ಬೆಂಗಳೂರು: ಬೆಂಗಳೂರಿನ (Bengaluru) ಬನಶಂಕರಿ 3ನೇ ಹಂತದ ಕೆಂಪೇಗೌಡ ಬಡಾವಣೆ ರಸ್ತೆಯಲ್ಲಿರುವ ಜಂಕ್ಷನ್ ವಾಹನ ಸವಾರರ ಪಾಲಿಗೆ ಡೆಡ್ಲಿ ಆಕ್ಸಿಡೆಂಟ್ ಜಂಕ್ಷನ್ (Danger Junction)ಆಗಿ ಮಾರ್ಪಟ್ಟಿದೆ. ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಇದುವರೆಗೆ ಒಂದೇ ಜಾಗದಲ್ಲಿ ಆರು ಬಾರಿ ಅಪಘಾತ (Accident Area) ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬನಶಂಕರಿ 3ನೇ ಹಂತದ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಪಾರ್ಕ್ ರಸ್ತೆ, ಗಣೇಶ ದೇವಸ್ಥಾನದ ಸಮೀಪದ ಈ ಜಂಕ್ಷನ್‌ನಲ್ಲಿ ನಾಲ್ಕು ರಸ್ತೆಗಳು ಒಂದೇ ಕಡೆ ಸೇರುತ್ತವೆ. ಆದರೆ ಇಲ್ಲಿ ಹಂಪ್, ಎಚ್ಚರಿಕೆ ಫಲಕ ಅಥವಾ ವೇಗ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ, ವಿವಿಧ ದಿಕ್ಕುಗಳಿಂದ ವೇಗವಾಗಿ ಬರುವ ವಾಹನಗಳು ಪರಸ್ಪರ ಡಿಕ್ಕಿಯಾಗುತ್ತಿವೆ.
ಸ್ಥಳೀಯರ ಪ್ರಕಾರ, ಈ ಜಂಕ್ಷನ್‌ನಲ್ಲಿ ಪ್ರತಿದಿನ ಎರಡು-ಮೂರು ಅಪಘಾತಗಳು ನಡೆಯುವುದು ಸಾಮಾನ್ಯವಾಗಿದೆ. ವಾಹನ ಸವಾರರು ಮಾತ್ರವಲ್ಲ, ರಸ್ತೆ ಬದಿ ನಿವಾಸಿಗಳೂ ಆತಂಕದಲ್ಲಿದ್ದಾರೆ. ಮನೆಯಿಂದ ಹೊರಬರುವಾಗಲೂ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳುತ್ತಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಎದುರು ಕಣ್ಣೀರಿಟ್ಟ ಶಾಸಕ ಪ್ರದೀಪ್ ಈಶ್ವರ್
ಈ ಭಾಗದಲ್ಲಿ ನಡೆದ ಹಲವು ಅಪಘಾತಗಳ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕೆಲವೇ ಕ್ಷಣಗಳ ಅಜಾಗರೂಕತೆ ಮತ್ತು ಅತಿವೇಗದಿಂದ ಅಪಘಾತಗಳು ಹೇಗೆ ಸಂಭವಿಸುತ್ತಿವೆ ಎಂಬುದು ದೃಶ್ಯಗಳಲ್ಲಿ ಕಂಡುಬಂದಿದೆ.
ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕೂಡಲೇ ಹಂಪ್ ನಿರ್ಮಾಣ, ಎಚ್ಚರಿಕೆ ಫಲಕ ಅಳವಡಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಪ್ರದೇಶವು ಬನಶಂಕರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ್ದು, ಅಪಘಾತಗಳನ್ನು ತಡೆಗಟ್ಟಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.ಇದನ್ನೂ ಓದಿ: CET: ಅಣಕು ಫಲಿತಾಂಶ ನಂತರ ಆಪ್ಷನ್ಸ್ ದಾಖಲಿಸಲು ಅವಕಾಶ – ಕೆಇಎ
