ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಕೆಲ ದಿನಗಳಿಂದ ತಗ್ಗಿದ್ದ ಮಳೆಯು(Rain) ಮತ್ತೆ ಚುರುಕುಗೊಂಡಿದ್ದು, ಗಡಿನಾಡಿನಲ್ಲಿ ಕೃಷ್ಣಾ (Krishna River) ಮತ್ತು ಉಪನದಿಗಳ ಹರಿವಿನಲ್ಲಿ ಗಣನೀಯ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ (Maharashtra) ರಾಜ್ಯದ ಜಲಾಶಯಗಳಿಗೆ ಒಟ್ಟು 65 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ. ಇದರಿಂದಾಗಿ ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಎರಡನೇ ಬಾರಿಗೆ ಸೇತುವೆಗಳು ಜಲಾವೃತಗೊಂಡಿವೆ.
ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಒಟ್ಟು 6 ಸೇತುವೆಗಳು ಮುಳುಗಡೆಯಾಗಿದ್ದು, ಅದರಲ್ಲಿ ನಿಪ್ಪಾಣಿ ತಾಲೂಕಿನ 5 ಹಾಗೂ ಚಿಕ್ಕೋಡಿ ತಾಲೂಕಿನ 1 ಸೇತುವೆ ಸೇರಿದೆ. ಇದನ್ನೂ ಓದಿ: ಕಚ್ಚಾ ತೈಲ ದರ ಭಾರೀ ಜಿಗಿತ – ಜೂನ್ ಬಳಿಕ ಸಾರ್ವಕಾಲಿಕ ಏರಿಕೆ
ಯಾವ ಸೇತುವೆ ಮುಳುಗಡೆ?
ಕೃಷ್ಣಾ ನದಿ – ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರು ಬ್ರಿಡ್ಜ್ ಕಂ ಬ್ಯಾರೇಜ್ ಎರಡನೇ ಬಾರಿಗೆ ನೀರಿನಲ್ಲಿ ಮುಳುಗಡೆಯಾಗಿದೆ.
ದೂದಗಂಗಾ ನದಿ – ಕಾರದಗಾ ಮತ್ತು ಬೋಜ್ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ವೇದಗಂಗಾ ನದಿ – ಬೋಜ-ಕಾರದಗಾ, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಹುನ್ನರಗಿ, ಮಮದಾಪೂರ ಹಾಗೂ ಭಾರವಾಡಿ-ಕುನ್ನೂರು ಕೆಳಹಂತದ ಸೇತುವೆಗಳು ಮುಳುಗಡೆಯಾಗಿದ್ದು, ಯಥಾಸ್ಥಿತಿ ಕಾಯ್ದುಕೊಂಡಿವೆ.
ಸೇತುವೆಗಳು ನೀರಿನಲ್ಲಿ ಮುಳುಗಿರುವುದರಿಂದ ನದಿ ತೀರದ ಗ್ರಾಮೀಣ ಭಾಗದ ಜನಜೀವನ ಮತ್ತು ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜನರು ದಿನನಿತ್ಯದ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ಬಳಸುತ್ತಿದ್ದಾರೆ.
