ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಬಂಧಿನಕ್ಕೊಳಗಾದ ಶಂಕಿತ ಉಗ್ರ ಹಮೀಮ್ ಮೊಂಡಲ್ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ (Suvendu Adhikari) ಮೇಲೆ ನಿಗಾ ಇಟ್ಟು ಮಾಹಿತಿ ಕಲೆಹಾಕುತ್ತಿದ್ದ. ಅಲ್ಲದೇ ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಸಿಜೆಪಿ ಪ್ರತಿಭಟನೆಗೆ ಪೊಲೀಸರ ಸಮವಸ್ತ್ರದಲ್ಲಿ ನುಸುಳಲು ಸಂಚು ರೂಪಿಸಿದ್ದ ಎಂದು ವಿಶೇಷ ಕಾರ್ಯಪಡೆ (STF) ತಿಳಿಸಿದೆ.
ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸಂಬಂಧಿಸಿದ ಹಮೀಮ್ ಮೊಂಡಲ್‌ನನ್ನು ಇತ್ತೀಚೆಗೆ ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಈತನಿಗೆ ಮುಖ್ಯಮಂತ್ರಿ ಸುವೇಂದು ಅಧಿಕಾರಿಯವರ ಮೇಲೆ ನಿಗಾ ಇಡುವ ಕೆಲಸ ಹಾಗೂ ಪೊಲೀಸ್ ಸಮವಸ್ತ್ರದಲ್ಲಿ ಜಂತರ್ ಮಂತರ್‌ಗೆ ಪ್ರವೇಶಿಸಿ ಅಶಾಂತಿ ಉಂಟುಮಾಡುವ ಕೆಲಸವನ್ನು ಪಾಕ್ ಮೂಲದ ಹ್ಯಾಂಡ್ಲರ್ ವಹಿಸಿದ್ದ. ಸಿಎಂ ಯಾವ ಸ್ಥಳದಲ್ಲಿ ಕಾವಲಿಲ್ಲದೇ ಇರುತ್ತಾರೆ ಎಂದು ಈತನ ಬಳಿ ಪಾಕ್ ಹ್ಯಾಂಡ್ಲರ್ ಕೇಳಿದ್ದ ಎಂದು ಇನ್ಸ್‌ಪೆಕ್ಟರ್ ಜನರಲ್ (STF) ಗೌರವ್ ಶರ್ಮಾ ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ; ವಲಸೆ ಕಾರ್ಮಿಕ ಸಾವು

ಮೊಂಡಲ್‌ನ ಗೆಳತಿ ಅರ್ಪಿತಾ ಸರ್ಕಾರ್‌ಳನ್ನು ಜಾರ್ಖಂಡ್‌ನಲ್ಲಿ ಬಂಧಿಸಲಾಗಿದೆ. ಇಬ್ಬರು ಸೇರಿ ರಾಜ್ಯ ಸಚಿವ ಉಮೇಶ್ ರೇ ಅವರ ಮಗನನ್ನು ಹನಿಟ್ರ್ಯಾಪ್ ಮಾಡಿ ಸುಲಿಗೆ ಮಾಡಲು ಸಂಚು ರೂಪಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಅರ್ಪಿತಾ ರಾಜಕಾರಣಿಗಳು ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿ ಮಾಹಿತಿಯನ್ನು ಪಡೆದಿದ್ದಾಳೆ. ಆ ಮಾಹಿತಿಗಳನ್ನು ಹಮೀಮ್‌ಗೆ ರವಾನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಾಟ್ಸಾಪ್ ಚಾಟ್ ಪಾಕಿಸ್ತಾನದ ಸಂಪರ್ಕವನ್ನು ಬಹಿರಂಗಪಡಿಸಿವೆ.
ಆರೋಪಿಗಳಿಂದ ಅಂತರರಾಷ್ಟ್ರೀಯ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಯುಕೆ ಮತ್ತು ಮೆಕ್ಸಿಕೋದಲ್ಲಿ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಹ್ಯಾಂಡ್ಲರ್‌ಗಳು ಮತ್ತು ಸ್ಲೀಪರ್ ಸೆಲ್‌ಗಳೊಂದಿಗೆ ಈ ಸಿಮ್‌ಗಳನ್ನು ಬಳಸಿ ಸಂವಂಹನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಈತ ಪಾಕ್ ಉಗ್ರರ ಜೊತೆ ಕೈ ಜೋಡಿಸುವ ಮುನ್ನ ಮೂಲಭೂತವಾದಿಯಾಗಿದ್ದ. ಆತನ ಸಾಮಾಜಿಕ ಜಾಲತಾಣ ಪರಿಶೀಲಿಸುವಾಗ ಈ ವಿಚಾರ ತಿಳಿದು ಬಂದಿದೆ.
ಶಹಜಾದ್ ಭಟ್ಟಿ ಗ್ಯಾಂಗ್‌ಗೆ ಸಂಬಂಧಿಸಿದ ಪಾಕಿಸ್ತಾನಿ ನಿರ್ವಾಹಕರ ಆದೇಶದ ಮೇರೆಗೆ ಇಬ್ಬರು ಈ ಕೃತ್ಯದಲ್ಲಿ ತೊಡಗಿದ್ದರು. ಹ್ಯಾಂಡ್ಲರ್‌ಗಳನ್ನು ಶಹಜಾದ್ ಭಟ್ಟಿ ಗ್ಯಾಂಗ್‌ನ ರಾಣಾ, ಉಜೈರ್, ಅಬಿದ್ ಜಾಟ್ 333 ಮತ್ತು ಹಮದ್ ಎಂದು ಶಂಕಿಸಲಾಗಿದೆ. ಈ ಗ್ಯಾಂಗ್ ಮೂಲಭೂತವಾದ, ಭಯೋತ್ಪಾದಕರ ನೇಮಕಾತಿ ಮತ್ತು ಮಾದಕವಸ್ತು ಕಳ್ಳಸಾಗಾಣಿಕೆಯಲ್ಲಿ ತೊಡಗಿದೆ ಎಂಬ ಆರೋಪ ಇದೆ.
ಮೊಂಡಲ್ ಮತ್ತು ಸರ್ಕಾರ್ ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ, 4 ವರ್ಷಗಳಿಂದ ಸಂಬಂಧದಲ್ಲಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಶಂಕಿತನನ್ನು 14 ದಿನಗಳ ಎಸ್‌ಟಿಎಫ್ ಕಸ್ಟಡಿಗೆ ಪಡೆಯಲಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಕಾರ್ಮಿಕ ಸಾವು
