ಧರ್ಮಶಾಲಾ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026) 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ಪ್ಲೇ ಆಫ್ ಪರ್ವ ಸುರುವಾಗಿದೆ. ಇಂದು (ಮಂಗಳವಾರ) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸಮಬಲಶಾಲಿಗಳಾದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (RCB vs GT) ತಂಡಗಳು ಮುಖಾಮುಖಿ ಆಗಲಿವೆ.
Set your alarms, folks ⏰
It’s #Qualifier1 time ❤️🩵#TATAIPL | #TheFinalLeap | #RCBvGT pic.twitter.com/44AjemDn3v
— IndianPremierLeague (@IPL) May 26, 2026
HPCA ಕ್ರೀಡಾಂಗಣ, ಧರ್ಮಶಾಲಾ ಕ್ವಾಲಿಫೈಯರ್-1 ಫೈಟ್ ನಡೆಯಲಿದ್ದು, ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದೆ. ಬ್ಯಾಟಿಂಗ್ ಗೆ ಅನುಕೂಲಕರವಾದ ಧರ್ಮಶಾಲಾ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೇ ಹೆಚ್ಚುಬಾರಿ ಗೆದ್ದಿರುವುದು ವಿಶೇಷ. ಆದ್ರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು ಚೇಸಿಂಗ್ ಮಾಡುವವರಿಗೆ ಹೆಚ್ಚು ಅನುಕೂಲ ಎಂದು ಹೇಳಲಾಗುತ್ತಿದೆ. ಇನ್ನೂ ಕಳೆದ 8 ವರ್ಷಗಳಲ್ಲಿ ಕ್ವಾಲಿಫೈಯರ್-1 ನಲ್ಲಿ ಗೆದ್ದವರೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ಇಂದು ಗೆದ್ದ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸುವ ಸಾಧ್ಯತೆಗಳಿವೆ ಎಂದು ಕ್ರಿಕೆಟ್ ತಜ್ಞರು ಭವಿಷ್ಯ ನುಡಿದಿದ್ದಾರೆ.
ರನ್ ಹೊಳೆ ಹರಿಯುವ ನಿರೀಕ್ಷೆ
ಇನ್ನೂ ಇಂದಿನ ಪಂದ್ಯದಲ್ಲಿ ರನ್ ಹೊಳೆಯೇ ಹರಿಯಬಹುದು ಎಂಬ ನಿರೀಕ್ಷೆ ಇದೆ. ಈ ಸೀಸನ್ ನಲ್ಲಿ ಇತ್ತಂಡಗಳು ಎದುರುಬದುರಾದಾಗ ಬೆಂಗಳೂರಿನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್ ಗಳಿಂದ ಜಯ ಸಾಧಿಸಿತ್ತು. ಬಳಿಕ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಶುಭಮನ್ ಗಿಲ್ ಬಳಗ ಆರ್‌ಸಿಬಿಯನ್ನ 4 ವಿಕೆಟ್ ಗಳಿಂದ ಪರಾಭವಗೊಳಿಸಿತ್ತು. ಇದೀಗ ತಟಸ್ಥ ಸ್ಥಳದಲ್ಲಿ ಯಾರು ಜಯಶಾಲಿಯಾಗುತ್ತಾರೆ ಅನ್ನೋದೇ ಕುತೂಹಲ.

ಈವರೆಗೂ ಇತ್ತಂಡಗಳು 8 ಬಾರಿ ಮುಖಾಮುಖಿಯಾಗಿದ್ದು 4 ಬಾರಿ ಆರ್‌ಸಿಬಿ ಮತ್ತು 4 ಬಾರಿ ಗುಜರಾತ್ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಯಾರೇ ಸೋತರೂ ಆತಂಕ ಪಡಬೇಕಿಲ್ಲ. ಏಕೆಂದ್ರೆ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದ್ರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಸೋತ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಂದಿಗೆ ಕ್ವಾಲಿಫೈಯರ್-2 ನಲ್ಲಿ ಮುಖಾಮುಖಿಯಾಗಲಿದೆ.
ಬೆಂಗಳೂರು ಬ್ಯಾಟಿಂಗ್‌ನದ್ದೇ ಎದುರಾಳಿಗಳಿಗೆ ಸವಾಲು
ಕಳೆದ ಸೀಸನ್‌ನ ಚಾಂಪಿಯನ್ಸ್ ಆಗಿರುವ ಆರ್‌ಸಿಬಿ ಈ ಬಾರಿಯೂ ಅತ್ಯುತ್ತಮ ಲಯದಲ್ಲಿದೆ. ಇದೇ ಕಾರಣಕ್ಕೆ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿದೆ. ಸೀಸನ್ ಉದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ 557 ಕಲೆ ಹಾಕಿರುವ ವಿರಾಟ್ ಕೊಹ್ಲಿ ಎದುರಾಳಿ ತಂಡಗಳಿಗೆ ದೊಡ್ಡ ತಲೆನೋವಾಗಿದ್ದಾರೆ. ಅಲ್ಲದೇ ಕೊಹ್ಲಿ ಕ್ರೀಸ್‌ನಲ್ಲಿ ಇದ್ದರೆ ಸಹ ಆಟಹಾರರನ್ನು ಹುರಿದುಂಬಿಸುತ್ತಾ ರನ್ ಹೊಳೆ ಹರಿಸಲು ಕಾರಣವಾಗುತ್ತಾರೆ. ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್ ಅವರು ಅಗ್ರ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಟಿಂ ಡೇವಿಡ್, ಜಿತೇಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ಡೆತ್ ಓವರ್ ಗಳಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದಾರೆ.

ಇನ್ನು ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಚ್ ಅವರು ತಂಡವನ್ನು ಸೇರಿಕೊಂಡಿದ್ದು ಕಣಕ್ಕಿಳಿಯುತ್ತಾರಾ ಇಲ್ಲವಾ ಎಂಬ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ಅವರು ಕಣಕ್ಕಿಳಿದಿದ್ದೇ ಆದಲ್ಲಿ ಆರ್‌ಸಿಬಿ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಾಗಲಿದೆ. ಬೌಲಿಂಗ್ ವಿಭಾಗದಲ್ಲಿ ಪರ್ಪಲ್ ಕ್ಯಾಪ್ ಹೋಲ್ಡರ್ ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್ ತಂಡದ ಬೌಲಿಂಗ್ ಆಧಾರವಾಗಿದ್ದಾರೆ. ಇದರೊಂದಿಗೆ ಜಾಕೋಬ್ ಡಫಿ, ರಸಿಕ್ ಸಲಾಮ್ ದಾರ್, ಸ್ಪಿನ್ ವಿಭಾಗದಲ್ಲಿ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಸಹಕಾರ ನೀಡಲಿದ್ದಾರೆ.
ಗುಜರಾತ್ ಯಾರಿಗೇನು ಕಮ್ಮಿಯಿಲ್ಲ
ಇನ್ನೊಂದು ಕಡೆ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿರುವ ಗುಜರಾತ್ ಟೈಟಾನ್ಸ್ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಸಮತೋಲನ ಹೊಂದಿದೆ. ಆರಂಭಿಕ ಆಟಗಾರರಾದ ನಾಯಕ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಉತ್ತಮ ಪ್ರದರ್ಶನ ಹಾಗೂ ಮಧ್ಯಮ ಕ್ರಮಾಂಕದ ಫಿನಿಶರ್‌ಗಳು ತಂಡಕ್ಕೆ ಹಲವು ಜಯ ತಂದುಕೊಟ್ಟಿದ್ದಾರೆ. ಪ್ರಮುಖವಾಗಿ ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್, ಇವರ ಶಿಸ್ತಿನ ಬೌಲಿಂಗ್ ದಾಳಿ RCB ಬ್ಯಾಟರ್‌ಗಳಿಗೆ ದೊಡ್ಡ ಸವಾಲಾಗಲಿದೆ.

ಹೇಗಿದೆ ಧರ್ಮಶಾಲಾ ಪಿಚ್?
ಸಮುದ್ರಮಟ್ಟದಿಂದ 1,500 ಮೀಟರ್ ಎತ್ತರದಲ್ಲಿರುವ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ(HPCA)ದ ಪಿಚ್ ಬ್ಯಾಟರ್‌ಗಳ ಸ್ವರ್ಗ ಎಂದೇ ಹೇಳಲಾಗುತ್ತಿದೆ. ಬೌಲರ್ ಗಳು ಸರಿಯಾದ ಜಾಗದಲ್ಲಿ ಚೆಂಡೆಸೆದರೆ ಫಲಿತಾಂಶ ಸಿಗಬಹುದು. ಅದರ ಹೊರತಾಗಿ ಪಿಚ್ ನಿಂದ ಯಾವುದೇ ರೀತಿಯ ನೆರವೂ ಸಿಗುವುದಿಲ್ಲ ಎಂದು ಭಾವಿಸಲಾಗಿದೆ. ಉತ್ತಮ ವೇಗ ಮತ್ತು ಬೌನ್ಸ್ ನಿಂದ ಕೂಡಿದ್ದು ಚೆಂಡು ಬ್ಯಾಟ್ ಗೆ ಚೆನ್ನಾಗಿ ಬರುತ್ತದೆ. ಜೊತೆಗೆ ಬೌಂಡರಿಯೂ ಚಿಕ್ಕದಾಗಿರುವುದರಿಂದ ಸಿಕ್ಸರ್ ಹೊಡೆಯುವುದು ನೀರು ಕುಡಿದಷ್ಟೇ ಸುಲಭ. ಮೈದಾನದ ಹೊರಾಂಗಣ ವೇಗವಾಗಿದ್ದು ತೆಳುವಾದ ಪರ್ವತ ಗಾಳಿಯಿಂದಾಗಿ ಚೆಂಡು ಮತ್ತಷ್ಟು ವೇಗವಾಗಿ ಚಲಿಸುತ್ತದೆ. ಹೀಗಾಗಿ ಇಲ್ಲಿ ಪಿಚ್ ನಲ್ಲಿ ದೊಡ್ಡ ಮೊತ್ತ ಬರುವುದು ಖಚಿತ. ಮೊದಲು ಬ್ಯಾಟಿಂಗ್ ಮಾಡುವ ತಂಡ 200 ರಿಂದ 220 ಗಳಿಸುವ ಸಾಧ್ಯತೆ ಹೆಚ್ಚಿದೆ.
ಈವರೆಗೆ ಇಲ್ಲಿ 17 ಪಂದ್ಚಗಳು ನಡೆದಿದ್ದು 10 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಭೇರಿ ಬಾರಿಸಿದೆ. ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. 2ನೇ ಇನ್ನಿಂಗ್ಸ್ ವೇಳೆ ಭಾರೀ ಇಬ್ಬನಿಯ ಕಾರಣದಿಂದಾಗಿ ಬೌಲರ್ ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟ. ಹೀಗಾಗಿ ಇಲ್ಲಿ ಟಾಸ್ ಗೆದ್ದ ತಂಡ ಚೇಸಿಂಗ್ ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.
