ಉತ್ತರ ಕರ್ನಾಟಕದ ಜನಪದ ಸಂಪ್ರದಾಯದಲ್ಲಿ ಜೋಕುಮಾರಸ್ವಾಮಿ ಹಬ್ಬಕ್ಕೆ ಅತ್ಯಂತ ವಿಶಿಷ್ಟವಾದ ಸ್ಥಾನವಿದೆ. ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಭಾದ್ರಪದ ಮಾಸದ ಅಷ್ಟಮಿಯಂದು ಆರಂಭವಾಗುವ ಈ ಹಬ್ಬವನ್ನು ಪ್ರಮುಖವಾಗಿ “ಮಳೆ ಮತ್ತು ಸಮೃದ್ಧಿಯ ಹಬ್ಬ” ಎಂದು ಆಚರಿಸಲಾಗುತ್ತದೆ. ಹಳ್ಳಿಗರು ಈತನನ್ನು ಪ್ರೀತಿಯಿಂದ “ಬಡವರ ಗಣಪತಿ” ಎಂದೂ ಕರೆಯುತ್ತಾರೆ.
ಏನಿದರ ವಿಶೇಷತೆ?
ಜನಪದ ನಂಬಿಕೆಗಳ ಪ್ರಕಾರ, ಗಣೇಶನು ಭೂಲೋಕಕ್ಕೆ ಬಂದು ಮೋದಕ-ಕಡುಬುಗಳನ್ನು ಸವಿದು ಬೀಗುತ್ತಾ ಕೈಲಾಸಕ್ಕೆ ಮರಳಿ ಎಲ್ಲವೂ ಚೆನ್ನಾಗಿದೆ ಎಂದು ವರದಿ ಒಪ್ಪಿಸುತ್ತಾನೆ. ಆದರೆ ಜೋಕುಮಾರಸ್ವಾಮಿ ಹಾಗಲ್ಲ, ಅವನು ಗಣೇಶ ಹೋದ ನಂತರ ಧರೆಗೆ ಬಂದು, ಮನೆಮನೆಗೆ ಸುತ್ತಿ ಜನರ ಕಷ್ಟಕಾರ್ಪಣ್ಯಗಳನ್ನು, ಮಳೆ ಇಲ್ಲದೆ ಪ್ರಾಣಿ-ಪಕ್ಷಿ, ಬೆಳೆಗಳು ಪಡುತ್ತಿರುವ ಪಾಡನ್ನು ಕಣ್ಣಾರೆ ಕಂಡು ಶಿವನಿಗೆ ವರದಿ ಒಪ್ಪಿಸುತ್ತಾನೆ. ಈತ ಧರೆಗೆ ಬಂದ ಮೇಲೆಯೇ ಮಳೆರಾಯ ಕೃಪೆ ತೋರುತ್ತಾನೆ ಎಂಬುದು ರೈತಾಪಿ ವರ್ಗದ ನಂಬಿಕೆ. ಹೀಗಾಗಿ ಈ ಹಬ್ಬವನ್ನು ಮಳೆ ತರುವ ಜನಪದ ದೇವರು ಎಂದು ಕರೆಯುತ್ತಾರೆ.

ವಿಶಿಷ್ಟ ಮೂರ್ತಿ ಮತ್ತು ಮೆರವಣಿಗೆ:
ಜೋಕುಮಾರನ ಮೂರ್ತಿಯನ್ನು ಮಣ್ಣು ಮತ್ತು ಎಣ್ಣೆಯಿಂದ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಬೇವಿನ ಎಲೆಗಳ ಉಡುಗೆ ತೊಡಿಸಿ, ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ಹಣೆ ತುಂಬಾ ಕುಂಕುಮ, ಕೈಯಲ್ಲಿ ಖಡ್ಗ ಹಿಡಿದ ವೀರನ ರೂಪ ಈತನದ್ದು.
ಬೆಸ್ತ ಹಾಗೂ ಕಬ್ಬಲಿಗ ಸಮುದಾಯದ ಮಹಿಳೆಯರು ಈ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡರೆ, ಪುರುಷರು ಜಂಟಿಯಾಗಿ ಹಳ್ಳಿಗಳ ಗಲ್ಲಿ-ಗಲ್ಲಿಗಳಲ್ಲಿ, ಮನೆಮನೆಗೆ ಮೆರವಣಿಗೆ ಮಾಡುತ್ತಾರೆ. ಜೋಕುಮಾರನನ್ನು ಹೊತ್ತ ಮಹಿಳೆಯರು ಮನೆ ಮುಂದೆ ಬಂದಾಗ, ಗೃಹಿಣಿಯರು ಆತನಿಗೆ ಬೆಣ್ಣೆ, ಉಪ್ಪು, ಹುಣಸೆಹಣ್ಣು, ಮೆಣಸಿನಕಾಯಿ, ಅಕ್ಕಿ, ಜೋಳ ಹಾಗೂ ಬಟ್ಟೆಯನ್ನು ದಾನವಾಗಿ ನೀಡುತ್ತಾರೆ.
ಮನೆಮನೆಗೆ ತೆರಳಿದಾಗ ಭಕ್ತರು ನೀಡುವ ಜೋಳಕ್ಕೆ ಪ್ರತಿಯಾಗಿ, ಜೋಕುಮಾರನ ಅರ್ಚಕರು ಕರಿಮಸಿ ಬೆರೆತ ಬೇವಿನ ಸೊಪ್ಪು ಮತ್ತು ಜೋಳವನ್ನು ಪ್ರಸಾದವಾಗಿ ನೀಡುತ್ತಾರೆ. ರೈತರು ಇದನ್ನು ಮರುದಿನ ಬೆಳಗಿನ ಜಾವವೇ ತಮ್ಮ ಹೊಲಗಳಿಗೆ ಕೊಂಡೊಯ್ದು, ಮಜ್ಜಿಗೆಯೊಂದಿಗೆ ಬೆರೆಸಿ ‘ಚರಗ’ ಚೆಲ್ಲುತ್ತಾರೆ. ಹೀಗೆ ಮಾಡುವುದರಿಂದ ಬೆಳೆಗಳಿಗೆ ಯಾವುದೇ ರೋಗ ಬಾರದೆ, ಸಮೃದ್ಧವಾಗಿ ಇಳುವರಿ ಬರುತ್ತದೆ ಎಂಬ ನಂಬಿಕೆ ಇದೆ.

‘ಚರಗ’ ಎಂಬುದು ಉತ್ತರ ಕರ್ನಾಟಕದ ಕೃಷಿ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಹಾಗೂ ವಿಶಿಷ್ಟವಾದ ಒಂದು ಆಚರಣೆಯಾಗಿದೆ. ಸರಳವಾಗಿ ಹೇಳಬೇಕೆಂದರೆ, ಭೂಮಿ ತಾಯಿಗೆ ಅರ್ಪಿಸುವ ವಿಶೇಷ ಪ್ರಸಾದ ಅಥವಾ ನೈವೇದ್ಯವನ್ನೇ ಚರಗ ಎನ್ನಲಾಗುತ್ತದೆ. ಮುಖ್ಯವಾಗಿ ಮಳೆಗಾಲದ ಆರಂಭದಲ್ಲಿ ಅಥವಾ ಬೆಳೆಗಳು ಕೈಗೆ ಬರುವ ಮುನ್ನ ಜೋಕುಮಾರಸ್ವಾಮಿ ಹಬ್ಬದ ಸಂದರ್ಭದಲ್ಲಿ ಹೊಲಗಳಿಗೆ ಚರಗ ಚೆಲ್ಲುವ ಸಂಪ್ರದಾಯವಿದೆ.
ಚರಗವನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?
ಹಬ್ಬದ ದಿನದಂದು ಮನೆಯಲ್ಲಿ ತಯಾರಿಸಿದ ಕಟುಕು ರೊಟ್ಟಿ, ಪುಂಡಿಪಲ್ಯ, ತರಕಾರಿ ಪಲ್ಯಗಳು, ಅನ್ನ (ನುಚ್ಚು) ಮತ್ತು ಮೊಸರು/ಮಜ್ಜಿಗೆಯನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಲಾಗುತ್ತದೆ. ಜೋಕುಮಾರಸ್ವಾಮಿ ಹಬ್ಬದ ಸಂದರ್ಭದಲ್ಲಾದರೆ, ಮನೆಗೆ ಬಂದ ಜೋಕುಮಾರನ ಮೂರ್ತಿಯಿಂದ ಪಡೆದ ಬೇವಿನ ಸೊಪ್ಪು ಮತ್ತು ಕರಿಮಸಿಯ ಪ್ರಸಾದವನ್ನು ಇದಕ್ಕೆ ಬೆರೆಸಲಾಗುತ್ತದೆ.
ಚರಗ ಚೆಲ್ಲುವ ವಿಧಾನ;
ರೈತರು ಈ ಕಲಸಿದ ಅನ್ನದ ಮಿಶ್ರಣವನ್ನು (ಚರಗವನ್ನು) ಬುಟ್ಟಿಯಲ್ಲಿ ಅಥವಾ ಮಡಕೆಯಲ್ಲಿ ಇಟ್ಟುಕೊಂಡು, ಮರುದಿನ ಬೆಳಗಿನ ಜಾವವೇ ತಮ್ಮ ಹೊಲಗಳಿಗೆ ಕೊಂಡೊಯ್ಯುತ್ತಾರೆ. ಹೊಲದ ನಾಲ್ಕೂ ಮೂಲೆಗಳಲ್ಲಿ ಹಾಗೂ ಬೆಳೆಗಳ ಮಧ್ಯೆ ಅನ್ನವನ್ನು ಎಲ್ಲೆಡೆ ಉದುರಿಸುತ್ತಾರೆ.

ನಂಬಿಕೆ ಮತ್ತು ಮಹತ್ವ;
ತಮಗೆ ಅನ್ನ ನೀಡುವ ಭೂಮಿ ತಾಯಿಗೂ ಹೊಟ್ಟೆ ತುಂಬ ಉಣಿಸಬೇಕು ಎಂಬ ಭಾವ ಇದರ ಹಿಂದಿದೆ. ಹೀಗೆ ಚರಗ ಚೆಲ್ಲುವುದರಿಂದ ಹೊಲಕ್ಕೆ ಯಾವುದೇ ದೃಷ್ಟಿ ತಗುಲುವುದಿಲ್ಲ, ಕ್ರಿಮಿಕೀಟಗಳ ಬಾಧೆ ಇರುವುದಿಲ್ಲ ಮತ್ತು ಬೆಳೆಗಳು ಸಮೃದ್ಧವಾಗಿ ಬೆಳೆಯುತ್ತವೆ ಎಂಬುದು ರೈತರ ನಂಬಿಕೆ.
ವೈಜ್ಞಾನಿಕವಾಗಿ ಅಥವಾ ಪ್ರಕೃತಿಯ ದೃಷ್ಟಿಯಿಂದ ನೋಡುವುದಾದರೆ, ಹೊಲದಲ್ಲಿ ಚೆಲ್ಲಿದ ಅನ್ನವನ್ನು ತಿನ್ನಲು ಹಕ್ಕಿ-ಪಕ್ಷಿಗಳು ಹಾಗೂ ಸಣ್ಣ ಪುಟ್ಟ ಜೀವಿಗಳು ಬರುತ್ತವೆ. ಅವು ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ತಿಂದು ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ.
ಹಿಂದೂ ಧರ್ಮದ ವೈದಿಕ, ಪುರಾಣ ಹಾಗೂ ಶಾಸ್ತ್ರೋಕ್ತ ಸಂಪ್ರದಾಯಗಳಿಗೆ ಒಳಪಟ್ಟಿರುವ, ವ್ಯವಸ್ಥಿತ ಪೂಜಾ ವಿಧಿವಿಧಾನಗಳನ್ನು ಹೊಂದಿರುವ ದೇವತೆಗಳಂತೆ ಈತನಿಗೆ ಅದ್ಧೂರಿ ಪೂಜೆ ಬೇಕಿಲ್ಲ. ಬಡವರ ದೈವವಾದ ಈತನಿಗೆ ನುಚ್ಚು, ಪುಂಡಿಪಲ್ಯ, ಕಟುಕು ರೊಟ್ಟಿ, ಮಜ್ಜಿಗೆ, ಬೆಣ್ಣೆ ಮತ್ತು ಗಂಜಿಯನ್ನು ಅತ್ಯಂತ ಪ್ರೀತಿಯಿಂದ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಹಾಡುವ “ಅಡ್ಡಡ್ಡ ಮಳೆ ಬಂದು.. ದೊಡ್ಡ ದೊಡ್ಡ ಕೆರೆ ತುಂಬಿ…” ಎಂಬ ಜೋಕುಮಾರನ ಪದಗಳು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜಾನಪದ ಕಳೆಯನ್ನು ಹೆಚ್ಚಿಸುತ್ತವೆ.

ಪುರಾಣಗಳ ಪ್ರಕಾರ, ಜೋಕುಮಾರನಿಗೆ ಕೇವಲ 7 ದಿನಗಳ ಆಯಸ್ಸು. ಈ ಏಳು ದಿನಗಳಲ್ಲಿ ಆತ ಊರಿನ ಸ್ತ್ರೀಯರ ಮೋಹಕ್ಕೆ ಒಳಗಾಗುತ್ತಾನೆ ಎಂಬ ಕಥೆಯಿದ್ದು, ಕೊನೆಯ ದಿನ ಆತನನ್ನು ಸಂಹರಿಸಲಾಗುತ್ತದೆ. ಆತ ಮಡಿದ ಜಾಗದ ಮಣ್ಣನ್ನು ರೈತರು ಪವಿತ್ರವೆಂದು ಹೊಲಕ್ಕೆ ತರುತ್ತಾರೆ. ಜೋಕುಮಾರ ಮರಣ ಹೊಂದಿದ ನಂತರ ಆಯಾ ಹಳ್ಳಿಗಳಲ್ಲಿ ಸೂತಕದ ಛಾಯೆ ಆವರಿಸುತ್ತದೆ ಹಾಗೂ ಆ ದಿನ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ಗಣೇಶ ಶಾಸ್ತ್ರೋಕ್ತ ಸಂಸ್ಕೃತಿಯ ಪ್ರತೀಕವಾದರೆ, ಜೋಕುಮಾರಸ್ವಾಮಿ ಸಂಪೂರ್ಣವಾಗಿ ಪ್ರಕೃತಿ, ಮಣ್ಣು ಮತ್ತು ಕೃಷಿಯನ್ನೇ ನಂಬಿದ ಅಪ್ಪಟ ಜನಪದ ಕೃಷಿ ಸಂಸ್ಕೃತಿಯ ಸಂಕೇತವಾಗಿದೆ.
ಇನ್ನೂ ಜೋಕುಮಾರಸ್ವಾಮಿಯ ಕಥೆ ಮತ್ತು ಹಾಡುಗಳು ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನ ಮುಗ್ಧತೆ, ಹಾಸ್ಯ, ಮತ್ತು ಕೃಷಿ ಸಂಸ್ಕೃತಿಯನ್ನು ಅತ್ಯಂತ ಸುಂದರವಾಗಿ ಪ್ರತಿಬಿಂಬಿಸುತ್ತವೆ. ಇಡೀ ಹಬ್ಬ ಮುಗಿಯುವವರೆಗೆ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು ಈತನನ್ನು ಹೊಗಳುವ, ಜೊತೆಗೆ ಕೊಂಚ ರೇಗಿಸುವ ಹಾಡುಗಳನ್ನು ಹಾಡುತ್ತಾರೆ.

ಜೋಕುಮಾರನ ಹಿಂದಿರುವ ಜಾನಪದ ಕಥೆ
ಜನಪದರ ನಂಬಿಕೆಯ ಪ್ರಕಾರ, ಜೋಕುಮಾರಸ್ವಾಮಿ ಬೇರೆ ಯಾರೂ ಅಲ್ಲ, ಸಾಕ್ಷಾತ್ ಮನ್ಮಥನ ಅವತಾರ. ಶಿವನ ಮುನಿಸಿಗೆ ಒಳಗಾಗಿ ಭಸ್ಮವಾದ ಮನ್ಮಥನನ್ನು ಬದುಕಿಸಬೇಕೆಂದು ರತಿದೇವಿ ಪ್ರಾರ್ಥಿಸಿದಾಗ, ಶಿವನು ಆತನಿಗೆ ಪ್ರತಿ ವರ್ಷ ಭೂಲೋಕದಲ್ಲಿ ಕೇವಲ ಏಳು ದಿನಗಳ ಕಾಲ ಹುಟ್ಟಿಬರುವಂತೆ ವರ ನೀಡುತ್ತಾನೆ. ಹಾಗೆ ಭೂಮಿಗೆ ಬರುವ ಜೋಕುಮಾರಸ್ವಾಮಿ ಅತ್ಯಂತ ಸುಂದರ, ತೇಜಸ್ವಿ ಹಾಗೂ ಸ್ತ್ರೀಲೋಲ (ಹೆಣ್ಣುಮಕ್ಕಳನ್ನು ಆಕರ್ಷಿಸುವವನಾಗಿ ಧರೆಗಿಳಿಯುತ್ತಾನೆ).
ಅವನು ಭೂಮಿಗೆ ಬಂದು ಮನೆಮನೆಗೆ ತಿರುಗುವಾಗ ಊರಿನ ಹೆಣ್ಣುಮಕ್ಕಳೆಲ್ಲ ಅವನ ರೂಪಕ್ಕೆ ಮಾರುಹೋಗುತ್ತಾರೆ. ಅವನಿಗೆ ಬೆಣ್ಣೆ, ರೊಟ್ಟಿ, ಪಲ್ಯ ಕೊಟ್ಟು ಉಪಚರಿಸುತ್ತಾರೆ. ಇದನ್ನು ಸಹಿಸದ ಊರಿನ ಗೌಡರು ಮತ್ತು ಪುರುಷರು, ಏಳನೇ ದಿನ ಆತ ಅಗಸರ ಕೇರಿಗೆ ಬಂದಾಗ ಆತನನ್ನು ಒನಕೆಯಿಂದ ಚುಚ್ಚಿ ಸಂಹರಿಸುತ್ತಾರೆ.
