ಬೆಂಗಳೂರು: ಟೆಸ್ಟ್ ಡ್ರೈವ್ (Test Drive) ವೇಳೆ ಮಹಿಳೆ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಫುಟ್‌ಪಾತ್ ಮೇಲಿದ್ದ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ (Car Accident) ಹೊಡೆದ ಘಟನೆ ಬೆಂಗಳೂರಿನ ಕೆ.ಆರ್.ಪುರಂನಲ್ಲಿ ನಡೆದಿದೆ.
ಕೆ.ಆರ್.ಪುರಂ ( K R Puram) ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಯ್ಯನಪಾಳ್ಯ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಟೆಸ್ಟ್ ಡ್ರೈವ್‌ಗಾಗಿ ಕೆಂಪು ಬಣ್ಣದ ಶಿಫ್ಟ್ ಡಿಸೈರ್ ಕಾರು ತೆಗೆದುಕೊಂಡಿದ್ದ ಮಹಿಳೆ ಚಾಲನೆ ಮಾಡುತ್ತಿದ್ದ ವೇಳೆ ಏಕಾಏಕಿ ಕಾರಿನ ನಿಯಂತ್ರಣ ತಪ್ಪಿದೆ.
ನಿಯಂತ್ರಣ ತಪ್ಪಿದ ಕಾರು ಫುಟ್‌ಪಾತ್ ಮೇಲೆ ಹತ್ತಿ ಅಲ್ಲಿದ್ದ ಎಲೆಕ್ಟ್ರಿಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಮಹಿಳೆ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಇದನ್ನೂ ಓದಿ: ನಾಳೆಯಿಂದ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ – ಕೇವಲ 10 ವಿಭಾಗಳಲ್ಲಿ ಸ್ಪರ್ಧೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೆ.ಆರ್.ಪುರಂ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆ ವಿರುದ್ಧ ನಿರ್ಲಕ್ಷ್ಯ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಕಾರು ಡಿಕ್ಕಿ ಹೊಡೆದ ಎಲೆಕ್ಟ್ರಿಕ್ ಕಂಬದ ಮುಂಭಾಗವೇ ಬಸ್ ನಿಲ್ದಾಣವಿತ್ತು. ಕಂಬ ಇರದೇ ಇದ್ದರೆ ಕಾರು ನೇರವಾಗಿ ಬಸ್ ನಿಲ್ದಾಣಕ್ಕೆ ನುಗ್ಗುವ ಸಾಧ್ಯತೆ ಇತ್ತು. ಹಗಲು ಹೊತ್ತಿನಲ್ಲಿ ನಡೆದ ಘಟನೆ ಆಗಿದ್ದರಿಂದ ಅಲ್ಲಿದ್ದ ಪ್ರಯಾಣಿಕರ ಜೀವಕ್ಕೂ ಅಪಾಯ ಎದುರಾಗಬಹುದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ: ಫುಟ್‌ಪಾತ್‌ನಲ್ಲಿ ನಿಂತಿದ್ದವರ ಮೇಲೆ ಹರಿದ ಕಾರು – ಯುವಕ ಸಾವು, ಮಹಿಳೆಯ ಕಾಲು ಮುರಿತ
