ಮುಂಬೈ: ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC Women’s T20 WorldCup) ಟೂರ್ನಿಯಲ್ಲಿ ಆರಂಭಿಕ 2 ಪಂದ್ಯಗಳನ್ನ ಗೆದ್ದು ಭರ್ಜರಿ ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡಕ್ಕೆ ಶಾಕ್ ಎದುರಾಗಿದೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ (Shreyanka Patil) ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾಗಿರುವ ಕಾರಣ, ಚೇತರಿಕೆಗೆ ಸಮಯದ ಅಗತ್ಯವಿದೆ. ಆದ್ದರಿಂದ ಅವರು ಮುಂದಿನ ಎಲ್ಲಾ ವಿಶ್ವಕಪ್ ಪಂದ್ಯಗಳಿಂದ ಹೊರಗೊಳಿಯಲಿದ್ದಾರೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ. ಶ್ರೇಯಾಂಕಾ ಅವರ ಬದಲಿ ಆಟಗಾರ್ತಿಯಾಗಿ ಪ್ರೇಮಾ ರಾವತ್ (Prema Rawat) ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: IPL 2027 | 20ನೇ ಆವೃತ್ತಿಯ ಐಪಿಎಲ್ ವೇಳಾಪಟ್ಟಿ ಬಹಿರಂಗ – 74 ಪಂದ್ಯಗಳಿಗೇ ಟೂರ್ನಿ ಸೀಮಿತ

ಬುಧವಾರ ನಡೆದಿದ್ದ ನೆದರ್ಲೆಂಡ್ಸ್ ತಂಡದ ವಿರುದ್ಧದ ಪಂದ್ಯದ 6ನೇ ಓವರ್‌ನ ಮೊದಲ ಎಸೆತದಲ್ಲೇ ಶ್ರೇಯಾಂಕಾ ಗಾಯಕ್ಕೆ ತುತ್ತಾಗಿದ್ದರು. ಬೌಲ್ ಮಾಡಲು ಬಂದ ಶ್ರೇಯಾಂಕಾ, ಮಿಡ್ ವಿಕೆಟ್ ಕಡೆ ಹೋದ ಬಾಲ್ ತಡೆಯಲು ಮುಂದಾದಾಗ ಕಾಲು ಜಾರಿ ಬಿದ್ದು ಗಾಯಕ್ಕೆ ತುತ್ತಾಗಿದ್ದರು. ಇದನ್ನೂ ಓದಿ: ಮೆಸ್ಸಿ ಹ್ಯಾಟ್ರಿಕ್ ಗೋಲು – ವಿಶ್ವಕಪ್‌ನಲ್ಲಿ ಮಿರೋಸ್ಲಾವ್ ಕ್ಲೋಸ್ ದಾಖಲೆ ಸರಿಗಟ್ಟಿದ ಫುಟ್ಬಾಲ್ ಲೆಜೆಂಡ್
ಶ್ರೇಯಾಂಕಾ ಅವರ ಬದಲಿಗೆ ಪ್ರೇಮಾ ರಾವತ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ತಾಂತ್ರಿಕ ಸಮಿತಿ ಒಪ್ಪಿಗೆ ನೀಡಿದೆ. ನಿಯಮಗಳ ಪ್ರಕಾರ ಯಾವುದೇ ಆಟಗಾರ್ತಿಯ ಬದಲಾವಣೆಗೂ ಮುನ್ನ ಈ ಸಮಿತಿಯ ಅನುಮತಿ ಕಡ್ಡಾಯವಾಗಿರುತ್ತದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕಿಚಾಯಿಸಿದ ಲಂಕಾ ಆಟಗಾರನ ಮೇಲೆ ಮುಗಿಬಿದ್ದ ವೈಭವ್ – ಮೈದಾನದಲ್ಲೇ ತಳ್ಳಾಟ, ಹೈಡ್ರಾಮಾ!

ಹೊಸದಾಗಿ ಆಯ್ಕೆಯಾಗಿರುವ 24 ವರ್ಷದ ಪ್ರೇಮಾ ರಾವತ್ ಅವರು ಇತ್ತೀಚೆಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಏಷ್ಯಾ ಕಪ್‌ನಲ್ಲಿ ಭಾರತ ಎ ತಂಡದ ಪರ ಆಡಿದ್ದ ಅವರು 9.62ರ ಸರಾಸರಿಯಲ್ಲಿ 8 ವಿಕೆಟ್ ಪಡೆದು ಮಿಂಚಿದ್ದರು. ಇನ್ನು ಡಬ್ಲ್ಯುಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಳೆದ ಎರಡು ಸೀಸನ್‌ಗಳಲ್ಲಿ ಒಟ್ಟು 6 ಪಂದ್ಯಗಳನ್ನು ಆಡಿರುವ ಇವರು 3 ವಿಕೆಟ್ ಪಡೆದಿದ್ದಾರೆ.
ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಅಂತರರಾಷ್ಟ್ರೀಯ ತಂಡಕ್ಕೆ ಮರಳಿದ್ದ ಶ್ರೇಯಾಂಕ ಅವರಿಗೆ ಈಗ ಮತ್ತೊಂದು ಹಿನ್ನಡೆ ಆಗಿದೆ. ಇದೇ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿ ಕೇವಲ 17 ರನ್ ಬಿಟ್ಟುಕೊಟ್ಟಿದ್ದರು.
