಳೆ ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಿದ್ದು, ಕನಿಷ್ಠ ಎರಡು ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು ಎಂಬುದು ತಮ್ಮ ವೈಯಕ್ತಿಕ ಅಭಿಪ್ರಾಯ ಎಂದು ರಮ್ಯಾ ತಿಳಿಸಿದರು.
