ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವೇ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ಮಾಡಲು ಸಾಧ್ಯವೇ ಇಲ್ಲ. ರಾಜ್ಯದ ಅಧ್ಯಕ್ಷರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮಂತ್ರಿ ಮಂಡಲದ ಬಗ್ಗೆ ಚರ್ಚೆ ಮಾಡುತ್ತಾರೆ ಅಂದರೆ 4 ಸ್ಥಾನ ಖಾಲಿ ಇದೆ. ಆದರೆ ರಾಜ್ಯದ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಹೀಗಾಗಿ ಬದಲಾವಣೆ ಮಾಡುವ ಪ್ರಶ್ನೆ ಉದ್ಭವ ಆಗುವುದಿಲ್ಲ. ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷರಾದ ನಂತರ ಎಲ್ಲಾ ಚುನಾವಣೆ ಗೆದ್ದುಕೊಂಡು ಬಂದಿದ್ದು, ಉಪ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದರು.
Advertisement
Advertisement
ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿದಿದ್ದೇವೆ. ಎಂಎಲ್‍ಸಿ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದು, ವಿಧಾನ ಪರಿಷತ್ ನಲ್ಲಿ ಬಹುಮತ ಪಡೆದಿದ್ದೇವೆ. ನಳಿನ್ ಕುಮಾರ್ ಕಟೀಲ್ ಅವರು ಸಂಘಟನಾ ಚತುರರು. ಕಟೀಲ್ ಅವರು ಅಧ್ಯಕ್ಷರಾಗಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ಬದಲಾವಣೆ ಮಾಡುವ ಪ್ರಶ್ನೆ ಉದ್ಭವವಾಗುವುದಿಲ್ಲ. ನಾನು ಸಹ ಪಕ್ಷ ಏನು ಜವಾಬ್ದಾರಿ ಕೊಡುತ್ತದೋ ಅದನ್ನು ಮುಂಚಿನಿಂದಲೂ ಮಾಡಿಕೊಂಡು ಬಂದಿದ್ದೇನೆ ಎಂದು ನುಡಿದರು. ಇದನ್ನೂ ಓದಿ: ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ
Advertisement
ಮಂತ್ರಿ ಆಗು ಅಂದಾಗ ಮಂತ್ರಿ ಆಗಿದ್ದೇನೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷದ ಅಧ್ಯಕ್ಷನಾಗು ಅಂದಾಗ, ಅಧ್ಯಕ್ಷ ಸಹ ಆಗಿದ್ದೇನೆ. ಕೇಂದ್ರದ ನಾಯಕರು, ರಾಜ್ಯದ ನಾಯಕರು, ಸಂಘ ಪರಿವಾರದ ನಾಯಕರು ಏನು ಸ್ಥಾನ ತೆಗೆದುಕೊಳ್ಳಬೇಕು ಅಂತಾರೋ ಅದಕ್ಕೆ ನಾನು ಸಿದ್ಧ. ಪಕ್ಷದ ಸಂಘಟನೆ ನೀಡಿದರೆ ಅದನ್ನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ಮಂತ್ರಿ ಸ್ಥಾನಕ್ಕಿಂತ ನನಗೆ ಪಕ್ಷದ ಸಂಘಟನೆ ಹೆಚ್ಚು ಖುಷಿ ನೀಡುತ್ತದೆ. ಮುಂದಿನ ವಿಧಾನಸಭೆ ಗೆಲ್ಲಬೇಕು, ಮುಂದಿನ ಬಾರಿ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕು. ದೇಶದಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರುವ ಜೊತೆಗೆ ಮೋದಿಯವರು ಪ್ರಧಾನಿ ಆಗಬೇಕು. ಮತ್ತೊಮ್ಮೆ ಮೋದಿ ಅವರು ಪ್ರಧಾನಿ ಆಗುವವರೆಗೂ ನಾವು ಬಿಡುವುದಿಲ್ಲ ಎಂದರು.
Advertisement
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯ ವೈಖರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಇಡೀ ರಾಜ್ಯವನ್ನು ಸುತ್ತಿ ಏನೇನು ಕೆಲಸ ಆಗಬೇಕಿತ್ತೋ ಅದೆಲ್ಲಾ ಚೆನ್ನಾಗಿ ಆಗುತ್ತಿದೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಪುಷ್ಪ ಸಿನಿಮಾ ನೋಡಿ 24 ವರ್ಷದ ಯುವಕನ ಬರ್ಬರ ಹತ್ಯೆ – ಮೂವರು ಅರೆಸ್ಟ್
ಶಾಲೆ ಆರಂಭ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾವ ಶಾಲೆಯಲ್ಲಿ ಕೋವಿಡ್ ಸಮಸ್ಯೆ ಇದೆಯೋ, ಆ ಶಾಲೆಯನ್ನು ನಡೆಸುವುದು ಬಿಡುವ ವಿಚಾರವನ್ನು ಅವರಿಗೆ ಬಿಟ್ಟಿದ್ದೇವೆ. ಮಕ್ಕಳಿಗೆ ಕೋವಿಡ್ ಜಾಸ್ತಿ ಇದ್ದರೆ, ರಜೆ ಘೋಷಿಸಬೇಕು ಅನಿಸಿದರೆ ಜಿಲ್ಲಾಧಿಕಾರಿ ಅವರ ಒಪ್ಪಿಗೆ ಪಡೆದು ರಜೆ ನೀಡಬೇಕು. ನಾವು ಶಾಲೆ ನಡೆಸುತ್ತೇವೆ ಅಂದರೆ ನಮ್ಮ ಅಭ್ಯಂತರ ಇಲ್ಲ. ಪೋಷಕರ ಒಪ್ಪಿಗೆ ಪಡೆದು ಶಾಲಾ ಆಡಳಿತ ಮಂಡಳಿ ಏನು ಬೇಕಾದರೂ ತೀರ್ಮಾನ ಮಾಡುವ ಅವಕಾಶ ಅವರಿಗೆ ಕೊಟ್ಟಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಕೋವಿಡ್ ಸಮಸ್ಯೆ ಅಷ್ಟು ಇಲ್ಲ. ಅಧಿಕಾರಿಗಳು ಕೋವಿಡ್ ನಿರ್ವಹಣೆಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಸಚಿವ ಸಂಪುಟ ರಚನೆ ವಿಚಾರವಾಗಿ ಮಾತನಾಡಿ, ಆಕಾಂಕ್ಷಿಗಳು ಹೆಚ್ಚಾಗುವುದು ಸ್ವಾಭಾವಿಕವಾಗಿದೆ. ಹುದ್ದೆ ಇದೆ ಅಂದಾಕ್ಷಣ ರಾಜಕಾರಣದಲ್ಲಿ ಇರುವವರು ನಾನು ಮಂತ್ರಿ ಆಗಬೇಕು ಅಂತಾ ಯೋಚನೆ ಮಾಡೋದು ತಪ್ಪಲ್ಲ. ಎಂಎಲ್‍ಎ ಹಾಗೂ ಎಂಎಲ್‍ಸಿ ಇರಬಹುದು, ಯಾವುದೇ ರಾಜಕಾರಣಿ ನಾನು ಮಂತ್ರಿ ಆಗಬೇಕು ಅಂತಾ ಯೋಚನೆ ಮಾಡೋದು ತಪ್ಪಲ್ಲ. ಯಾರಿಗೆ ಮಂತ್ರಿ ಸ್ಥಾನಕ್ಕೆ ಕೇಂದ್ರದ ನಾಯಕರು ಆಯ್ಕೆ ಮಾಡುತ್ತಾರೋ ಅವರಿಗೆ ಉಳಿದವರು ಸಹಕಾರ ಕೊಡುತ್ತಾರೆ. ಇಲ್ಲಿಯವರೆಗೆ ಸಹ ಅದೇ ನಡೆದುಕೊಂಡು ಬಂದಿರುವುದು. ಹೀಗಾಗಿಯೇ ಸರ್ಕಾರ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ. ಉಳಿದ ವರ್ಷಗಳ ಅವಧಿಗೂ ಸಹ ಸರ್ಕಾರ ತುಂಬ ಚೆನ್ನಾಗಿ ನಡೆಯುತ್ತದೆ ಎಂದು ನುಡಿದರು.