ಮುಜಾಫರಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ ಮತ್ತು ರಾಜಕೀಯ ದಮನ ನೀತಿಯ ವಿರುದ್ಧ ಸಾರ್ವಜನಿಕರ ಆಕ್ರೋಶ ಸ್ಫೋಟಗೊಂಡಿದೆ.
ಜೂನ್ 9 ರಿಂದ ನಿಯಂತ್ರಣ ರೇಖೆಯ (LoC) ಬಳಿ ಪ್ರತ್ಯೇಕ ಧರಣಿ ನಡೆಯುತ್ತಿದೆ. ಮುಜಾಫರಾಬಾದ್ ಸೇರಿದಂತೆ ಪ್ರಮುಖ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದು, ಆಕ್ರೋಶಿತ ಪ್ರತಿಭಟನಾಕಾರರು ಪಾಕ್ ಸರ್ಕಾರಕ್ಕೆ ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಯಾವುದೇ ಕಾರಣಕ್ಕೂ ಪಾಕಿಸ್ತಾನದ (Pakistan) ಭಾಗವಲ್ಲ ಎಂದು ಘೋಷಿಸಿರುವ ಅವರು, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನೆರವಿಗಾಗಿ ಭಾರತದ ಮೊರೆ ಹೋಗುವುದಾಗಿ ನೇರ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ (Asim Munir) ಅವರನ್ನು ತಿರಸ್ಕರಿಸಿದ ಜನತೆ ಸರ್ವಾಧಿಕಾರಿಯನ್ನು ಸಹಿಸುವುದಿಲ್ಲ ಎಂದು ಸಿಟ್ಟು ಹೊರಹಾಕಿದ್ದಾರೆ.
*RAWALAKOT ROARS:* “PoJK Is Not Part of Pakistan” Thousands defy Islamabad. Sit-in at LoC since 9 June. Aman Khan: “If Pakistan blocks food, PoK’s borders could open. Islamabad will beg PoK to stay.” @CMShehbaz oppression has consequences.
@UN @POTUS @narendramodi… pic.twitter.com/GhI0XWjwDk— 🇮🇳Bhartiyavibhooti🇮🇳 (@Bhartiyavibhoti) June 30, 2026
ಪ್ರತಿಭಟನೆ ಯಾಕೆ?
ಗೋಧಿ ಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರೊಂದಿಗೆ ವಿದ್ಯುತ್ ಬಿಲ್ ಹಾಗೂ ಅಗತ್ಯ ವಸ್ತುಗಳ ಮೇಲೆ ವಿಧಿಸಲಾಗಿರುವ ಭಾರೀ ತೆರಿಗೆಯನ್ನು ಹಿಂಪಡೆಯಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ಈ ಭಾಗದ ಜಲವಿದ್ಯುತ್ ಸಂಪನ್ಮೂಲಗಳನ್ನು ಬಳಸಿಕೊಂಡು ಪಾಕಿಸ್ತಾನದ ಇತರ ಪ್ರಾಂತ್ಯಗಳಿಗೆ ವಿದ್ಯುತ್ ನೀಡಲಾಗುತ್ತಿದೆ. ಆದರೆ ಮೂಲ ನಿವಾಸಿಗಳಾದ ನಮಗೇ ಕತ್ತಲೆಯಲ್ಲಿ ಇಡಲಾಗುತ್ತಿದೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಾಕಿಸ್ತಾನ ಸರ್ಕಾರ ನೀಡಿದ್ದ ಸಬ್ಸಿಡಿ ಮತ್ತು ಪರಿಹಾರದ ಭರವಸೆಗಳು ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಜಾರಿಯಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಇದನ್ನೂ ಓದಿ: ಕರಾಚಿ ಭಯೋತ್ಪಾದಕ ದಾಳಿ ಹಿಂದೆ ನಮ್ಮ ಪಾತ್ರವಿಲ್ಲ – ಪಾಕ್ ಆರೋಪ ತಿರಸ್ಕರಿಸಿದ ಭಾರತ
ಭಾರತದ ನೆರವು ಕೋರುತ್ತೇವೆ
ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನಾಯಕರು ಪಾಕ್ ಆಡಳಿತಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನಾ ನಿರತ ಮುಖಂಡರೊಬ್ಬರು ಬಹಿರಂಗವಾಗಿಯೇ, ನಾವು ಪಾಕಿಸ್ತಾನದ ಭಾಗವಲ್ಲ, ನಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಿ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಾವು ಗಡಿ ನಿಯಂತ್ರಣ ರೇಖೆಯನ್ನು (LoC) ದಾಟಿ ಭಾರತದ ನೆರವು ಕೋರಲು ಹಿಂಜರಿಯುವುದಿಲ್ಲ ಎಂದು ಇಸ್ಲಾಮಾಬಾದ್‌ಗೆ ಅಂತಿಮ ಗಡುವು ನೀಡಿದ್ದಾರೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕಿಸ್ತಾನ ಸರ್ಕಾರವು ಭದ್ರತಾ ಪಡೆಗಳು ಮತ್ತು ರೇಂಜರ್ಸ್‌ಗಳನ್ನು ನಿಯೋಜಿಸಿದೆ. ಈಗಾಗಲೇ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಹಲವು ಕಡೆಗಳಲ್ಲಿ ತೀವ್ರ ಘರ್ಷಣೆಗಳು ವರದಿಯಾಗಿವೆ. ಆದಾಗ್ಯೂ, ತಮಗೆ ನ್ಯಾಯ ಸಿಗುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಅಲ್ಲಿನ ನಾಗರಿಕರು ಪಟ್ಟು ಹಿಡಿದಿದ್ದು, PoK ಭಾಗದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿದಿದೆ.
ಪ್ರತಿಭಟನೆಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಸೀಮಿತವಾಗಿಲ್ಲ, ಮತ್ತು ವಿದೇಶಗಳಲ್ಲಿ ವಾಸಿಸುವ ಬೆಂಬಲಿಗರು ಹಲವಾರು ದೇಶಗಳಲ್ಲಿ ಪಾಕ್ ರಾಯಭಾರಿ ಕಚೇರಿ ಹೊರಗಡೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
