ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ (MLC Election) ಅಡ್ಡ ಮತದಾನ ಮಾಡಿದ ಸ್ವಪಕ್ಷೀಯ (JDS) ಶಾಸಕರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನೀವು ಕಾಂಗ್ರೆಸ್‌ಗೆ ಹೋಗೋದಾದ್ರೆ ಧೈರ್ಯವಾಗಿ ಈಗಲೇ ಹೋಗಿ. ಈ ರೀತಿ ನಡೆದುಕೊಳ್ಳಬೇಡಿ ಎಂದು ಕಿಡಿಕಾರಿದರು.
ಅವರ ನಿವಾಸದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಮ್ಮ ಪಕ್ಷದಲ್ಲಿ ಭವಿಷ್ಯ ಇಲ್ಲ ಅಂತ ನಿಮ್ಮ ಮನಸ್ಸಿನಲ್ಲಿದ್ದರೆ, ನಾನು ತೊಂದರೆ ಕೊಡಲ್ಲ ಎಂದಿದ್ದೇನೆ. ಕಾಂಗ್ರೆಸ್‌ಗೆ ಹೋಗಬೇಕು ಎಂದರೆ ಧೈರ್ಯವಾಗಿ ನನಗೆ ಹೇಳಿ ಹೋಗಿ. ಆದರೆ ಈ ರೀತಿ ಮಾಡ್ಬೇಡಿ ಅನ್ನೋದನ್ನ ನೇರವಾಗಿ ಹೇಳಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: MLC Election | ಅಡ್ಡ ಮತದಾನಕ್ಕೆ ಅಮಿತ್ ಶಾ ಗರಂ – ಫೋನ್‌ನಲ್ಲಿ ಹೆಚ್‌ಡಿಕೆ ಜೊತೆ ಚರ್ಚೆ
ಅಡ್ಡ ಮತದಾನ ಮಾಡಿದವರ ಪತ್ತೆಗೆ ಬಿಜೆಪಿ ಮೂರು ಜನ ಸದಸ್ಯರ ತಂಡ ಮಾಡಿದೆ. ಸಿ.ಟಿ. ರವಿ (C.T Ravi) ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ನಾನು ದೆಹಲಿಗೆ ಹೋದಾಗ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ಇವೆಲ್ಲದರ ಮಾಹಿತಿ ಅವರಿಗೆ ಕೊಡ್ತೇನೆ.
ನಮ್ಮ ಶಾಸಕರು ಅಂತಿಮ ನಿರ್ಣಯ ಮಾಡುವ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಇದನ್ನು ಇನ್ನೂ ಎಳೆದುಕೊಂಡು ಹೋಗೋ ಅವಶ್ಯಕತೆ ಇಲ್ಲ. ನನ್ನ ಗುರಿ 2028ರ ಚುನಾವಣೆ ಕಡೆ ಇದೆ. ಈ ರಾಜ್ಯದಲ್ಲಿ ನಿಜವಾದ ಜನಪರ, ಜನತೆಯ ನಿರೀಕ್ಷೆಗಳಿಗೆ ಕೆಲಸ ಮಾಡುವ ಸರ್ಕಾರ ತರಬೇಕು. ಮುಖ್ಯಮಂತ್ರಿ ಸ್ಥಾನ ಅವೆಲ್ಲ ಆಮೇಲೆ. ಮೊದಲು ಇಲ್ಲಿ ಕೆಟ್ಟ ಸರ್ಕಾರ ಹೋಗಬೇಕು ಎಂದರು.
ಈ ರಾಜ್ಯದ ಸಿಎಂ ಎಲ್ಲಾ ಅಧಿಕಾರಿಗಳ ಸಭೆಯಲ್ಲಿ ಒಂದು ಮಾತು ಹೇಳ್ತಾರೆ. ಯಾವುದೇ ಕಚೇರಿಯಲ್ಲಿ ಹತ್ತು ರೂ. ಯಾರಾದ್ರೂ ಲಂಚ ಕೇಳಿದ್ರು ಅದೇನೋ ಫೋನ್‌ಗಳು ಇಡ್ತಾರಂತೆ. ತಕ್ಷಣ ಆ ಫೋನಿಗೆ ಮೆಸೇಜ್ ಬರುತ್ತಂತೆ. ಅವರು ಎಲ್ಲಿ ಫೋನ್ ಇಡ್ತಾರೋ ಗೊತ್ತಿಲ್ಲ. ಈ ಚುನಾವಣೆಯಲ್ಲಿ ಹತ್ತು ರೂಪಾಯಿ ಅಲ್ಲ, ಬಹಳ ನಡೆದಿರಬಹುದು. ಇದನ್ನು ಯಾರಿಗೆ ದೂರು ಕೊಡೋದು ತನಿಖೆ ಮಾಡಿ ಅಂತ? ಎಂದು ಪ್ರಶ್ನಿಸಿದರು. 2028ರಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗುತ್ತೆ, ಏನೇನು ನಿರ್ಧಾರಗಳು ಮಾಡಬೇಕು ಮಾಡ್ತೀವಿ. ಇದನ್ನೆಲ್ಲ ಗಮನದಲ್ಲಿ ಇಟ್ಕೊಂಡೇ ಮುಂದಿನ ನಿರ್ಧಾರಗಳು ಮಾಡ್ತೀವಿ.
ನಾನು ಪರಿಷತ್ ಚುನಾವಣೆ ಗೆಲ್ಲುತ್ತೇನೆ ಎಂದು ಅಭ್ಯರ್ಥಿ ಹಾಕಿದ್ದಲ್ಲ. ಇದು ಮುಂದಿನ ದಿನಗಳನ್ನು ಪರೀಕ್ಷೆ ಮಾಡಲು ಅಭ್ಯರ್ಥಿ ಹಾಕಿದ್ದೆ. ಈ ಬಗ್ಗೆ ಎರಡು ಸಭೆಗಳನ್ನು ಮಾಡಿದೆ. ಎಲ್ಲ ಶಾಸಕರು ಅಭ್ಯರ್ಥಿಯನ್ನು ಹಾಕಲೇಬೇಕು ಅಂತ ಹೇಳಿದರು. ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಹಾಕಿದ್ದೆ. ಜೂ.19ರಂದು ಕೂಡ ಶಾಸಕರ ಸಭೆ ಕರೆದಿದ್ದೆ. ಜಿ.ಟಿ ದೇವೇಗೌಡರನ್ನು ಬಿಟ್ಟು 17 ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು. ಎಲ್ಲರೂ ಕೂಡ ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಪರಿಷತ್ ಚುನಾವಣೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಬಿರುಕು ಅಂತ ವಿಶ್ಲೇಷಣೆಗಳಿವೆ. ಆದ್ರೆ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಯಾವುದೇ ಬಿರುಕು ಬರಲ್ಲ. ಪರಿಷತ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕುವಾಗಲೂ ಬಿಜೆಪಿ ಜೊತೆ ಮಾತನಾಡಿದ್ದೇನೆ. ವಿಜಯೇಂದ್ರ, ಅಶೋಕ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತಾಡಿದೆ. ಅಭ್ಯರ್ಥಿ ಹಾಕುವ ಬಗ್ಗೆ ಎಲ್ಲರ ಸಹಮತ ಇತ್ತು.
ಕಳೆದ ಮೂರು ವರ್ಷಗಳಿಂದ ಶಾಸಕರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಕಾರ್ಯಕರ್ತರು ಹಾಗೂ ಜನರು ಕೆಲಸ ಆಗಿಲ್ಲ ಅಂತ ಅಸಮಾಧಾನ ಇದೆ. ಇದು ಬರಿ ಜೆಡಿಎಸ್ ಹಾಗೂ ಬಿಜೆಪಿ ಪರಿಸ್ಥಿತಿಯಲ್ಲ, ಕಾಂಗ್ರೆಸ್‌ನಲ್ಲೂ ಇದೇ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ಕೆಲಸ ಆಗಿಲ್ಲ ಅನ್ನುವಂಥದ್ದು ಈ ಚುನಾವಣೆಯಲ್ಲಿ ಪರಿಣಾಮ ಬೀರಿದೆ. ಸರ್ಕಾರದಿಂದ ನಮಗೆ ಮತ ಕೊಟ್ರೆ 50 ಕೋಟಿ ರೂ. ಅನುದಾನ ಕೊಡ್ತೀವಿ ಅಂತ ಶಾಸಕರಿಗೆ ಹೇಳಿದ್ದಾರೆ. ಇದೆಲ್ಲ ಪರಿಷತ್ ಚುನಾವಣೆಯಲ್ಲಿ ಪ್ರಭಾವ ಬೀರಿದೆ. ಈ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೆ ಪರಿಣಾಮ ಬೀರಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾದ ಜಿ.ಟಿ.ದೇವೇಗೌಡ
