ನವದೆಹಲಿ: ಒಮಾನ್ (Oman) ಕರಾವಳಿಯಲ್ಲಿ 24 ಭಾರತೀಯ ಸಿಬ್ಬಂದಿ (Indian Crew) ಇದ್ದ ವಾಣಿಜ್ಯ ಹಡಗಿನ ಮೇಲೆ ಅಮೆರಿಕ (US Attack) ನಡೆಸಿದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ.
ದೊಡ್ಡ ಬೆಳವಣಿಗೆಯೊಂದರಲ್ಲಿ, ದಾಳಿಯ ನಂತರ ದೆಹಲಿಯಲ್ಲಿರುವ ಅಮೆರಿಕದ ಉನ್ನತ ರಾಜತಾಂತ್ರಿಕರಿಗೆ ಭಾರತ ಡಿಮಾರ್ಚ್ ಜಾರಿ ಮಾಡಿದೆ. ಇದನ್ನೂ ಓದಿ: ಹಡಗು ಮುಳುಗುತ್ತಿದೆ.. ಸಹಾಯ ಮಾಡಿ: ಅಮೆರಿಕ ಕ್ಷಿಪಣಿ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಸಿಬ್ಬಂದಿ ಕರೆ
ಒಮಾನ್ ಕರಾವಳಿಯಲ್ಲಿ ಸೆಟ್ಟೆಬೆಲ್ಲೊ ವಾಣಿಜ್ಯ ಹಡಗಿನ ಮೇಲೆ ನಡೆದ ದಾಳಿಯನ್ನು ನಾವು ಖಂಡಿಸುತ್ತೇವೆ. ಹಡಗಿನಲ್ಲಿದ್ದ 24 ಭಾರತೀಯ ಸಿಬ್ಬಂದಿಯಲ್ಲಿ ಇಲ್ಲಿಯವರೆಗೆ 21 ಭಾರತೀಯರನ್ನು ರಕ್ಷಿಸಲಾಗಿದೆ. 3 ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Our statement on the attack on a commercial vessel off the coast of Oman ⬇️https://t.co/w405oJsHmZ pic.twitter.com/m0U3U81hQn
— Randhir Jaiswal (@MEAIndia) June 10, 2026
ಈ ಪ್ರದೇಶದಲ್ಲಿ ಹಡಗು ಸಾಗಣೆಯ ಮೇಲಿನ ದಾಳಿಗಳು ತೀವ್ರ ಕಳವಳಕಾರಿ. ಇದು ಮಧ್ಯಪ್ರಾಚ್ಯ ಸಂಘರ್ಷದ ನೇರ ಪರಿಣಾಮ ಎಂದು ಭಾರತ ಅಸಮಾಧಾನ ಹೊರಹಾಕಿದೆ.
ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಲು ಸಾಧ್ಯವಾಗುವಂತೆ, ಉದ್ವಿಗ್ನತೆಯನ್ನು ತಕ್ಷಣವೇ ಕಡಿಮೆ ಮಾಡಲು ಮತ್ತು ರಾಜತಾಂತ್ರಿಕ ಪರಿಹಾರಕ್ಕಾಗಿ ನಡೆಯುತ್ತಿರುವ ಮಾತುಕತೆಗಳನ್ನು ಮುಕ್ತಾಯಗೊಳಿಸಲು ನಾವು ನಮ್ಮ ಕರೆಯನ್ನು ಪುನರುಚ್ಚರಿಸುತ್ತೇವೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗು ಸಾಗಣೆ ಮತ್ತು ನಾಗರಿಕ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದು ಕೊನೆಗೊಳ್ಳಬೇಕು. ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಈ ಪ್ರದೇಶದಲ್ಲಿನ ಜಲಮಾರ್ಗಗಳ ಮೂಲಕ ಮುಕ್ತ ಮತ್ತು ಅಡೆತಡೆಯಿಲ್ಲದ ಸಂಚರಣೆಯನ್ನು ಆದಷ್ಟು ಬೇಗ ಪುನಃಸ್ಥಾಪಿಸಬೇಕು ಎಂದು ಭಾರತ ಒತ್ತಾಯಿಸಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ; ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ
ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನಾಗರಾಜ್ ನಾಯ್ಡು, ಅಮೆರಿಕದ ಉಸ್ತುವಾರಿ ಜೇಸನ್ ಮೀಕ್ಸ್ ಅವರ ಎದುರು ಹಡಗಿನ ಮೇಲಿನ ದಾಳಿ ಖಂಡಿಸಿದ್ದಾರೆ.

