– 16 ರೈಲುಗಳ ಸಂಚಾರ ರದ್ದು, 9 ರೈಲುಗಳ ಮಾರ್ಗ ಬದಲಾವಣೆ
ಮುಂಬೈ: ದೇಶದ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ (Monsoon Rain) ಚುರುಕು ಪಡೆದುಕೊಂದೆ. ಮುಂಬೈನಲ್ಲಂತೂ ಮಳೆ (Mumbai Rain) ರೌದ್ರನರ್ತನ ತಾಳಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ.
ಭಾರೀ ಮಳೆಯಿಂದಾಗಿ ಮುಂಬೈನಲ್ಲಿ ಭಾನುವಾರ ಒಂದೇ ದಿನ ವಿವಿಧೆಡೆ 8 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಮುಂಖುರ್ಡ್ ಪ್ರದೇಶದಲ್ಲಿ ಚಾಲ್ ಕಟ್ಟದ ಒಂದು ಭಾಗ ಕುಸಿದು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮರ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ರೆ, ಕಟ್ಟಡದ ಗ್ರಿಲ್ ಪಾದಚಾರಿ ಮಾರ್ಗದ ಮೇಲೆ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಸೋಮವಾರವಾದ ಇಂದು ಸಹ ಮಳೆಯ ಆರ್ಭಟ ಮುಂದುವರಿದಿದ್ದು, ಹಲವೆಡೆ ಭೂಕುಸಿತ, ಪ್ರವಾಹ ಉಂಟಾಗಿದೆ. ಇದರಿಂದ ಹಲವು ರೈಲು (Train) ಮಾರ್ಗಗಳ ಸಂಚಾರ ಸ್ಥಗಿತಗೊಂಡಿದೆ. ಕೆಲ ರೈಲುಗಳ ಮಾರ್ಗಗಳಲ್ಲಿ ಏಕಾಏಕಿ ಬದಲಾವಣೆ ಮಾಡಲಾಗಿದೆ. ಮುಂಬೈ – ಪುಣೆ ಎಕ್ಸ್ ಪ್ರೇಸ್ ವೇನಲ್ಲೂ (Mumbai Pune Expressway) ತೀವ್ರ ಹಾನಿಯಾಗಿರುವುದರಿಂದ ಸಂಚಾರ ಬಂದ್ ಮಾಡಲಾಗಿದ್ದು, ಸದ್ಯಕ್ಕೆ ಮುಂಬೈ, ಪುಣೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
16 ರೈಲುಗಳ ಸಂಚಾರ ರದ್ದು
ಭಾರೀ ಮಳೆಯ ಕಾರಣ ನಗರಕ್ಕೆ ಹಾಗೂ ನಗರದಿಂದ ಸಂಪರ್ಕ ಕಲ್ಪಿಸುವ 16 ರೈಲುಗಳ ಸಂಚಾರವನ್ನ ರದ್ದುಗೊಳಿಸಲಾಗಿದೆ. 9 ರೈಲು ಮಾರ್ಗವನ್ನ ಬದಲಾವಣೆ ಮಾಡಲಾಗಿದೆ.
ಎಲ್ಲೆಲ್ಲಿ ಏನೇನು ಅನಾಹುತ?
* ಇಂದು ಬೆಳಗಿನ ಜಾವ 3.05 ರ ಸುಮಾರಿಗೆ, ಕರ್ಜತ್-ಲೋನಾವಾಲ ಭೋರ್ ಘಾಟ್ ವಿಭಾಗದ ಠಾಕೂರ್ವಾಡಿ ಬಳಿ ಭೂಕುಸಿತ ಸಂಭವಿಸಿದೆ. ನಂತರ ಖಂಡಾಲಾ ಮತ್ತು ಮಂಕಿ ಹಿಲ್ ನಡುವೆ ಮತ್ತೊಂದು ಭೂಕುಸಿತ ಸಂಭವಿಸಿದೆ.

* ಭೋರ್ ಘಾಟ್ ಪ್ರದೇಶದ ಸವಾಲಿನ 3 ರೈಲು ಹಳಿಗಳು – ಮುಂಬೈ ಕಡೆಗೆ ಅಪ್ ಲೈನ್, ಪುಣೆ ಕಡೆಗೆ ಡೌನ್ ಲೈನ್ ಮತ್ತು ಮಧ್ಯ ಮಾರ್ಗದಲ್ಲಿ ನಿರಂತರ ಮಳೆಯಿಂದ ಭೂಕುಸಿತ ಸಂಭವಿಸಿದೆ.
* ಕರ್ಜತ್ ಮತ್ತು ಲೋನಾವಾಲ ನಡುವಿನ ಆಗ್ನೇಯ ಘಾಟ್ ವಿಭಾಗದಲ್ಲಿ ನಿರಂತರ ಮಳೆಯಿಂದಾಗಿ, ಮುಂಬೈ ವಿಭಾಗದ ಅಪ್ ಮೇನ್ ಲೈನ್‌ನಲ್ಲಿ ಠಾಕೂರ್ವಾಡಿ ಮತ್ತು ಮಂಕಿ ಹಿಲ್ ಲೂಪ್ ಕ್ಯಾಬಿನ್ ನಡುವೆ ಭೂಕುಸಿತ ಸಂಭವಿಸಿದೆ.
* ಈ ಅಡಚಣೆಯಿಂದಾಗಿ ಕೇಂದ್ರ ರೈಲ್ವೆ ಇಲಾಖೆಯು ಹಲವಾರು ದೂರದ ಸೇವೆಗಳನ್ನ ರದ್ದುಗೊಳಿಸಿದೆ. ಅಗತ್ಯ ಇರುವ ಕಡೆಗೆ ಮಾರ್ಗಗಳನ್ನು ಬದಲಾಯಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ.
ಯಾವ್ಯಾವ ರೈಲುಗಳು ರದ್ದು?
ಸಿಎಸ್‌ಎಂಟಿ-ಪುಣೆ ಇಂದ್ರಯಾಣಿ ಎಕ್ಸ್‌ಪ್ರೆಸ್, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್, ಪ್ರಗತಿ ಎಕ್ಸ್‌ಪ್ರೆಸ್ ಮತ್ತು ಧುಲೆ ಎಕ್ಸ್‌ಪ್ರೆಸ್, ಪುಣೆ-ಸಿಎಸ್‌ಎಂಟಿ ಸಿಂಹಗಡ್ ಎಕ್ಸ್‌ಪ್ರೆಸ್ ಸೇರಿದಂತೆ ಹೆಚ್ಚುವರಿ ಸೇವೆಗಳನ್ನೂ ಸಹ ರದ್ದುಗೊಳಿಸಲಾಗಿದೆ. ಇದಲ್ಲದೇ ಸುಮಾರು 9 ರೈಲುಗಳ ಮಾರ್ಗವನ್ನ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.
