ಮುಂಬೈ: ಐಪಿಎಲ್ 2027ರ(IPL) ಸೀಸನ್ ಆರಂಭಕ್ಕೂ ಮುನ್ನ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಮುಂಬೈ ಇಂಡಿಯನ್ಸ್ ತಂಡ ತೊರೆದು ರಾಜಸ್ಥಾನ್ ರಾಯಲ್ಸ್(Rajasthan Royals) ತಂಡವನ್ನು ಸೇರಲಿದ್ದಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿವೆ.
2026ರ ಐಪಿಎಲ್ ಸೀಸನ್ ಹಾರ್ದಿಕ್ ಪಾಂಡ್ಯ ಮತ್ತು ಮುಂಬೈ ಇಂಡಿಯನ್ಸ್‌ಗೆ(Mumbai Indians) ನಿರಾಸೆ ಮೂಡಿಸಿತ್ತು. ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು. ಹಾರ್ದಿಕ್ ಪಾಂಡ್ಯ ಅವರಿಗೆ ಕೂಡ ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಾಗಲಿಲ್ಲ. ಅವರು ಆಡಿದ 10 ಪಂದ್ಯಗಳಲ್ಲಿ 206 ರನ್ ಹಾಗೂ 4 ವಿಕೆಟ್ ಮಾತ್ರ ಪಡೆದಿದ್ದರು. ಇದೀಗ ಹಾರ್ದಿಕ್ ಹೊಸ ತಂಡದ ಹುಡುಕಾಟದಲ್ಲಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಈ ಮೊದಲು ಅವರು ಚೆನ್ನೈ ಸೂಪರ್ ಕಿಂಗ್ಸ್ಗೆ ಹೋಗಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ಹಾರ್ದಿಕ್‌ಗಾಗಿ ಇದೀಗ ರಾಜಸ್ಥಾನ್ ರಾಯಲ್ಸ್ ಕೂಡ ಪೈಪೋಟಿಗೆ ಇಳಿದಿದೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಟ್ರೇಡ್ ಕುರಿತು ಮಾತುಕತೆ ನಡೆಯುತ್ತಿದೆ ಎಂಬ ವರದಿಗಳು ಕೇಳಿಬಂದಿವೆ. ಆದರೆ, ಈ ಒಪ್ಪಂದ ಪೂರ್ಣಗೊಳ್ಳಬೇಕಾದರೆ ರಾಜಸ್ಥಾನ್ ತನ್ನ ಸ್ಟಾರ್ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(Yashasvi Jaiswal) ಅವರನ್ನು ಕೈಬಿಡುವ ಸಾಧ್ಯತೆ ಇದೆ.
2020ರಿಂದ ರಾಜಸ್ಥಾನ್ ತಂಡದ ಭಾಗವಾಗಿರುವ ಜೈಸ್ವಾಲ್ ಇತ್ತೀಚಿನ ದಿನಗಳಲ್ಲಿ ಪ್ರಾಂಚೈಸಿಯೊAದಿಗೆ ಅಸಮಾಧಾನಗೊಂಡಿರುವ ಬಗ್ಗೆ ವರದಿಗಳು ಕೇಳಿಬಂದಿವೆ. ಸಂಜು ಸ್ಯಾಮ್ಸನ್ ತಂಡ ತೊರೆದ ಬಳಿಕ ಜೈಸ್ವಾಲ್ ಕ್ಯಾಪ್ಟನ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ತಂಡದ ಆಡಳಿತ ರಿಯಾನ್ ಪರಾಗ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿತ್ತು. ಇದರ ಜೊತೆಗೆ ಯುವ ಪ್ರತಿಭೆ ವೈಭವ್ ಸೂರ್ಯವಂಶಿಯ ಉತ್ತಮ ಪ್ರದರ್ಶನವೂ ಜೈಸ್ವಾಲ್ ಮೇಲೆ ಒತ್ತಡ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಮುಂಬೈ ಇಂಡಿಯನ್ಸ್ ತಂಡ ಯುವ ಆರಂಭಿಕ ಬ್ಯಾಟರ್ ಹುಡುಕುತ್ತಿದೆ. ಹಿರಿಯ ಆಟಗಾರ ರೋಹಿತ್ ಶರ್ಮಾ ಅವರ ನಂತರ ತಂಡವನ್ನು ಮುನ್ನಡೆಸಬಲ್ಲ ಆಟಗಾರನ ಅಗತ್ಯವಿದೆ.ಇದನ್ನೂ ಓದಿ: IPL 2027 | ಈ ತಂಡದ ಮೂಲಕ ಕೋಚಿಂಗ್ ಕರಿಯರ್ ಆರಂಭಿಸಲಿದ್ದಾರೆ ಯುವರಾಜ್ ಸಿಂಗ್
ಮುಂಬೈನಲ್ಲಿ ಬೆಳೆದಿರುವ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡಿರುವ ಜೈಸ್ವಾಲ್, ಈ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡವು ವೇಗದ ಬೌಲಿಂಗ್ ಆಲ್‌ರೌಂಡರ್ ಹುಡುಕುತ್ತಿದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಸೇರಿದರೆ ರಾಜಸ್ಥಾನ್‌ಗೆ ಹೆಚ್ಚಿನ ಬಲ ಸಿಗಬಹುದು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಕಾರಣಗಳಿಂದಾಗಿ ಸ್ಟಾರ್ ಆಟಗಾರರು ಎಕ್ಸ್ಚೇಂಜ್ ಆಗುತ್ತಾರೆಯೇ ಎಂಬ ಪ್ರಶ್ನೆ ಐಪಿಎಲ್ ಅಭಿಮಾನಿಗಳಲ್ಲಿ ಮೂಡಿದೆ. ಆದರೆ ಈ ಟ್ರೇಡ್ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಇದನ್ನೂ ಓದಿ: ಅವನಿನ್ನೂ ಬಾಲಕ – ಟೀಂ ಇಂಡಿಯಾಕ್ಕೆ ಆಯ್ಕೆಯಾದ ವೈಭವ್‌ಗೆ ವಿಶೇಷ ರಿಯಾಯ್ತಿ ಕೊಟ್ಟ ಬಿಸಿಸಿಐ
