ಬೆಳಗಾವಿ: ಮಹಾರಾಷ್ಟ್ರದ(Maharashtra) ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮವಾಗಿ ಕೃಷ್ಣಾ ನದಿ (Krishna River) ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ನದಿ ತೀರದ ಜನರಲ್ಲಿ ಪ್ರವಾಹದ(Flood) ಆತಂಕ ಎದುರಾಗಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಪ್ರಮುಖ ಕೊಯ್ನಾ ಜಲಾಶಯಕ್ಕೆ(Koyna Dam) ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಪ್ರಸ್ತುತ ಜಲಾಶಯಕ್ಕೆ 49 ಸಾವಿರ ಕ್ಯೂಸೆಕ್ ನೀರು ಒಳಹರಿವು ದಾಖಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ ಕೃಷ್ಣಾ ನದಿಗೆ 34 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಕೊಯ್ನಾ ಜಲಾಶಯದಲ್ಲಿ ಈಗಾಗಲೇ 91 ಟಿಎಂಸಿ ನೀರು ಭರ್ತಿಯಾಗಿದೆ.
ಕೇವಲ ಕೊಯ್ನಾ ಮಾತ್ರವಲ್ಲದೆ, ಮಹಾರಾಷ್ಟ್ರದ ರಾಧಾನಗರಿ, ಪಾಟಗಾಂವ ಹಾಗೂ ಧೂಮ ಜಲಾಶಯಗಳು ಕೂಡ ಬಹುತೇಕ ಭರ್ತಿಯ ಹಂತಕ್ಕೆ ತಲುಪಿವೆ. ಈ ಎಲ್ಲಾ ಜಲಾಶಯಗಳಿಂದಲೂ ನಿರಂತರವಾಗಿ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ನೀರಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಮಹಾರಾಷ್ಟ್ರದ ಗಡಿ ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕೃಷ್ಣಾ ನದಿಯ ಪ್ರಮುಖ ಉಪನದಿಗಳಾದ ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ, ಘಟಪ್ರಭಾ ಈ ಎಲ್ಲಾ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದ್ದು, ಹತ್ತಿರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದಿರಲು ಹಾಗೂ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ.
