ವ್ಯಾಪಾರದ ವಿಚಾರಗಳನ್ನು ಮುಂದಿಟ್ಟುಕೊಂಡು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಅಮೆರಿಕ ಮತ್ತೆ ಎಂಟ್ರಿ ಕೊಟ್ಟಿದೆ. ಜಮ್ಮು-ಕಾಶ್ಮೀರದ (Jammu & Kashmir) ಪಹಲ್ಗಾಮ್‌ನಲ್ಲಿ (Pahalgam) ಈಚೆಗೆ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ತಾಣಗಳನ್ನು ಭಾರತ ಧ್ವಂಸಗೊಳಿಸಿತು. ಇದು ಭಾರತ-ಪಾಕ್ ನಡುವಿನ ಸಂಘರ್ಷ ಉದ್ವಿಗ್ನತೆಗೆ ಕಾರಣವಾಯಿತು. ಪರಸ್ಪರ ದೇಶಗಳು ದಾಳಿ-ಪ್ರತಿದಾಳಿ ನಡೆಸಿದವು. ಯುದ್ಧದ ಕಾರ್ಮೋಡ ಕವಿದಿದ್ದ ಹೊತ್ತಲ್ಲೇ ಮಧ್ಯಪ್ರವೇಶಿಸಿದ ಅಮೆರಿಕ ಉಭಯ ದೇಶಗಳ ನಡುವೆ ಸಂಧಾನಕ್ಕೆ ಒತ್ತಾಯಿಸಿತು.
ಭಾರತ ಮತ್ತು ಪಾಕಿಸ್ತಾನ (India-Pakistan War) ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಸ್ಪಷ್ಟಪಡಿಸಿದರು. ಅದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ಕೂಡ ಮಾತುಕತೆ ವಿಚಾರವನ್ನು ಬಹಿರಂಗಪಡಿಸಿದವು. ಅಮೆರಿಕ ವಹಿಸಿದ ಪಾತ್ರದ ಬಗ್ಗೆ ಹಲವು ಸಭೆಗಳಲ್ಲಿ ಟ್ರಂಪ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸಂಘರ್ಷ ಕೊನೆಗಾಣಿಸುವ ನಿಟ್ಟಿನಲ್ಲಿ ಯುಎಸ್ ಪಾತ್ರ ಫಲಕೊಟ್ಟಿದೆ ಎಂದು ಪ್ರತಿಪಾದಿಸಿದರು. ಹೀಗೆ ಟ್ರಂಪ್ ಆಡಿರುವ ಮಾತೊಂದು ಕುತೂಹಲಕಾರಿಯಾಗಿದೆ. ‘ವ್ಯಾಪಾರ ಮಾತುಕತೆಗಳನ್ನು ದಾಳವಾಗಿ ಬಳಸಿಕೊಂಡು ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದೆವು’ ಎಂದು ಟ್ರಂಪ್ ಹೇಳಿದ್ದಾರೆ. ‘ನಾವು ವ್ಯಾಪಾರದ ಬಗ್ಗೆ ಮಾತನಾಡುತ್ತೇವೆ. ಪರಸ್ಪರ ಗುಂಡು ಹಾರಿಸುವ ಮತ್ತು ಸಂಭಾವ್ಯವಾಗಿ ಪರಮಾಣ ಶಸ್ತ್ರಾಸ್ತ್ರಗಳನ್ನು ಬಳಸುವ ಜನರೊಂದಿಗೆ ನಾವು ವ್ಯಾಪಾರ ಮಾಡಲು ಸಾಧ್ಯವಿಲ್ಲ’ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ. ಆದರೆ, ಪಾಕ್ ಜೊತೆಗಿನ ದ್ವಿಪಕ್ಷೀಯ ಮಾತುಕತೆ ವಿಚಾರದಲ್ಲಿ ಅಮೆರಿಕದ ವ್ಯಾಪಾರ ಲೆಕ್ಕಾಚಾರ ಸೇರಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ವಿಶ್ವದ ದೊಡ್ಡ ಕಂಟೇನರ್ ಹಡಗು ವಿಳಿಂಜಂ ಬಂದರಿಗೆ ಆಗಮನ
ಟ್ರಂಪ್ ಅಸಾಧಾರಣ ಹೇಳಿಕೆಗಳನ್ನು ನೀಡುವುದಕ್ಕೆ ಹೆಸರುವಾಸಿ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಭಾವ್ಯ ಪರಮಾಣು ಯುದ್ಧವನ್ನು ನಿಲ್ಲಿಸಿದ್ದೇವೆಂಬ ಅವರ ಹೇಳಿಕೆಗಳು ಭಾರತವನ್ನು ಮತ್ತಷ್ಟು ಕೆರಳಿಸಿದೆ. ಪಾಕಿಸ್ತಾನದೊಂದಿಗಿನ ತನ್ನ ಸಮಸ್ಯೆಗಳಿಗೆ 3ನೇ ವ್ಯಕ್ತಿಯ ಹಸ್ತಕ್ಷೇಪದ ಅಗತ್ಯವಿಲ್ಲದೇ ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬ ಭಾರತದ ಸ್ಥಾಪಿತ ನಿಲುವಿಗೆ ಟ್ರಂಪ್ ಅವರ ಮಾತುಗಳು ವಿರುದ್ಧವಾಗಿವೆ. ಭಾರತದ ಈ ನಿಲುವಿಗೂ ಒಂದು ಕಾರಣವಿದೆ. ಉಭಯ ದೇಶಗಳ ಸಂಘರ್ಷದ ಸನ್ನಿವೇಶದಲ್ಲಿ ಮೂರನೇ ವ್ಯಕ್ತಿಯಾಗಿ ಅಮೆರಿಕವು ಹಲವು ಸಂದರ್ಭಗಳಲ್ಲಿ ಭಾರತಕ್ಕಿಂತ ಪಾಕ್ ಹಿತಾಸಕ್ತಿಗೆ ಅನುಗುಣವಾಗಿ ವರ್ತಿಸಿದೆ.
ಪಾಕ್-ಭಾರತದ ನಡುವಿನ ಸಂಘರ್ಷವೇನು? ಮೂರನೇಯವರಾಗಿ ಅಮೆರಿಕ ಹಸ್ತಕ್ಷೇಪ ಮಾಡುವುದನ್ನು ಪಾಕ್ ಯಾಕೆ ವಿರೋಧಿಸುತ್ತದೆ? ಈ ಹಿಂದಿನ ಭಾರತ-ಪಾಕ್ ನಡುವಿನ ಯುದ್ಧದ ಸಂದರ್ಭಗಳಲ್ಲಿ ಅಮೆರಿಕದ ಪಾತ್ರವೇನು ಎಂಬ ಪ್ರಶ್ನೆಗಳು ಮೂಡುವುದು ಸಹಜ. ವಿವರ ಇಲ್ಲಿದೆ.
ವಿಶ್ವಸಂಸ್ಥೆಯಲ್ಲಿ ದ್ರೋಹ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕೇವಲ 2 ತಿಂಗಳಲ್ಲಿ ಪಾಕಿಸ್ತಾನದಿಂದ ಬಂದ ನುಸುಳುಕೋರರು ಜಮ್ಮು & ಕಾಶ್ಮೀರದ ಮೇಲೆ ದಾಳಿ ಮಾಡಿದರು. ವೈಸ್ರಾಯ್ ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಭಾರತಕ್ಕೆ ವಿಶ್ವಸಂಸ್ಥೆ ಮೊರೆ ಹೋಗುವಂತೆ ಸಲಹೆ ನೀಡಿದರು. 1948ರ ಜನವರಿ 1ರಂದು ಭಾರತ ವಿಶ್ವಸಂಸ್ಥೆ ಕದ ತಟ್ಟಿತು. ಕಾನೂನು ಬದ್ಧವಾಗಿ ತನಗೆ ಸೇರಿರುವ ಪ್ರದೇಶದ ಮೇಲಿನ ತನ್ನ ಹಕ್ಕಗಳನ್ನು ವಿಶ್ವಸಂಸ್ಥೆಯಲ್ಲಿ ಗೌರವಿಸಲಾಗುತ್ತದೆಂಬ ನಿರೀಕ್ಷೆಯನ್ನು ಭಾರತ ಹೊಂದಿತ್ತು. ಆದರೆ, ಬ್ರಿಟಿಷರು ಭಾರತವನ್ನು ಬೆಂಬಲಿಸಲಿಲ್ಲ. ನಿಜಕ್ಕೂ ಈ ನಡೆ ಭಾರತದ ಬಗೆದ ದ್ರೋಹವಾಯಿತು. ಜಾಗತಿಕವಾಗಿ ಭಾರತವು ಅತಿದೊಡ್ಡ ಶಕ್ತಿಯಾಗಿ ಹೊರಹೊಮ್ಮುವ ಆತಂಕದಲ್ಲಿ ವಿಶ್ವಸಂಸ್ಥೆಯು ಹಿಂದೇಟು ಹಾಕಿತು. ಈ ಹೊತ್ತಲ್ಲೇ, ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಅಂತರಾಷ್ಟ್ರೀಕರಣಗೊಳಿಸಲು ಆದ್ಯತೆ ನೀಡಿತು. ಇದನ್ನೂ ಓದಿ: ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ
ಶೀತಲ ಸಮರದ ವರ್ಷಗಳಲ್ಲಿ ಯುಎಸ್ ನೇತೃತ್ವದ ಪಶ್ಚಿಮವು ಪಾಕಿಸ್ತಾನವನ್ನು ಸೋವಿಯತ್ ಒಕ್ಕೂಟದೊಂದಿಗಿನ ಜಗಳದಲ್ಲಿ ನಿರ್ಣಾಯಕ ಮಿತ್ರನಾಗಿ ನೋಡಿತು. ಆದರೆ, ಅಲಿಪ್ತ ನೀತಿ ಧೋರಣೆ ತಳೆದ ಭಾರತವನ್ನು ವಿಶ್ವಾಸಾರ್ಹ ಎಂದು ಪರಿಗಣಿಸಲಿಲ್ಲ. ಅಫ್ಘಾನಿಸ್ತಾನದಲ್ಲಿನ ಯುದ್ಧ ಮತ್ತು ಅಮೆರಿಕದ ‘ಭಯೋತ್ಪಾದನೆಯ ವಿರುದ್ಧದ ಯುದ್ಧ’ವು ಯುಎಸ್ ಮತ್ತು ಪಶ್ಚಿಮಕ್ಕೆ ಪಾಕಿಸ್ತಾನದ ಪ್ರಾಮುಖ್ಯತೆಯನ್ನು ಖಚಿತಪಡಿಸಿತು. ಇದು ಭಾರತಕ್ಕೆ ಅನನುಕೂಲವಾಯಿತು. ಆದರೂ, ಜಾಗತಿಕ ದಕ್ಷಿಣದ ನಾಯಕನಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿರುವ ಭಾರತವು ತನ್ನ ಸಮಸ್ಯೆಗಳನ್ನು ಪರಿಹರಿಸಲು ದೊಡ್ಡ ಶಕ್ತಿಗಳ ಮೇಲೆ ಅವಲಂಬಿಸಬೇಕೆಂದು ಎಂದೂ ಭಾವಿಸಿಲ್ಲ.
ಅಮೆರಿಕ ಪಾತ್ರ ಏನು?
ಭಾರತ ಮತ್ತು ಪಾಕಿಸ್ತಾನ ನಡುವೆ ನಾಲ್ಕು ಯುದ್ಧಗಳು ನಡೆದಿದೆ. ಈ ಸಂದರ್ಭದಲ್ಲಿ ಅಮೆರಿಕದ ಪಾತ್ರವೇನು ಎಂಬುದನ್ನು ನೋಡಬೇಕಿದೆ. ಪಾಕಿಸ್ತಾನ ವಿಷಯ ಹೊರತುಪಡಿಸಿಯೂ, ಭಾರತ ಮತ್ತು ಅಮೆರಿಕ ಸ್ವತಂತ್ರವಾದ ದ್ವಿಪಕ್ಷೀಯ ಸಂಬಂಧವನ್ನು ಹೊಂದಿವೆ.
1947ರ ಭಾರತ-ಪಾಕಿಸ್ತಾನ ಯುದ್ಧ
ಟ್ರಂಪ್ ಈಗ ಮಾಡುತ್ತಿರುವುದಕ್ಕೆ ತದ್ವಿರುದ್ಧವಾಗಿ, 1947ರಲ್ಲಿ ಭಾರತ ಮತ್ತು ಪಾಕಿಸ್ತಾನ ತಮ್ಮ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕೆಂದು ಅಮೆರಿಕ ಬಯಸಿತ್ತು. ಭಾರತ ಮತ್ತು ಪಾಕಿಸ್ತಾನ ನೇರ ಮಾತುಕತೆಯ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂದು ನಾವು ಹೆಚ್ಚು ಬಯಸುತ್ತೇವೆ. ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ಮೇಲ್ವಿಚಾರಣೆ ಮಾಡಲು ವಿಶ್ವಸಂಸ್ಥೆಯನ್ನು ವಿನಂತಿಸುವ ನಿರ್ಣಯವನ್ನು ಭಾರತ ಅಥವಾ ಪಾಕಿಸ್ತಾನ ಮಂಡಿಸಿ, ಅದನ್ನು ಯುನೈಟೆಡ್ ಕಿಂಗ್‌ಡಮ್ ಬೆಂಬಲಿಸಿದರೆ ಯುನೈಟೆಡ್ ಸ್ಟೇಟ್ಸ್ ನಿಯೋಗವು ಸಹ ನಿರ್ಣಯವನ್ನು ಬೆಂಬಲಿಸಬೇಕು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಭಾರತದಲ್ಲಿನ ರಾಯಭಾರ ಕಚೇರಿಗೆ ಕಳುಹಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
1962ರ ಭಾರತ-ಚೀನಾ ಯುದ್ಧ
ಈ ಯುದ್ಧದಲ್ಲಿ, ಅಮೆರಿಕವು ಭಾರತಕ್ಕೆ ಸಹಾಯ ಮಾಡಿತು. ಮಿಲಿಟರಿ ಸರಬರಾಜುಗಳನ್ನು ವಿಮಾನದ ಮೂಲಕ ಸಾಗಿಸಿತು. ಆದಾಗ್ಯೂ, ಈ ರೀತಿಯಾಗಿ ಸೃಷ್ಟಿಯಾದ ಸೌಹಾರ್ದತೆಯನ್ನು ಬಳಸಿಕೊಂಡು ಅದು ಯುಕೆ ಜೊತೆ ಸೇರಿ ಭಾರತವನ್ನು ಪಾಕಿಸ್ತಾನದೊಂದಿಗೆ ಮಾತುಕತೆಗೆ ಒತ್ತಡ ಹೇರಿತು. ಆರು ಸುತ್ತಿನ ಮಾತುಕತೆಗಳು ನಡೆದವು. ಆದರೆ ಯಾವುದೇ ಪ್ರಗತಿಯಾಗಲಿಲ್ಲ. ಆಗ ಉಭಯ ದೇಶಗಳ ನಡುವೆ ಹೆಚ್ಚಿನ ಸಂಘರ್ಷ ಆಗದಂತೆ ಯುಎಸ್ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ತಡೆದರು.
ಯುದ್ಧದ ಸಮಯದಲ್ಲಿ ಪಾಕಿಸ್ತಾನದ ತಟಸ್ಥತೆಗೆ ಕಾಶ್ಮೀರದಲ್ಲಿ ಭಾರತದಿಂದ ಪರಿಹಾರ ಬೇಕೆಂದು ಆಗ ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್, ಕೆನಡಿಗೆ ಹೇಳಿದರು. ಅಂತಹ ಯಾವುದೇ ಪರಿಹಾರವನ್ನು ಸಹಿಸಲಾಗುವುದಿಲ್ಲ. ಹಿಮಾಲಯ ಯುದ್ಧದಲ್ಲಿ ಪಾಕಿಸ್ತಾನದ ಹಸ್ತಕ್ಷೇಪವನ್ನು ಅಮೆರಿಕ ಪ್ರತಿಕೂಲ ಕೃತ್ಯವೆಂದು ನೋಡುತ್ತದೆ ಎಂದು ಕೆನಡಿ ಅಯೂಬ್‌ಗೆ ಸ್ಪಷ್ಟಪಡಿಸಿದರು.
1971ರ ಭಾರತ-ಪಾಕಿಸ್ತಾನ ಯುದ್ಧ
ಅಮೆರಿಕವು ಪಾಕಿಸ್ತಾನವನ್ನು ಅತ್ಯಂತ ಬಲವಾಗಿ ಮತ್ತು ಸಾರ್ವಜನಿಕವಾಗಿ ಬೆಂಬಲಿಸಿದ ಸಂದರ್ಭ ಇದಾಗಿತ್ತು. ಬಂಗಾಳ ಕೊಲ್ಲಿಯ ಕಡೆಗೆ ಯುದ್ಧನೌಕೆಗಳನ್ನು ಸಹ ರವಾನಿಸಿತ್ತು. ಅಮೆರಿಕ ವಿದೇಶಾಂಗ ಇಲಾಖೆಯು ಇತಿಹಾಸಕಾರರ ಕಚೇರಿ ಎಂಬ ವೆಬ್‌ಸೈಟ್ ಅನ್ನು ಹೊಂದಿದೆ. 1971ರ ಯುದ್ಧದ ಕುರಿತಾದ ಅದರ ಲೇಖನದಲ್ಲಿ, ಪಾಕಿಸ್ತಾನವು ಅಮೆರಿಕ ಮತ್ತು ಚೀನಾ ರಾಜತಾಂತ್ರಿಕ ಸಂಬಂಧಗಳನ್ನು ಪ್ರಾರಂಭಿಸಲು ಸಹಾಯ ಮಾಡಿದೆ. ಹೀಗಾಗಿ, ಅಮೆರಿಕವು ಭಾರತದ ವಿರುದ್ಧ ಪಾಕಿಸ್ತಾನವನ್ನು ಬೆಂಬಲಿಸಲು ನಿರ್ಧರಿಸಿತು ಎಂದು ಹೇಳುತ್ತದೆ.
1999ರ ಕಾರ್ಗಿಲ್ ಯುದ್ಧ
ಹಿಂದಿನ ಯುದ್ಧದಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ಹತ್ತಿರವಾಗಿತ್ತು. ಆದರೆ, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತದೊಂದಿಗಿನ ತನ್ನ ಸಂಬಂಧವನ್ನು ಮರು ವ್ಯಾಖ್ಯಾನಿಸಿತು. ಪಾಕಿಸ್ತಾನವು ಕಾರ್ಗಿಲ್ ಬಳಿ ನಿಯಂತ್ರಣ ರೇಖೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದೆ ಎಂದು ಅಮೆರಿಕ ಹೇಳಿತು. ಆಗಿನ ಅಧ್ಯಕ್ಷ ಬಿಲ್ ಕ್ಲಿಂಟನ್, ಪಾಕಿಸ್ತಾನವು ಯುದ್ಧವನ್ನು ಎದುರಿಸುವ ಅಪಾಯವನ್ನುಂಟುಮಾಡಿದೆ ಎಂದು ದೂಷಿಸಲು ಕೂಡ ಹಿಂಜರಿಯಲಿಲ್ಲ. ಮೊದಲ ಬಾರಿಗೆ, ಅಮೆರಿಕದ ಆಡಳಿತವು ಪಾಕಿಸ್ತಾನದ ಆಕ್ರಮಣದ ವಿರುದ್ಧ ಭಾರತದ ಪರವಾಗಿ ಸಾರ್ವಜನಿಕವಾಗಿ ನಿಂತಿದ ಸಂದರ್ಭ ಇದಾಗಿತ್ತು. ಪಾಕಿಸ್ತಾನವನ್ನು ಐಔಅ ಹಿಂದೆ ಸರಿಯುವಂತೆ ಮಾಡುವಲ್ಲಿ ಕ್ಲಿಂಟನ್ ಪ್ರಮುಖ ಪಾತ್ರ ವಹಿಸಿದರು. ಇದರ ನಂತರ, 2000 ರಲ್ಲಿ ಕ್ಲಿಂಟನ್ ಉಪಖಂಡಕ್ಕೆ ಭೇಟಿ ನೀಡಿದರು. 20 ವರ್ಷಗಳಿಗೂ ಹೆಚ್ಚು ಅವಧಿಯಲ್ಲಿ ಭಾರತಕ್ಕೆ ಬಂದ ಮೊದಲ ಅಮೆರಿಕ ಅಧ್ಯಕ್ಷರು ಅವರು. ಈ ಯುದ್ಧಗಳಲ್ಲದೆ, 2001 ರ ಸಂಸತ್ತಿನ ದಾಳಿ ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಕೆಲಸ ಮಾಡಿದೆ.