ದಕ್ಷಿಣ ಆಫ್ರಿಕಾ: ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು(Immigrants) ದೇಶದಿಂದ ಹೊರಹಾಕುವಂತೆ ಒತ್ತಾಯಿಸಿ ದಕ್ಷಿಣ ಆಫ್ರಿಕಾದ(South Africa) ಪ್ರಮುಖ ನಗರಗಳಲ್ಲಿ ಸಾವಿರಾರು ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪರಿಸ್ಥಿತಿ ಉದ್ವಿಗ್ನವಾಗುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಲಾಗಿತ್ತು. ಅಕ್ರಮ ವಲಸಿಗರು ದೇಶ ತೊರೆಯಲು ಪ್ರತಿಭಟನಾ ಸಂಘಟನೆಗಳು ಮಂಗಳವಾರದವರೆಗೆ ಗಡುವು ನೀಡಿದ್ದವು. ಈ ಬೆನ್ನಲ್ಲೇ ಹಲವು ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದವು. ಪರಿಸ್ಥಿತಿ ಹದಗೆಡುವ ಭೀತಿಯಿಂದ ಅನೇಕ ವಿದೇಶಿ ನಾಗರಿಕರು ಈಗಾಗಲೇ ದೇಶ ತೊರೆದಿದ್ದಾರೆ. ಇದುವರೆಗೆ ಸುಮಾರು 25 ಸಾವಿರ ಅಕ್ರಮ ವಲಸಿಗರನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೋಹಾನ್ಸ್‌ಬರ್ಗ್‌ನಲ್ಲಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಲವು ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಯಿಯೋವಿಲ್ ಪ್ರದೇಶದಲ್ಲಿ ಕೆಲ ಪ್ರತಿಭಟನಾಕಾರರು ಮನೆಗಳ ಮೇಲೆ ಕಲ್ಲು ತೂರಿ ಕಿಟಕಿಗಳನ್ನು ಒಡೆದಿದ್ದಾರೆ.
ಜೋಹಾನ್ಸ್‌ಬರ್ಗ್ ಸಮೀಪದ ಜರ್ಮಿಸ್ಟನ್ ಪ್ರದೇಶದಲ್ಲಿ ಕೆಲ ಪ್ರತಿಭಟನಾಕಾರರು ವಿದೇಶಿ ಪ್ರಜೆಗಳೆಂದು ಶಂಕಿಸಿದ್ದವರನ್ನು ಮನೆಗಳಿಂದ ಹೊರಗೆ ಕರೆದು ಪೊಲೀಸರಿಗೆ ಒಪ್ಪಿಸಿ, ಅವರ ದಾಖಲೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಪ್ರತಿಭಟನೆ ವೇಳೆ ಜೋಹಾನ್ಸ್‌ಬರ್ಗ್‌ನ ಸೊವೆಟೊ ಪ್ರದೇಶದಲ್ಲಿ ವಿದೇಶಿಯೊಬ್ಬರ ಅಂಗಡಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲೂ ದರೋಡೆ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ. ವಿದೇಶಿ ಪ್ರಜೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಹಾಗೂ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿಯೂ ಇಬ್ಬರನ್ನು ಬಂಧಿಸಲಾಗಿದೆ.ಇದನ್ನೂ ಓದಿ: ಭಾರತ-ಸೀಶೆಲ್ಸ್ ಬಾಂಧವ್ಯಕ್ಕೆ ಚಟ್ನಿ, ಸಮೋಸಾ ಸಾಕ್ಷಿ ಎಂದ ಪ್ರಧಾನಿ ಮೋದಿ
ಡರ್ಬನ್ ಸೇರಿದಂತೆ ಹಲವು ನಗರಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿಯನ್ನು ಸರ್ಕಾರಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಪ್ರತಿಭಟನೆಗೆ ನೇತೃತ್ವ ವಹಿಸಿರುವ ಸಂಘಟನೆಗಳು, ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವವರೆಗೆ ಮುಂದಿನ ಆರು ತಿಂಗಳು ಪ್ರತಿ ಗುರುವಾರ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿವೆ. ಇದರ ನಡುವೆಯೇ, ಅಧ್ಯಕ್ಷ ಸಿರಿಲ್ ರಾಮಫೋಸಾ ಪ್ರತಿಭಟನೆಗೂ ಮುನ್ನ ಸಂಘಟನೆಯ ಮುಖಂಡರೊಂದಿಗೆ ಸಭೆ ನಡೆಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ್ದಾರೆ. ವಲಸೆ ನೀತಿಯಲ್ಲಿ ಸುಧಾರಣೆ ಅಗತ್ಯವಿದೆ ಎಂಬುದನ್ನೂ ಅವರು ಒಪ್ಪಿಕೊಂಡಿದ್ದಾರೆ.ಇದನ್ನೂ ಓದಿ: ನಾವು ಪಾಕಿಸ್ತಾನದ ಭಾಗವಲ್ಲ, ಭಾರತದ ನೆರವು ಕೋರುತ್ತೇವೆ – ಮುನೀರ್ ವಿರುದ್ಧ PoK ಜನರ ಆಕ್ರೋಶ
