Connect with us

Latest

ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

Published

on

ನವದೆಹಲಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನಾರೋಗ್ಯಕ್ಕೂ ಮುನ್ನ ಹಳ್ಳಿಯಲ್ಲಿ ಸಿಗುವ ಹಲಸಿನ ಹಣ್ಣು ತರಿಸಿಕೊಂಡು ತಿಂದಿದ್ದರು.

ಪಶ್ಚಿಮ ಬಂಗಾಳದ ರಾಜಕಾರಣಿಯಾಗಿರುವ ಮಗ ಅಭಿಜಿತ್ ಜೊತೆ ಮಾಜಿ ರಾಷ್ಟ್ರಪತಿಯವರು ತನಗೆ ಹಲಸಿನ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತಿದೆ. ಹೀಗಾಗಿ ಅದನ್ನು ತಂದುಕೊಡುವಂತೆ ಹೇಳಿದ್ದರು. ಅಂತೆಯೇ ಅಭಿಜಿತ್ ಕೂಡ ತಮ್ಮ ತಂದೆಗೆ ಹಲಸಿನ ಹಣ್ಣು ತಂದು ಕೊಟ್ಟಿದ್ದರು.

ತಂದೆ ಮನವಿಯಂತೆ ನಾನು ಪಶ್ಚಿಮ ಬಂಗಾಳದ ಬಿರ್‍ಭುಮ್ ಜಿಲ್ಲೆಯ ಮಿರಾತಿ ಎಂಬ ಗ್ರಾಮಕ್ಕೆ ತೆರಳಿ ಹಲಸಿನ ಹಣ್ಣು ತೆಗೆದುಕೊಂಡು ಬಂದಿದ್ದೆ. 25 ಕೆ.ಜಿಯಷ್ಟು ಹಣ್ಣು ಹಿಡಿದುಕೊಂಡು ಆಗಸ್ಟ್ 3 ರಂದು ದೆಹಲಿ ರೈಲು ಹತ್ತಿ ಅವರನ್ನು ಭೇಟಿಯಾಗಿ ಅವರ ಆಸೆಯಂತೆ ಹಣ್ಣನ್ನು ನೀಡಿದ್ದೆ. ತಂದೆ ಹಾಗೂ ನನಗೆ ರೈಲು ಪ್ರಯಾಣ ಅಂದರೆ ಅಚ್ಚುಮೆಚ್ಚು ಎಂದು ಅಭಿಜಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಾನು ತಂದು ಕೊಟ್ಟ ದಿನವೇ ತಂದೆ ಹಣ್ಣು ತಿಂದಿದ್ದಾರೆ. ಅದೃಷ್ಟವಶಾತ್ ಅವರ ಶುಗರ್ ಲೆವೆಲ್ ನಲ್ಲಿ ಏನೂ ಬದಲಾವಣೆಯಾಗಿಲ್ಲ. ಹಣ್ಣನ್ನು ನೋಡುತ್ತಿದ್ದಂತೆಯೇ ತಂದೆಗೆ ತುಂಬಾನೆ ಖುಷಿಯಾಗಿತ್ತು. ಆಗ ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೆ ವಾರದ ಬಳಿಕ ಅವರು ಹಠಾತ್ ಅನಾರೋಗ್ಯಕ್ಕೀಡಾದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ ಅವರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ.

ಸದ್ಯ ಅವರು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೂವರೆಗೆ ನನಗೆ 4 ಬಾರಿ ಅವರನ್ನು ನೋಡಲು ಅವಕಾಶ ಸಿಕ್ಕಿತ್ತು. ಅವರನ್ನು ನೋಡಲು ತೆರಳುವಾಗ ನಾನು ಪಿಪಿಇ ಕಿಟ್ ಧರಿಸಿ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಾನು ನಾಲ್ಕನೇ ಬಾರಿ ನೋಡಲು ಹೋದಾಗ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದರು ಎಂದು ಅಭಿಜಿತ್ ತಿಳಿಸಿದರು.

Click to comment

Leave a Reply

Your email address will not be published. Required fields are marked *