ಹುಬ್ಬಳ್ಳಿ: ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಂಬ್ ಸ್ಫೋಟ ಪ್ರಕರಣ ಹಿನ್ನೆಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವ ಸುರೇಶ್ ಅಂಗಡಿ ಅವರು ಸೋಮವಾರ ನಡೆದ ಘಟನೆ ಕುರಿತಂತೆ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಘಟನೆ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಘಟನೆ ಕುರಿತಂತೆ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಸ್ಟೇಶನ್ ಮಾಸ್ಟರ್ ಎಸ್.ಎಂ ವರುಣಕುಮಾರ್, ಆರ್‌ಪಿಎಫ್ ಎಎಸ್‍ಐ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
Advertisement
Advertisement
ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಮೂರು ದಿನಗಳಲ್ಲಿ ಈ ತನಿಖೆ ಮುಗಿಯಬೇಕು ಎಂದು ಸೂಚನೆ ನೀಡಿದ್ದೇನೆ. ಹೀಗಾಗಿ ಮೂರು ದಿನಗಳಲ್ಲಿ ಈ ಘಟನೆ ಕುರಿತು ವರದಿ ಬರಲಿದೆ ಎಂದರು. ಜೊತೆಗೆ ರೈಲ್ವೆ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು. ವಿಮಾನ ನಿಲ್ದಾಣದ ಮಾದರಿಯಂತೆ ರೈಲ್ವೆ ನಿಲ್ದಾಣದಲ್ಲಿಯೂ ಸ್ಕ್ಯಾನಿಂಗ್ ಮಶಿನ್‍ಗಳನ್ನ ಅಳವಡಿಸಲಾಗುವುದು. ರೈಲ್ವೆ ನಿಲ್ದಾಣದಲ್ಲಿ ಅನಧಿಕೃತ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಮೇಲೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಸ್ಪಷ್ಟನೆ ನೀಡಿದರು.
Advertisement
Advertisement
ನಡೆದಿದ್ದೇನು?
ಸೋಮವಾರ ವಿಜಯವಾಡ-ಅಮರಾವತಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ನಿಂತಿತ್ತು. ಈ ವೇಳೆ ಅನುಮಾನಾಸ್ಪದ ಬಾಕ್ಸ್‌ವೊಂದನ್ನು ಆರ್‌ಪಿಎಫ್ ಪೇದೆ ರವಿಕುಮಾರ್ ರಾಥೋಡ್ ವಶಕ್ಕೆ ಪಡೆದು, ರೈಲ್ವೇ ಮ್ಯಾನೇಜರ್ ಕಚೇರಿಗೆ ಒಪ್ಪಿಸಿದ್ದರು. ರಟ್ಟಿನ ಬಾಕ್ಸ್ನೊಳಗೆ ಬಕೀಟ್‍ನಲ್ಲಿ ಚಿಕ್ಕಚಿಕ್ಕದಾದ 8 ಬಾಕ್ಸ್‌ನಲ್ಲಿದ್ದ ನಿಂಬೆಹಣ್ಣಿನ ಗಾತ್ರದ ಬಾಂಬ್‍ಗಳ ಪೈಕಿ ಒಂದನ್ನು ಓಪನ್ ಮಾಡಲು ಪೇದೆ ಹಾಗೂ ರೈಲ್ವೆ ಮಾನೇಜರ್ ಮುಂದಾಗಿದ್ದರು.
ಈ ವೇಳೆ ಪೇದೆ ರವಿಕುಮಾರ್ ತಮಗೆ ಪರಿಚಯವಿದ್ದ ಹುಸೇನ್‍ಸಾಬ್(22) ಅವರನ್ನು ಕರೆದು ಬಾಕ್ಸ್ ಓಪನ್ ಮಾಡುವಂತೆ ಸೂಚನೆ ನೀಡಿದ್ದರು. ಬಾಕ್ಸ್ ತೆಗೆದ ಹುಸೇನ್‍ಸಾಬ್ ನಿಂಬೆಹಣ್ಣು ಗಾತ್ರದ ವಸ್ತುವನ್ನು ಕಲ್ಲಿನಿಂದ ಒಡೆಯುತ್ತಿದ್ದಂತೆ ಬ್ಲಾಸ್ಟ್ ಆಗಿದೆ. ಪರಿಣಾಮ ಹುಸೇನ್‍ಸಾಬ್ ಕೈ ಕಟ್ ಆಗಿದೆ. ರಕ್ತಸ್ರಾವದಿಂದ ಬಿದ್ದು ಕಣ್ಣೀರು ಹಾಕುತ್ತಿದ್ದ ಹುಸೇನ್‍ಸಾಬ್ ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಕ್ಸ್‌ನಲ್ಲಿ ಇದ್ದ 12 ಬಾಂಬ್‍ಗಳು ಸಕ್ರಿಯವಾಗಿದ್ದು, ಸ್ಥಳಕ್ಕೆ ಬರುವಂತೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ತಿಳಿಸಲಾಗಿತ್ತು. ರೈಲು ನಿಲ್ದಾಣದ ಗಾರ್ಡನ್‍ನಲ್ಲಿ ಮರಳಿನ ಮೂಟೆಗಳ ಮಧ್ಯೆ ಬಾಂಬ್‍ಗಳನ್ನು ಇರಿಸಲಾಗಿತ್ತು.
ವಶಕ್ಕೆ ಪಡೆದ ಸ್ಫೋಟಕವಿದ್ದ ಬಕೀಟ್ ಮೇಲೆ ನೋ ಬಿಜೆಪಿ, ನೋ ಆರ್‌ಎಸ್‌ಎಸ್ ಒನ್ಲೀ ಶಿವಸೇನಾ ಎಂದು ಬರೆಯಲಾಗಿದೆ. ಜೊತೆಗೆ ಕೊಲ್ಲಾಪುರ ಶಾಸಕರ ಹೆಸರನ್ನು ನಮೂದಿಸಲಾಗಿರುವುದು ಭಾರೀ ಅನುಮಾನಕ್ಕೆ ಕಾರಣವಾಗಿತ್ತು. ಸೋಮವಾರ ಎನ್‍ಐಎ ಅಧಿಕಾರಿಗಳು ಹುಬ್ಬಳ್ಳಿಗೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿತ್ತು.