ರಾಯಚೂರು: ಜಿಲ್ಲೆಯಲ್ಲಿ ಮಳೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ನಿತ್ಯ ಒಂದಿಲ್ಲೊಂದು ಗ್ರಾಮದಲ್ಲಿ ಭಜನೆ , ಜಲಾಭೀಷೇಕ ಮೂಲಕ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ರಾಯಚೂರು ತಾಲೂಕಿನ ವಡ್ಲೂರು ಗ್ರಾಮಸ್ಥರು ಗ್ರಾಮದ ಎಲ್ಲಾ ದೇವರಿಗೆ 101 ತಂಬಿಗೆ ಜಲಾಭೀಷೇಕ ಮೂಲಕ ವರುಣನ ಪ್ರಾರ್ಥನೆ ನಡೆಸಿದ್ದಾರೆ.
ಪಾದಯಾತ್ರೆ ತೆರಳಿ ಕೃಷ್ಣಾ ನದಿಯಿಂದ ನೀರು ತಂದು ದೇವರಿಗೆ ಜಲಾಭೀಷೇಕ ಮಾಡುತ್ತಿದ್ದಾರೆ. 20 ಕಿ.ಮೀ ನಡೆದು ನೀರು ತಂದು ಗ್ರಾಮದ ಆಂಜನೇಯ ಸ್ವಾಮಿ, ಬಸವಣ್ಣ , ಮಾರೆಮ್ಮ ದೇವಿ, ಈಶ್ವರ ದೇವಸ್ಥಾನ, ದ್ಯಾವಮ್ಮ ದೇವಿ, ಕಂಚು ಮಾರಮ್ಮ ಸೇರಿ ಊರಿನ ಎಲ್ಲಾ ದೇವರುಗಳಿಗೆ ಜಲಾಭೀಷೇಕ ಮೂಲಕ ಪ್ರಾರ್ಥನೆ ಮಾಡುತ್ತಿದ್ದಾರೆ.
ದೇವಸುಗೂರು ಸೂಗುರೇಶ್ವರ ದೇವರಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಗ್ರಾಮದ ಎಲ್ಲಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಸಿದ್ದಾರೆ. ಮಳೆ ಕೊರತೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ರೈತರು ಜಿಲ್ಲೆಯಾದ್ಯಂತ ಮೋಡ ಆವರಿಸಿದ್ದರೂ ಧರೆಗಿಳಿಯದ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇನ್ನೂ ಸರ್ಕಾರ ಮೋಡ ಬಿತ್ತನೆ ಮೂಲಕವಾದ್ರೂ ಮಳೆ ತರಿಸುವ ಪ್ರಯತ್ನಕ್ಕೆ ಮುಂದಾಗಬೇಕು ಅಂತ ರೈತರು ಒತ್ತಾಯಿಸಿದ್ದಾರೆ.
