ಬೆಂಗಳೂರು: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಡಬಗೆರೆ – ಚಲ್ಲಘಟ್ಟ(Kadabagere -Challaghatta) ಸಂಪರ್ಕಿಸುವ 11 ಕಿಲೋಮೀಟರ್ ಉದ್ದದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ರಸ್ತೆಯ ಕಳಪೆ ಕಾಮಗಾರಿ ವಿಚಾರ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಮಳೆಯಿಂದಾಗಿ ಕಡಬಗೆರೆ ಬಳಿ ರಸ್ತೆ ಕುಸಿದು ಬಿದ್ದಿದ್ದರೂ, ತನ್ನ ತಪ್ಪನ್ನು ಒಪ್ಪಿಕೊಳ್ಳದ ಬಿಡಿಎ ಈಗ ಅದನ್ನು ಸಮರ್ಥಿಸಿಕೊಳ್ಳಲು ಹೋಗಿ ಮತ್ತಷ್ಟು ಮುಖಭಂಗ ಅನುಭವಿಸಿದ್ದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ರಸ್ತೆ ಕುಸಿದಿರುವ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾದ ವರದಿ ಪ್ರಸಾರ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಡಿಎ ಎಕ್ಸ್ ಮೂಲಕ ಸ್ಪಷ್ಟನೆ ನೀಡಿದೆ. ಅಲ್ಲಿ ಇನ್ನು ಸರ್ವೀಸ್ ರಸ್ತೆ ಕಾಮಗಾರಿಯೇ ಆಗಿಲ್ಲ. ಉದ್ಘಾಟನೆಗೆ ಸಿದ್ಧವಾಗಿರುವ ಮುಖ್ಯ ರಸ್ತೆಗೂ ಮತ್ತು ಈಗ ಕುಸಿದಿರುವ ಜಾಗಕ್ಕೂ ಸಂಬಂಧವಿಲ್ಲ. ಸರ್ವೀಸ್ ರಸ್ತೆ ನಿರ್ಮಾಣವಾಗಬೇಕಿರುವ ಜಾಗದಿಂದ ಮುಂದಕ್ಕೆ ಇನ್ನು ಭೂಸ್ವಾಧೀನ ಪ್ರಕ್ರಿಯೆ ಅಂತಿಮವಾಗಿಲ್ಲ ಎಂದು ಬಿಡಿಎ ಸುಳ್ಳು ಹೇಳಿ ಜಾರಿಕೊಳ್ಳಲು ಯತ್ನಿಸಿದೆ.
ಬಿಡಿಎ ಸುಳ್ಳನ್ನು ಪತ್ತೆ ಹಚ್ಚಿದ ಪಬ್ಲಿಕ್ ಟಿವಿ
ಬಿಡಿಎ ಹೇಳುತ್ತಿರುವುದು ಸಂಪೂರ್ಣ ಸುಳ್ಳು ಎಂಬುದು ಸ್ಥಳ ಪರಿಶೀಲನೆಯಿಂದ ಸಾಬೀತಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಮುಗಿದು, ರಸ್ತೆ ನಿರ್ಮಾಣಕ್ಕೆ ಮುಕ್ತ ಅವಕಾಶವಿದ್ದ ಜಾಗದಲ್ಲೇ ಬಿಡಿಎ ರಸ್ತೆ ನಿರ್ಮಿಸಿತ್ತು. ಅಷ್ಟೇ ಅಲ್ಲದೆ, ರಸ್ತೆ ಕುಸಿಯುವ ಮುನ್ನವೇ ಬಿಡಿಎ ಆ ಸರ್ವೀಸ್ ರಸ್ತೆಗೆ ಸಂಪೂರ್ಣವಾಗಿ ಡಾಂಬರೀಕರಣವನ್ನೂ ಮಾಡಿ ಮುಗಿಸಿತ್ತು.
ರಸ್ತೆ ಕಳಪೆಯಾಗಿ ಕುಸಿದು ಬಿದ್ದು, ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ತಕ್ಷಣವೇ ಬಿಡಿಎ ಅಧಿಕಾರಿಗಳು ತರಾತುರಿಯಲ್ಲಿ ಕುಸಿದ ಜಾಗಕ್ಕೆ ಮತ್ತೆ ಹೊಸದಾಗಿ ಡಾಂಬರು ಹಾಕಿಸಿದ್ದಾರೆ. “ಕಾಮಗಾರಿಯೇ ಆಗಿಲ್ಲ ಎಂದಾದರೆ, ಕುಸಿದ ಜಾಗಕ್ಕೆ ರಾತ್ರೋರಾತ್ರಿ ತರಾತುರಿಯಲ್ಲಿ ಡಾಂಬರೀಕರಣ ಮಾಡಿದ್ದೇಕೆ?” ಎಂದು ಸಾರ್ವಜನಿಕರು ಪ್ರಶ್ನಿಸಿ ಬಿಡಿಎ ತರಾಟೆಗೆ ತೆಗೆದುಕೊಂಡಿದ್ದಾರೆ.

ಸತ್ಯ ಒಪ್ಪಿಕೊಂಡ ಕೆಲಸಗಾರ!
ರಸ್ತೆ ಕುಸಿದಿರುವುದಕ್ಕೆ ಕಳಪೆ ಕಾಮಗಾರಿಯೇ ನೇರ ಕಾರಣ ಎಂಬುದನ್ನು ಸ್ವತಃ ಅಲ್ಲಿನ ಸ್ಥಳೀಯ ಕೆಲಸಗಾರನೇ ಕ್ಯಾಮೆರಾ ಮುಂದೆ ಬಾಯ್ಬಿಟ್ಟಿದ್ದಾನೆ. ರಸ್ತೆ ನಿರ್ಮಾಣದ ಆರಂಭದಲ್ಲಿ ಹಾಕಬೇಕಾಗಿದ್ದ ವೆಟ್ ಮಿಕ್ಸ್ (Wet Mix) ಅನ್ನು ಸರಿಯಾಗಿ ಹಾಕಿರಲಿಲ್ಲ. ಅದರ ಬದಲಾಗಿ ಕೇವಲ ಮಣ್ಣನ್ನು ಅತಿಯಾಗಿ ತುಂಬಿಸಲಾಗಿತ್ತು. ಮಣ್ಣು ಹೆಚ್ಚಾಗಿದ್ದ ಕಾರಣ ಮಳೆಗೆ ನೀರು ನಿಂತು ರಸ್ತೆ ಕುಸಿದು ಬಿದ್ದಿದೆ. ಈಗ ಅದನ್ನು ಸರಿಪಡಿಸುತ್ತಿದ್ದೇವೆ ಎಂದು ಕೆಲಸಗಾರ ಸತ್ಯ ಒಪ್ಪಿಕೊಂಡಿದ್ದಾನೆ.
