– ಇಬ್ಬರ ಸ್ಥಿತಿ ಗಂಭೀರ
ವಾಷಿಂಗ್ಟನ್: ಭೀಕರ ರಸ್ತೆ ಅಪಘಾತದಲ್ಲಿ ಹೈದರಾಬಾದ್ (Hyderabad) ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ (California) ನಡೆದಿದೆ.
ಹೈದರಾಬಾದ್‌ನ ಸೈದಾಬಾದ್ ನಿವಾಸಿಯಾಗಿರುವ ಶೇಖ್ ನವೀದ್ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮತ್ತೊಂದು ವಾಹನದೊಂದಿಗೆ ಭೀಕರವಾಗಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನವೀದ್ ಅವರ ಪತ್ನಿ ನಾಜಿಯಾ ಸಲ್ಮಾ, ಅವರ ಪುತ್ರ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನವೀದ್ ಮತ್ತು ಅವರ ಕಿರಿಯ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಇಬ್ಬರಿಗೂ ಚಿಕಿತ್ಸೆ ಮುಂದುವರೆಸಿದ್ದಾರೆ. ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ವಾರ್ – ಈಗ ಜೆನೆರಿಕ್ ಔಷಧಿಗಳ ಮೇಲೆ 200% ಸುಂಕ
ಶೇಖ್ ನವೀದ್ ಸುಮಾರು 10 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿಯೇ ಕುಟುಂಬದೊಂದಿಗೆ ನೆಲೆಸಿದ್ದ ಅವರು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ನವೀದ್ ಅವರ ತಂದೆ ಶೇಖ್ ಅಬ್ದುಲ್ ಸಯೀದ್ ಅವರು ಮಗನಿಗೆ ಕರೆ ಮಾಡಿದ ವೇಳೆ ಅಮೆರಿಕದ ಪೊಲೀಸರಿಂದ ಅಪಘಾತದ ಬಗ್ಗೆ ಮಾಹಿತಿ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಕುಟುಂಬದ ಸದಸ್ಯರು ತುರ್ತಾಗಿ ಅಮೆರಿಕಕ್ಕೆ ತೆರಳಲು ಅವಕಾಶ ಕಲ್ಪಿಸುವಂತೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ತುಮಕೂರು – ಬೆಂಗಳೂರು ಹೈವೇಯಲ್ಲಿ ಕೆಮಿಕಲ್ ತುಂಬಿದ್ದ ಲಾರಿ ಪಲ್ಟಿ; ಅನಿಲ ಸೋರಿಕೆ
ಈ ನಡುವೆ ಮಜ್ಲಿಸ್ ಬಚಾವೋ ತೆಹ್ರೀಕ್ ಸಂಘಟನೆಯ ವಕ್ತಾರ ಅಮ್ಜದ್ ಉಲ್ಲಾ ಖಾನ್ ಅವರು ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಕುಟುಂಬದವರು ತಕ್ಷಣ ಅಮೆರಿಕಕ್ಕೆ ತೆರಳಲು ಅಗತ್ಯವಿರುವ ತುರ್ತು ವೀಸಾ ವ್ಯವಸ್ಥೆ ಕಲ್ಪಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮತ್ತೆ ಮಳೆ ಚುರುಕು – ಚಿಕ್ಕೋಡಿ ವ್ಯಾಪ್ತಿಯ 6 ಸೇತುವೆ ಮುಳುಗಡೆ
