ನವದೆಹಲಿ: ಏಳು ವರ್ಷಗಳ ದೀರ್ಘ ಕಾಲದ ನಂತರ ಕೈಲಾಸ – ಮಾನಸ ಸರೋವರ ಯಾತ್ರೆಯು (Kailash – Manasarovar Yatra) ಇಂದು ಪುನರಾರಂಭಗೊಂಡಿದೆ. ಸಿಕ್ಕಿಂನ ನಾಥು ಲಾ ಗಿರಿಕಣಿವೆಯಿಂದ ಯಾತ್ರಾರ್ಥಿಗಳ ಮೊದಲ ತಂಡವು ತನ್ನ ಪವಿತ್ರ ಆಧ್ಯಾತ್ಮಿಕ ಪ್ರಯಾಣವನ್ನು ಪ್ರಾರಂಭಿಸಿದೆ.
ಈ ವರ್ಷ ಒಟ್ಟು 500 ಯಾತ್ರಾರ್ಥಿಗಳು 10 ತಂಡಗಳಲ್ಲಿ ವಿಭಜಿಸಿ, ಪವಿತ್ರ ಕೈಲಾಸ ಪರ್ವತ ಮತ್ತು ಮಾನಸ ಸರೋವರದ ದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಪ್ರತಿ ತಂಡದಲ್ಲಿ 50 ಯಾತ್ರಾರ್ಥಿಗಳಿರುತ್ತಾರೆ. ಪ್ರತಿ ತಂಡಕ್ಕೆ ಒಬ್ಬ ಸಂಪರ್ಕಾಧಿಕಾರಿ ಮತ್ತು ಒಬ್ಬ ವೈದ್ಯಕೀಯ ಸಹಾಯಕರನ್ನು ನಿಯೋಜಿಸಲಾಗಿದೆ. ಭಾರತ ಮತ್ತು ಚೀನಾ ಸರ್ಕಾರಗಳ ಸಮನ್ವಯದಲ್ಲಿ ವಿದೇಶಾಂಗ ಸಚಿವಾಲಯವು ಈ ಯಾತ್ರೆಯನ್ನು ಆಯೋಜಿಸಿದೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣದಲ್ಲಿ ಬ್ಯಾಂಕ್ ನೌಕರರ ಪಾತ್ರ ಗಂಭೀರ – ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಆರೋಪ
ಯಾತ್ರೆಗೆ ಮುನ್ನ ಚೀನಾದಲ್ಲಿ ಭಾರತದ ರಾಯಭಾರಿ ವಿಕ್ರಮ್ ದೋರೈಸ್ವಾಮಿ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿ, ಯಾತ್ರಾರ್ಥಿಗಳನ್ನು ಸ್ವಾಗತಿಸಿದ್ದಾರೆ. ನಾಥು ಲಾ ಮಾರ್ಗದ ಮೂಲಕ ಬರುವ ಯಾತ್ರಾರ್ಥಿಗಳನ್ನು ಚೀನಾ ಗಡಿ ಸುಂಕ ಮತ್ತು ಇಮ್ಮಿಗ್ರೇಷನ್ ಅಧಿಕಾರಿಗಳು ಸ್ವಾಗತಿಸುತ್ತಾರೆ. ನಂತರ ಬಸ್‌ನಲ್ಲಿ ಅವರನ್ನು ಯಾಡಾಂಗ್ ಕೌಂಟಿಗೆ ಕರೆದೊಯ್ಯಲಾಗುತ್ತದೆ.
The #KailashManasarovarYatra2026, organised by the Ministry of External Affairs in coordination with the Government of the People’s Republic of China, departs Indian territory on 20 June. The Embassy team warmly welcomes all pilgrims travelling to the holy Mt Kailash and sacred… pic.twitter.com/cuJmhwzVJq
— India in China (@EOIBeijing) June 19, 2026
ತಂಗುವಿಕೆ, ಊಟ ಮತ್ತು ಕರೆನ್ಸಿ ವಿನಿಮಯ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ರಾಯಭಾರಿ ಮತ್ತು ಅವರ ತಂಡವು ಇತ್ತೀಚೆಗೆ ಸಿಕ್ಕಿಂ ಮತ್ತು ಉತ್ತರಾಖಂಡ್‌ನಿಂದ ಟಿಬೆಟ್‌ಗೆ ಹೋಗುವ ಮಾರ್ಗಗಳ ಪ್ರಮುಖ ಸ್ಥಳಗಳನ್ನು ಸಂದರ್ಶಿಸಿ, ಲಾಜಿಸ್ಟಿಕ್ ಮತ್ತು ಆಡಳಿತಾತ್ಮಕ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾತ್ರಾರ್ಥಿಗಳಿಗೆ ಹೆಚ್ಚುವರಿ ವೀಡಿಯೋಗಳು ಮತ್ತು ಸಲಹೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಹಿಂದೂ, ಬೌದ್ಧ, ಜೈನ ಮತ್ತು ಬೋನ್ ಧರ್ಮಗಳ (ಟಿಬೆಟ್‌ನ ಸ್ಥಳೀಯ ಧರ್ಮ) ಅನುಯಾಯಿಗಳಿಗೆ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಅತ್ಯಂತ ಪವಿತ್ರ ಸ್ಥಳಗಳು. ಭಗವಾನ್ ಶಿವನ ನಿವಾಸಸ್ಥಾನ ಎಂದು ನಂಬಲಾಗಿರುವ ಕೈಲಾಸ ಮತ್ತು ವಿಶ್ವದ ಅತ್ಯಂತ ಪವಿತ್ರ ಸರೋವರಗಳಲ್ಲಿ ಒಂದಾದ ಮಾನಸ ಸರೋವರನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಾರೆ. ಈ ಯಾತ್ರೆಯು ಆಧ್ಯಾತ್ಮಿಕತೆ, ಸಹನೆ ಮತ್ತು ಭಕ್ತಿಯ ಸಂಕೇತವಾಗಿದೆ. ಯಾತ್ರಾರ್ಥಿಗಳಿಗೆ ಸುರಕ್ಷಿತ, ಸಂತೋಷಕರ ಮತ್ತು ಆಧ್ಯಾತ್ಮಿಕವಾಗಿ ಸಮೃದ್ಧವಾದ ಪ್ರಯಾಣವಾಗಲಿ ಎಂದು ಭಾರತೀಯ ರಾಯಭಾರ ಕಚೇರಿ ಶುಭಾಶಯ ವ್ಯಕ್ತಪಡಿಸಿದೆ.ಇದನ್ನೂ ಓದಿ: ನಾಯಿ ಗೂಡಲ್ಲಿ ಲಾಕ್ ಆಗಿದ್ದ ಚಿರತೆ ಸೆರೆ – ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
