ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Monsoon Rain) ಕೈಕೊಟ್ಟು ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಮತ್ತೊಂದೆಡೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಜಲಾಶಯಗಳ (Reservoirs) ನೀರಿನ ಮಟ್ಟ ಏರಿಕೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಗದೊಂದು ಕಡೆ ಕರಾವಳಿಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ:
ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಮುಂದುವರಿದಿದೆ. ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ ಆಗಿದ್ದು, ಜಲಾಶಯ ಶೀಘ್ರದಲ್ಲೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಜಲಾಶಯದಿಂದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು 3,000 ರಿಂದ 5,000 ಕ್ಯೂಸೆಕ್‌ಗಿಂತ ಹೆಚ್ಚು ನೀರು ನದಿಗೆ ಹರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ವಿದ್ಯುತ್ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ – ಮಂಡ್ಯದಲ್ಲಿ ಹರಿಯಿತು ನೆತ್ತರು
ಕೃಷ್ಣಾ ನದಿ ಮೇಲ್ಭಾಗದಲ್ಲಿ ಉತ್ತಮ ಮಳೆ:
ಕೃಷ್ಣಾ ನದಿ ಮೇಲ್ಭಾಗದಲ್ಲಿ ಉತ್ತಮ ಮಳೆ ಹಿನ್ನೆಲೆ ಜಲಾಶಯಗಳಿಗೆ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿದ್ದು ರಾಯಚೂರಿನ ಕೃಷ್ಣಾ ನದಿ ಪಾತ್ರದ ಜನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಜನ ಜಾನುವಾರುಗಳು ನದಿ ಪಾತ್ರಕ್ಕೆ ಇಳಿಯದಂತೆ ಕೆಬಿಜೆಎನ್‌ಎಲ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆಲಮಟ್ಟಿ ಜಲಾಶಯ ಬಹುತೇಕ ಭರ್ತಿ ಹಂತಕ್ಕೆ ತಲುಪಿರುವ ಹಿನ್ನೆಲೆ ಆಲಮಟ್ಟಿಯಿಂದ ಹೊರಹರಿವಿನ ಪ್ರಮಾಣ ಸಹ ಹೆಚ್ಚಳ ಸಾಧ್ಯತೆಯಿದೆ. ಇದನ್ನೂ ಓದಿ: ಕಪ್ಪು ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ – ಭಾರತೀಯ ನಾವಿಕ ಮೃತ್ಯು
ಬಸವಸಾಗರ ಜಲಾಶಯಕ್ಕೆ ಸದ್ಯ 70 ಸಾವಿರ ಕ್ಯುಸೆಕ್ ನೀರು ಒಳಹರಿವು ಇದ್ದು, ಇನ್ನೂ ಹೆಚ್ಚು ಪ್ರಮಾಣದ ನೀರು ಹರಿದು ಬರುವ ಸಾಧ್ಯತೆಯಿದೆ. ಹೀಗಾಗಿ ಬಸವಸಾಗರ ಜಲಾಶಯದಿಂದ ಹಂತ ಹಂತವಾಗಿ 30 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ಜನರು ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿರುವುದರಿಂದ ಯಾವುದೇ ಕ್ಷಣದಲ್ಲಿ ನದಿಗೆ ಹೆಚ್ಚು ಪ್ರಮಾಣದ ನೀರು ಬಿಡುವ ಸಾಧ್ಯತೆಯಿದೆ. ಇದನ್ನೂ ಓದಿ: ಮಿಡ್‌ನೈಟ್ ಮೆಸೇಜ್‌ಗೆ ಪಾಸಿಟಿವ್ ರೆಸ್ಪಾನ್ಸ್ – ಯುವಜನತೆಗೆ ಧನ್ಯವಾದ ತಿಳಿಸಿದ ಮೋದಿ
ಮಲೆನಾಡು ಭಾಗದಲ್ಲಿ ಅಬ್ಬರದ ಮಳೆ:
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣ ಅಬ್ಬರಿಸುತ್ತಿದ್ದು, ಜಿಲ್ಲೆಯ ಶಿರಸಿಯ ಕುಳವೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾಗೇರಿ ಗ್ರಾಮದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಕಾಗೇರಿ ಗ್ರಾಮದ ಬರೂರು ಹೊಳೆ ಉಕ್ಕಿ ಭತ್ತದ ಗದ್ದೆ, ತೋಟಗಳು ಜಲಾವೃತವಾಗಿದ್ದು, ಕಳೆದ ಎರಡು ದಿನದಿಂದ ಅಬ್ಬರಿಸಿದ ಮಳೆಗೆ ಬರೂರು ಹೊಳೆ ಉಕ್ಕಿ ಹರಿದಿದೆ. ಈ ಪ್ರವಾಹಕ್ಕೆ ಭತ್ತದ ಬೆಳೆ, ತೋಟಗಳು ಜಲಾವೃತವಾಗಿದೆ. ಇದಲ್ಲದೇ ಇದೇ ಗ್ರಾಮದ ಬಳಿ ರಸ್ತೆಯೂ ಜಲಾವೃತಗೊಂಡಿದೆ. ಇನ್ನು ಅಘನಾಶಿನಿ ನದಿ ನೀರಿನ ಪ್ರವಾಹ ಹೆಚ್ಚಾದ ಹಿನ್ನಲೆಯಲ್ಲಿ ನದಿಯಲ್ಲಿ ಹಾವುಗಳು ಹರಿದು ಬರುತಿದ್ದು, ಹೊಸಗದ್ದೆ ಬಳಿ ನದಿಯಲ್ಲಿ ಹನ್ನೆರಡು ಅಡಿ ಉದ್ದದ ಹೆಬ್ಬಾವೊಂದು ತೇಲಿ ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ‘ನೀಟ್’ ಪ್ರತಿಭಟನೆ; ಎನ್‌ಟಿಎ 47 ಸಿಬ್ಬಂದಿಯನ್ನು ಹೊರಹಾಕಿದ ಕೇಂದ್ರ
ಅಬ್ಬರದ ಮಳೆಗೆ ಭೂ ಕುಸಿತ, ಹೆಚ್ಚಿದ ಆತಂಕ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಗೆ ಕಾರವಾರ ತಾಲೂಕಿನ ಮುದುಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭೂ ಕುಸಿತವಾಗಿದೆ. ಭೂ ಕುಸಿತದಿಂದ ಹೆದ್ದಾರಿಯಲ್ಲಿ ಕಲ್ಲುಬಂಡೆಗಳು ಉರುಳಿ ಬಿದ್ದಿದೆ. ಈ ಮಾರ್ಗದಲ್ಲಿ ಸಂಚಾರಕ್ಕೆ ನಿರ್ಬಂಧ ಇರುವುದರಿಂದ ಯಾವುದೇ ಸಮಸ್ಯೆಗಳಾಗಿಲ್ಲ. ಇನ್ನು ಜೋಯಿಡಾದ ಕುಂಬಾರವಾಡದ ಕಾತೇಲಿಯ ವಿನಂತಿ ವಿನಾಯಕರಾವ್ ಎಂಬುವವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಸಾವಿರಾರು ರೂ. ವಸ್ತುಗಳು ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅಪ್ಪ ಪ್ರಧಾನಿಯಾದಾಗ ಅಮ್ಮ ರಾಜ್ಯ ಬಿಟ್ಟು ಹೋಗ್ಬೇಡಿ, ಇಲ್ಲಿನ ಜನರ ಸೇವೆ ಮಾಡಿ ಅಂದಿದ್ರು: ಚೆನ್ನಮ್ಮ ನೆನೆದು ಪುತ್ರಿಯರ ಮಾತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುನ್ಸೂಚನೆ:
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಗಾಳಿ ಮಳೆಯಾಗಿದೆ. ಕಳೆದ ಹಲವು ದಿನಗಳಿಂದಲೂ ಕಣ್ಣಮುಚ್ಚಾಲೆಯಾಡುತ್ತಿರುವ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಮಳೆ – ಜು.25ರಂದು ಶಾಲಾ-ಕಾಲೇಜುಗಳಿಗೆ ರಜೆ
ಇನ್ನು, ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆ ಇಂದು ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಮತ್ತು ಡಿಪ್ಲೋಮೋ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿದ್ದಾರೆ. ನದಿ, ಹಳ್ಳ, ಕೊಳ್ಳ ಹಾಗೂ ಸಮುದ್ರ ತೀರಗಳಿಗೆ ತೆರಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕಾವೇರಿ, ಮೇಕೆದಾಟು ವಿಚಾರವಾಗಿ ತಮಿಳುನಾಡಿನೊಂದಿಗೆ ಸಂಧಾನಕ್ಕೆ ಮುಂದಾದ ಕರ್ನಾಟಕ
ಒಟ್ನಲ್ಲಿ ರಾಜ್ಯದಲ್ಲಿ ಹಲವೆಡೆ ಭಾರೀ ಮಳೆಯಾಗುತ್ತಿದ್ದು ಜಲಾಶಯಗಳಿಗೆ ಜೀವಕಳೆ ಬಂದಿದೆ. ಹೀಗೆ ಮಳೆ ಮುಂದುವೆರೆದರೆ ಸಾಕಪ್ಪ ಅಂತಾ ಕಾವೇರಿ ಜಲಾನಯನ ಪ್ರದೇಶದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ನಿರಂತರ ಮಳೆ – ಜು.25ರಂದು ಶಾಲಾ, ಕಾಲೇಜುಗಳಿಗೆ ರಜೆ
