ಮುಂಬೈ: ಅಜಿಂಕ್ಯ ರಹಾನೆ (Ajinkya Rahane) ಟೀಂ ಇಂಡಿಯಾಗೆ(Team India) ನಿವೃತ್ತಿ ಹೇಳಿದರೂ ಅವರಿಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರತಿ ತಿಂಗಳು ಪಿಂಚಣಿ ನೀಡಲಿದೆ.
2022ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ(Sourav Ganguly) ಅವರ ಅವಧಿಯಲ್ಲಿ ಮಾಜಿ ಕ್ರಿಕೆಟಿಗರ ಪಿಂಚಣಿ ಮೊತ್ತವನ್ನು ಪರಿಷ್ಕರಿಸಲಾಗಿತ್ತು. ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ, ಬಿಸಿಸಿಐನ ಉನ್ನತ ಶ್ರೇಣಿಯ ಪಿಂಚಣಿ ವಿಭಾಗಕ್ಕೆ ಒಳಪಡುತ್ತಾರೆ.
ಈ ಮೊದಲು 75ಕ್ಕೂ ಹೆಚ್ಚು ಟೆಸ್ಟ್ ಆಡಿದ ಮಾಜಿ ಕ್ರಿಕೆಟಿಗರಿಗೆ ಮಾಸಿಕ 50,000 ರೂ. ಪಿಂಚಣಿ ನೀಡಲಾಗುತ್ತಿತ್ತು. ಆದರೆ, ನಾಲ್ಕು ವರ್ಷಗಳ ಹಿಂದೆ ಮಾಡಲಾದ ಪರಿಷ್ಕರಣೆಯ ನಂತರ ಈ ಮೊತ್ತವನ್ನು ಮಾಸಿಕ 70,000 ರೂ.,ಗೆ ಹೆಚ್ಚಿಸಲಾಗಿದೆ. ಆದ್ದರಿಂದ, ರಹಾನೆ ಅವರು ನಿವೃತ್ತಿಯ ನಂತರ ಬಿಸಿಸಿಐನಿಂದ ಮಾಸಿಕ 70,000 ರೂ. ನಿಗದಿತ ಪಿಂಚಣಿ ಪಡೆಯಲಿದ್ದಾರೆ.

ಅಂದು ಈ ನಿರ್ಧಾರದ ಬಗ್ಗೆ ಮಾತನಾಡಿದ್ದ ಸೌರವ್ ಗಂಗೂಲಿ, “ನಮ್ಮ ಮಾಜಿ ಕ್ರಿಕೆಟಿಗರ ಆರ್ಥಿಕ ಹಿತದೃಷ್ಟಿಯನ್ನು ಕಾಯುವುದು ಅತ್ಯಂತ ಮುಖ್ಯ. ಆಟಗಾರರೇ ನಮ್ಮ ಮಂಡಳಿಯ ಜೀವಾಳ, ಅವರ ಆಟದ ದಿನಗಳು ಮುಗಿದ ನಂತರವೂ ಅವರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ” ಎಂದು ಹೇಳಿದ್ದರು. ಇದನ್ನೂ ಓದಿ: Cap 278 Signing Off| ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ನಿವೃತ್ತಿ
ಬಿಸಿಸಿಐ ನಿಯಮಗಳ ಪ್ರಕಾರ, ರಹಾನೆ ಮಂಡಳಿಯಲ್ಲಿ (BCCI) ಯಾವುದೇ ಅಧಿಕೃತ ಹುದ್ದೆ ಉದಾಹರಣೆಗೆ: ಕೋಚ್ ಅಥವಾ ಆಡಳಿತಾಧಿಕಾರಿ ವಹಿಸಿಕೊಳ್ಳದಿರುವವರೆಗೆ ಮಾತ್ರ ಈ ಪಿಂಚಣಿ ಲಭ್ಯವಿರುತ್ತದೆ. ಒಂದು ವೇಳೆ ಅವರು ಬಿಸಿಸಿಐ ಅಡಿಯಲ್ಲಿ ಸಂಬಳ ಪಡೆಯುವ ಹುದ್ದೆಯನ್ನು ಸ್ವೀಕರಿಸಿದರೆ ಆ ಅವಧಿಯಲ್ಲಿ ಅವರ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗುತ್ತದೆ.
