– ನಮ್ಮತ್ತ ಬೆರಳು ತೋರಿಸೋ ಬದಲು ಭಯೋತ್ಪಾದನೆ ಮಟ್ಟ ಹಾಕಿ
ನವದೆಹಲಿ: ಕರಾಚಿಯಲ್ಲಿರುವ (Karachi) ಪಾಕ್ ಸೇನಾ ನೆಲೆಯ (Pak Army Base) ಮೇಲೆ ಉಗ್ರರು ನಡೆಸಿದ ದಾಳಿ ಹಿಂದೆ ತನ್ನ ಪಾತ್ರವಿದೆ ಎನ್ನುವ ಪಾಕಿಸ್ತಾನದ ಆರೋಪಗಳನ್ನು ಭಾರತ ತಿರಸ್ಕರಿಸಿದೆ.
ತನ್ನ ವಿರುದ್ಧದ ಆರೋಪಗಳನ್ನು ಆಧಾರ ರಹಿತ ಎಂದು ಕರೆದಿರುವ ಭಾರತ, ಪಾಕಿಸ್ತಾನ ಮೊದಲು ತನ್ನ ಸ್ವಂತ ನೆಲದಲ್ಲಿ ಕೆಲಸ ಮಾಡ್ತಿರೋ ಭಯೋತ್ಪಾದಕ ಮೂಲಕ ಸೌರ್ಯಗಳನ್ನು ನಾಶಪಡಿಸುವತ್ತ ಗಮನಹರಿಸುವಂತೆ ಒತ್ತಾಯಿಸಿದೆ.
ಈ ಕುರಿತು ಮಾಧ್ಯಮಗಳ ಪ್ರಶ್ನೆಗೆ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಉತ್ತರಿಸಿದರು. ಕರಾಚಿಯಲ್ಲಿ ನಡೆದ ಭಯೋತ್ಪಾದಕ ದಾಳಿ ಸಂಬಂಧ ಪಾಕಿಸ್ತಾನ ಭಾರತದ ವಿರುದ್ಧ ಆರೋಪ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಆರೋಪಗಳನ್ನ ಸಾರಾಸಗಟಾಗಿ ತಿರಸ್ಕರಿಸುತ್ತೇವೆ ಎಂದರು.

ಪಾಕಿಸ್ತಾನ ಬೇರೆಯವರ ಕಡೆಗೆ ಬೆರಳು ತೋರಿಸುವ ಬದಲು, ತನ್ನ ಒಳಮುಖವನ್ನು ನೋಡಿಕೊಳ್ಳಬೇಕು. ತನ್ನ ಭೂಪ್ರದೇಶದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನ ಕೆಡವುವತ್ತ ಕ್ರಮ ತೆಗೆದುಕೊಳ್ಳಬೇಕು. ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ ಅವಲಂಬಿಸುವ ಪ್ರವೃತ್ತಿಯನ್ನು ತೊಡೆದುಹಾಕುವತ್ತ ಗಮನ ಹರಿಸಬೇಕು ಎಂದು ತಿರುಗೇಟು ನೀಡಿದರು.
ಕರಾಚಿಯಲ್ಲಿ ಪುಲ್ವಾಮಾ ಮಾದರಿ ದಾಳಿ
ಕರಾಚಿಯಲ್ಲಿರುವ (Karachi) ಪಾಕ್ ಸೇನಾ ನೆಲೆಯ (Pak Army Base) ಮೇಲೆ ಉಗ್ರರು ಪುಲ್ವಾಮಾ ಮಾದರಿ ದಾಳಿ ನಡೆಸಿದ್ದಾರೆ. ಸ್ಫೋಟಕ ತುಂಬಿದ್ದ ವಾಹನವನ್ನು ಗುಲಿಸ್ತಾನ್-ಇ-ಜೌಹರ್‌ನಲ್ಲಿರುವ ಅರೆಸೈನಿಕ ಪಡೆಯ ಪ್ರಾಂತೀಯ ಪ್ರಧಾನ ಕಚೇರಿಗೆ ಉಗ್ರರು ಡಿಕ್ಕಿ ಹೊಡೆಸಿದ್ದಾರೆ. ಈ ದಾಳಿಯಿಂದ ನಾಲ್ವರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ.

ಈ ಘಟನೆಯ ಬಳಿಕ ಮತ್ತೊಂದು ದಾಳಿಗೆ ಸಜ್ಜಾಗಿದ್ದ ಉಗ್ರರ ಮೇಲೆ ಪಾಕ್ ಪಡೆ (Pak Army) ಗುಂಡಿನ ದಾಳಿ ನಡೆಸಿದ್ದು, 6 ಮಂದಿ ಉಗ್ರರು ಬಲಿಯಾಗಿದ್ದಾರೆ. ಸ್ಫೋಟದ ನಂತರ ಮೊಸಾಮಿಯಾತ್ ಚೌರಂಗಿ ಪ್ರದೇಶದ ಸುತ್ತಲೂ ಭಾರೀ ಗುಂಡಿನ ಸದ್ದು ಕೇಳಿಬಂದಿತು. ಸಶಸ್ತ್ರ ಸೇವಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರೆದಿದ್ದರು. ಕ್ಷಿಪ್ರ ಪ್ರತಿಕ್ರಿಯೆ ಪಡೆ ಮತ್ತು ಪೊಲೀಸ್ ಕಮಾಂಡೋಗಳಂತಹ ವಿಶೇಷ ಘಟಕಗಳನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು.
ಸುಮಾರು 90 ನಿಮಿಷಗಳ ಗುಂಡಿನ ಚಕಮಕಿ ನಂತರ 6 ಉಗ್ರರನ್ನ ಹತ್ಯೆಗೈದು ಓರ್ವನನ್ನ ಜೀವಂತವಾಗಿ ಸೆರೆಹಿಡಿದಿರುವುದಾಗಿ ಪಾಕ್ ಸೇನೆ ಹೇಳಿಕೊಂಡಿತು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಮಧ್ಯೆ ಭಾರತದ ವಿದೇಶಾಂಗ ಸಚಿವಾಲಯ ದೇಶದ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದೆ.
