ನವದೆಹಲಿ: ಭಾರತದ ಲೆಜೆಂಡರಿ ಆಲ್‌ರೌಂಡರ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ (Yuvaraj Singh) ಅವರು 2027ರ ಐಪಿಎಲ್‌ನಿಂದ (IPL 2027) ತಮ್ಮ ಕೋಚಿಂಗ್ ವೃತ್ತಿಜೀವನವನ್ನು ಆರಂಭಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, 2027ರ 20ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯುವರಾಜ್ ಸಿಂಗ್ ಕೋಚಿಂಗ್ ನೀಡಲು ಸಜ್ಜಾಗುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟಿ20 ವಿಶ್ವಕಪ್ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್
ಇದರ ಜೊತೆಗೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗೆ ಮರಳುವುದು ಬಹುತೇಕ ಖಚಿತವಾಗಿದ್ದು, ಅವರು ಯುವರಾಜ್ ಸಿಂಗ್ ಅವರನ್ನೂ ಡಗೌಟ್‌ಗೆ ಕರೆತರಲು ಬಯಸಿದ್ದಾರೆ ಎನ್ನಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹ-ಮಾಲೀಕರಾದ ಜಿಎಂಆರ್ ಗ್ರೂಪ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ ತಲಾ ಎರಡು ವರ್ಷಗಳ ಅವಧಿಗೆ ತಂಡದ ಆಡಳಿತವನ್ನು ಬದಲಿಸಿಕೊಂಡು ನಿರ್ವಹಿಸುತ್ತವೆ. 2025 ಮತ್ತು 2026ರ ಸೀಸನ್‌ಗಳಲ್ಲಿ ಜಿಎಂಆರ್ ತಂಡ ಮುನ್ನಡೆಸಿತ್ತು. ಈಗ 2027ರಿಂದ ಮುಂದಿನ ಎರಡು ವರ್ಷಗಳ ಕಾಲ ಜೆಎಸ್‌ಡಬ್ಲ್ಯೂ ಗ್ರೂಪ್ ಫ್ರಾಂಚೈಸಿಯ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದ್ದು, ಈ ಹಿನ್ನೆಲೆ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುತ್ತಿವೆ. ಇದನ್ನೂ ಓದಿ: IPL 2027 | 20ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ಬಹಿರಂಗ – 74 ಪಂದ್ಯಗಳಿಗೇ ಟೂರ್ನಿ ಸೀಮಿತ
ಬ್ಯಾಟಿಂಗ್ ಕೋಚ್ ಆಗಲಿರುವ ಯುವಿ?
ವರದಿಗಳ ಪ್ರಕಾರ, 2027ರ ಐಪಿಎಲ್‌ನಲ್ಲಿ ಯುವರಾಜ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಜೆಎಸ್‌ಡಬ್ಲ್ಯೂ ಆಡಳಿತಾವಧಿಯಲ್ಲಿ ಸೌರವ್ ಗಂಗೂಲಿ ತಂಡದ `ಡೈರೆಕ್ಟರ್ ಆಫ್ ಕ್ರಿಕೆಟ್’ ಆಗಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗಷ್ಟೇ ಸೌರವ್ ಗಂಗೂಲಿ ಅವರ ಮಾರ್ಗದರ್ಶನದಲ್ಲಿ SA20 `ಪ್ರಿಟೋರಿಯಾ ಕ್ಯಾಪಿಟಲ್ಸ್’ ತಂಡ ಫೈನಲ್ ತಲುಪಿ ಯಶಸ್ವಿಯಾಗಿತ್ತು. ಹೀಗಾಗಿ ಗಂಗೂಲಿ ಮರಳಿ ತಂಡದ ಆಡಳಿತ ಸೂತ್ರ ಹಿಡಿಯಲಿದ್ದು, ಅವರ ಜೊತೆ ಯುವಿ ಕೂಡ ಕಾಣಿಸಿಕೊಳ್ಳಲಿದ್ದಾರೆ.
ಎರಡು ಸೀಸನ್‌ಗಳ ವೈಫಲ್ಯಕ್ಕೆ ಬ್ರೇಕ್ ಬೀಳುತ್ತಾ?
ಐಪಿಎಲ್ 2025 ಮತ್ತು 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಅಕ್ಷರ್ ಪಟೇಲ್ ನಾಯಕತ್ವದ ಡಿಸಿ ತಂಡ ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಸತತ ಎರಡು ವರ್ಷ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಪ್ರಸ್ತುತ ಹೆಮಂಗ್ ಬದಾನಿ ತಂಡದ ಮುಖ್ಯ ಕೋಚ್ ಆಗಿದ್ದು, ಸತತ ವೈಫಲ್ಯಗಳಿಂದಾಗಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ ಎನ್ನಲಾಗಿದೆ. ಇದೀಗ ಸೌರವ್ ಗಂಗೂಲಿ ಅವರ ಅನುಭವ ಮತ್ತು ಯುವರಾಜ್ ಸಿಂಗ್ ಅವರ ಆಕ್ರಮಣಕಾರಿ ಶೈಲಿ ಒಟ್ಟಿಗೆ ಸೇರಿದರೆ, 2027ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹೊಸ ಇತಿಹಾಸ ಸೃಷ್ಟಿಸಲಿದೆಯೇ ಎಂದು ಅಭಿಮಾನಿಗಳು ಕಾದು ನೋಡಬೇಕಿದೆ.ಇದನ್ನೂ ಓದಿ: FIFA: ಮೈದಾನದಲ್ಲೇ ಜಗಳಕ್ಕಿಳಿದ ಕೆನಡಾ & ಕತಾರ್ ಆಟಗಾರರು
