ಬೆಂಗಳೂರು: ವಿವಾದಾತ್ಮಕ ಬಸವ ಮಂಟಪ(Basava Mantapa) ಕೃತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜಗಿಮಠ್(Ravi Hanjagimath) ಅವರಿಗೆ ಬೆಂಗಳೂರಿನ 56ನೇ ಸಿಸಿಹೆಚ್ (CCH) ನ್ಯಾಯಾಲಯವು ಇಂದು ನಿರೀಕ್ಷಣಾ ಜಾಮೀನು(Bail) ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮೋಹನ್ ಪ್ರಭು ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದರು. ಇಂದು ಅರ್ಜಿಯ ಆದೇಶ ಪ್ರಕಟಿಸಿದ ನ್ಯಾಯಾಧೀಶರು, ಲೇಖಕ ರವಿ ಹಂಜ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದ್ದಾರೆ.
ವಿಚಾರಣೆ ವೇಳೆ ಅರ್ಜಿದಾರ ರವಿ ಹಂಜ್ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಅರುಣ್ ಶ್ಯಾಮ್, “ಕಳೆದ ಎರಡು ವರ್ಷಗಳಿಂದ ಈ ಬರಹಗಳು ಪತ್ರಿಕೆಯಲ್ಲಿ ಲೇಖನಗಳಾಗಿ ಪ್ರಕಟವಾಗುತ್ತಿದ್ದವು. ಆಗ ಯಾರೊಬ್ಬರೂ ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿರಲಿಲ್ಲ. ಆದರೆ, ಈಗ ಅದೇ ಲೇಖನಗಳನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದಾಗ ಉದ್ದೇಶಪೂರ್ವಕವಾಗಿ ವಿರೋಧಿಸಿ ದೂರು ನೀಡಲಾಗಿದೆ. ಇದೊಂದು ಸಂಪೂರ್ಣ ರಾಜಕೀಯ ಪ್ರೇರಿತ ದೂರು” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪೊಲೀಸರು ಯಾವುದೇ ಪ್ರಾಥಮಿಕ ವಿಚಾರಣೆ ನಡೆಸದೆ ಏಕಾಏಕಿ ಎಫ್ಐಆರ್ (FIR) ದಾಖಲಿಸಿದ್ದಾರೆ. ಒಂದು ವೇಳೆ ಅರ್ಜಿದಾರರು ಪೊಲೀಸರ ವಿಚಾರಣೆಗೆ ಹಾಜರಾದರೆ ಅವರನ್ನು ಬಂಧಿಸುವ ಭೀತಿ ಇದೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು ಎಂದು ಅರುಣ್ ಶ್ಯಾಮ್ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ್ದ ಸರ್ಕಾರಿ ಅಭಿಯೋಜಕರು, ಅರ್ಜಿದಾರರು ತಮ್ಮ ಕೃತಿಯ ಮೂಲಕ ಜಗಜ್ಯೋತಿ ಬಸವಣ್ಣನವರಿಗೆ ಅಪಮಾನ ಮಾಡಿದ್ದಾರೆ. ಇದರಿಂದ ಸಮಾಜದ ಭಾವನೆಗಳಿಗೆ ಧಕ್ಕೆಯಾಗಿದ್ದು, ಸರ್ಕಾರ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿ ನಿನ್ನೆ ಆದೇಶ ಕಾಯ್ದಿರಿಸಿದ್ದ 56ನೇ ಸಿಸಿಹೆಚ್ ನ್ಯಾಯಾಲಯವು, ಇಂದು ಲೇಖಕ ರವಿ ಹಂಜ್ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೂಲಕ ತಾತ್ಕಾಲಿಕ ರಿಲೀಫ್ ನೀಡಿದೆ.
ರವಿ ಹಂಜ್ ವಚನವೊಂದನ್ನು ಉಲ್ಲೇಖಿಸಿ ಬಸವಣ್ಣನನ್ನು ಕಳ್ಳ ಮತ್ತು ಕೊಲೆಗಾರ ಎಂಬಂತೆ ಬಿಂಬಿಸಿ ಅವಹೇಳನ ಮಾಡಿರುವುದು ಹಾಗೂ ಲಿಂಗಾಯತ ಪದವನ್ನು ಲಿಂಗಾಹತ ಎಂದು ತಿರುಚಿದ ಹಾಗೂ ಸಮಾಜದ ಶಾಂತಿ ಕದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಲಾಗಿತ್ತು.
