ವಾಷಿಂಗ್ಟನ್: ತಮ್ಮ ಟ್ರೂತ್ ಪೋಸ್ಟ್‌ನಿಂದ ಷೇರು ಮಾರುಕಟ್ಟೆಯನ್ನು (Share Market) ಅಲ್ಲೋಲ ಕಲ್ಲೋಲ ಮಾಡುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈಗ ಅಲ್ಲೂ ದುಡ್ಡು ಮಾಡಲು ಮುಂದಾಗಿದ್ದಾರೆ.
ಈಗ ತಮ್ಮ ‘ಟ್ರೂತ್ ಸೋಷಿಯಲ್’ (Truth Social) ಖಾತೆಯ ಪೋಸ್ಟ್‌ಗಳನ್ನು ಇತರೆ ಬಳಕೆದಾರರಿಗಿಂತ ಮುಂಚಿತವಾಗಿ ಪಡೆಯುವ ಹೊಸ ಸೇವೆಯನ್ನು ಆರಂಭಿಸಿದ್ದಾರೆ.
ಟ್ರಂಪ್ ಮೀಡಿಯಾ ಅಂಡ್ ಟೆಕ್ನಾಲಜಿ ಗ್ರೂಪ್ (TMTG) ಶನಿವಾರ ತನ್ನ ನೂತನ ಚಂದಾದಾರಿಕೆ ಆಧಾರಿತ ಡೇಟಾ ಸೇವೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಹಣ ಪಾವತಿಸುವ ಚಂದಾದಾರರಿಗೆ ಟ್ರಂಪ್ ಹಾಗೂ ಇತರ ಪ್ರಮುಖ ವ್ಯಕ್ತಿಗಳ ಪೋಸ್ಟ್‌ಗಳನ್ನು ಇತರರಿಗಿಂತ ವೇಗವಾಗಿ, ನೈಜ ಸಮಯದಲ್ಲಿ (Real-Time) ತಲುಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಟ್ರೂತ್ ಎಪಿಐ (Application Programming Interface) ಎಂಬ ಹೆಸರಿನ ಈ ಸೇವೆಯು, ಷೇರು ಮಾರುಕಟ್ಟೆಯ ಮೇಲೆ ತಕ್ಷಣದ ಪರಿಣಾಮ ಬೀರುವ ಸಾಮರ್ಥ್ಯವಿರುವ ಪೋಸ್ಟ್‌ಗಳನ್ನು ನೇರವಾಗಿ, ಪರವಾನಗಿ ಸಹಿತ ಹಾಗೂ ರಿಯಲ್-ಟೈಮ್‌ನಲ್ಲಿ ವಹಿವಾಟು ಸಂಸ್ಥೆಗಳಿಗೆ ತಲುಪಿಸಲಿದೆ. ಇದನ್ನೂ ಓದಿ: ಮೆಮ್‌ಕಾಯಿನ್ ಹೂಡಿಕೆದಾರರಿಗೆ 31 ಸಾವಿರ ಕೋಟಿ ನಷ್ಟ- ಟ್ರಂಪ್‌ಗೆ 5,300 ಕೋಟಿ ಲಾಭ

ಸಾಮಾನ್ಯವಾಗಿ ಇತರ ಸಾಮಾಜಿಕ ಜಾಲತಾಣಗಳು ಇಂತಹ ಸೇವೆಗಳನ್ನು ಒದಗಿಸುತ್ತವೆಯಾದರೂ, ಟ್ರೂತ್ ಸೋಷಿಯಲ್‌ನ ಪ್ರಮುಖ ಬಳಕೆದಾರ ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿದ್ದಾರೆ. ಅಲ್ಲದೆ ಅವರು ಈ ಕಂಪನಿಯ ಅತಿ ದೊಡ್ಡ ಷೇರುದಾರರೂ ಆಗಿರುವುದರಿಂದ, ಈ ಹಣಕಾಸಿನ ಲಾಭವು ನೇರವಾಗಿ ಅವರಿಗೆ ಸಿಗಲಿದೆ ಎನ್ನುವುದು ಈಗ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಟ್ರಂಪ್ ಒಂದು ಹೇಳಿಕೆ, ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಕರಗಿತು ಹೂಡಿಕೆದಾರರ 8 ಲಕ್ಷ ಕೋಟಿ ಸಂಪತ್ತು
ಈ ಪ್ರಕಟಣೆಗಳು ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಳಿತವನ್ನು ಉಂಟುಮಾಡುವುದರಿಂದ, ಹಣ ತೆತ್ತು ಮುಂಚಿತವಾಗಿ ಮಾಹಿತಿ ಪಡೆಯುವ ಸಂಸ್ಥೆಗಳು ಅನೈತಿಕವಾಗಿ ಲಾಭ ಮಾಡಿಕೊಳ್ಳಬಹುದು ಮತ್ತು ಇದು ಇನ್‌ಸೈಡರ್ ಟ್ರೇಡಿಂಗ್ ಹಾಗೂ ಮಾರುಕಟ್ಟೆ ಹಸ್ತಕ್ಷೇಪಕ್ಕೆ ದಾರಿಯಾಗುತ್ತದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸೇವೆಯು ಬಿಡುಗಡೆಯಾಗುವ ಕೆಲವೇ ದಿನಗಳ ಮೊದಲು, ಡೆಮಾಕ್ರಟಿಕ್ ಸಂಸದರಾದ ಆಡಮ್ ಶಿಫ್ ಮತ್ತು ಎಲಿಜಬೆತ್ ವಾರನ್ ಅವರು ಯು.ಎಸ್. ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (SEC) ಅಧ್ಯಕ್ಷ ಪೋಲ್ ಅಟ್ಕಿನ್ಸ್ ಅವರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.
ಇದು ಅಧ್ಯಕ್ಷರ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಕಡು ಅನ್ಯಾಯದ ಕ್ರಮವಾಗಿದೆ. ಇದು ಸಾಮಾನ್ಯ ಹೂಡಿಕೆದಾರರಿಗೆ ವಂಚಿಸಿ, ವಾಲ್ ಸ್ಟ್ರೀಟ್‌ನ ಶ್ರೀಮಂತರಿಗೆ ಮಾತ್ರ ಅನುಕೂಲ ಮಾಡಿಕೊಡುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟ್ರಂಪ್ ಕದನ ವಿರಾಮ ಘೋಷಣೆಯ 10 ನಿಮಿಷಕ್ಕೂ ಮೊದಲು 14 ಸಾವಿರ ಕೋಟಿ ರೂ. ಬೆಟ್ – ಇನ್‌ಸೈಡರ್ ಟ್ರೇಡಿಂಗ್ ಮಾಡಿದ್ಯಾರು?
ಕಳೆದ ವರ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಟ್ರಂಪ್ ಮೀಡಿಯಾದ ಷೇರು ಮೌಲ್ಯವು 70% ಗಿಂತಲೂ ಹೆಚ್ಚು ಕುಸಿದಿದ್ದು ಹೂಡಿಕೆದಾರರಿಗೆ ಸುಮಾರು 6 ಬಿಲಿಯನ್ ಡಾಲರ್ ನಷ್ಟವಾಗಿದೆ. ಆದರೆ ಟ್ರಂಪ್ ಅವರ ವಾರ್ಷಿಕ ಹಣಕಾಸು ವರದಿಯ ಪ್ರಕಾರ, ಅವರು ಕಳೆದ ವರ್ಷ ಇದೇ ಕಂಪನಿಗಳು ಹಾಗೂ ಕ್ರಿಪ್ಟೋ ಉದ್ಯಮಗಳಿಂದ 1 ಬಿಲಿಯನ್‌ಗೂ ಹೆಚ್ಚು ಆದಾಯ ಗಳಿಸಿದ್ದಾರೆ. ಹೊಸ ಎಪಿಐ ಸೇವೆ ಆರಂಭವಾಗುವ ಮುನ್ನಾದಿನ ಶುಕ್ರವಾರದಂದು ಟ್ರಂಪ್ ಮೀಡಿಯಾ ಷೇರುಗಳು 5.5% ನಷ್ಟು ಏರಿಕೆ ಕಂಡು 10.39 ಡಾಲರ್ ತಲುಪಿದ್ದವು.
