Connect with us

Chikkaballapur

ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಸರ್ಕಾರಕ್ಕೂ ಮುನ್ನ ಪುಟ್ಟ ಕಂದಮ್ಮಗಳ ನೆರವಿಗೆ ನಿಂತ ಎಚ್‍ಡಿಕೆ

Published

on

ಕೊಪ್ಪಳ/ಚಿಕ್ಕಬಳ್ಳಾಪುರ: ಗಂಗಾವತಿಯಲ್ಲಿ ಬಡ ಕುಟುಂಬವೊಂದರ ಎರಡು ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ವರದಿಗೆ ಆರೋಗ್ಯ ಸಚಿವರು ಸ್ಪಂದಿಸುವ ಮೊದಲೇ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸ್ಪಂದಿಸಿ ಮಾನವೀಯತೆ ಮೆರದಿದ್ದಾರೆ.

ಗಂಗಾವತಿ ನಗರದ ದುರ್ಗಪ್ಪ ಮತ್ತು ಸಣ್ಣ ಮರೆಕ್ಕ ದಂಪತಿಗೆ ಎರಡು ಮಕ್ಕಳು ಇದ್ದಾರೆ. ಆದರೆ ದುರಾದೃಷ್ಟವಶಾತ್ ಮಕ್ಕಳು

ಜನಿಸುತ್ತಲೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹನುಮೇಶ್‍ನಿಗೆ(3) ಹೃದಯದಲ್ಲಿ ತೊಂದರೆ ಇದ್ದರೆ, 11 ತಿಂಗಳ ದೀಪಿಕಾಗೆ ದೇಹದಲ್ಲಿ ಸಕ್ಕರೆ ಅಂಶ ಇಲ್ಲದ ಕಾರಣ ದಿನನಿತ್ಯ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ದಂಪತಿಯದ್ದು ತೀರಾ ಬಡ ಕುಟುಂಬವಾಗಿದ್ದು ಮಕ್ಕಳ ಆಸ್ಪತ್ರೆಯ ಖರ್ಚು ಭರಿಸಲು ಆಗದೆ ಇಂಜೆಕ್ಷನ್ ಅನ್ನು ತಂದೆಯೆ ಮಾಡಲು ಆರಂಭಿಸಿದ್ದಾರೆ. ಈ ತಂದೆ ಮಕ್ಕಳ ಕರುಣಾಜನಕದ ವರದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು.

ನಮ್ಮ ವರದಿಗೆ ಸ್ಪಂದಿಸಿದ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲಿ ನಡೆದ ಉಪ ಚುನಾವಣಾ ಬಹಿರಂಗ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಈ ವರದಿಯನ್ನು ಮೊಬೈಲ್ ಅಲ್ಲಿ ರೆಕಾರ್ಡ್ ಮಾಡಿಟ್ಟಿದ್ದನ್ನು ನೆರೆದಿದ್ದ ಲಕ್ಷಾಂತರ ಜನರಿಗೆ ತೊರಿಸಿ, ಕೂಡಲೇ ಆ ಕುಟುಂಬವನ್ನು ಸಂಪರ್ಕಿಸುತ್ತೇನೆ. ಚುನಾವಣೆ ಮುಗಿದ ನಂತರ ಎರಡು ಮಕ್ಕಳ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಬರಿಸುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಇಂತಹ ವರದಿಯನ್ನು ಪ್ರಸಾರ ಮಾಡಿದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ ಅರ್ಪಿಸಿದ್ದಾರೆ.

ದುರ್ಗಪ್ಪ ಮಗಳು ದೀಪಿಕಾಗೆ ದಿನಕ್ಕೆ ನಾಲ್ಕು ಬಾರಿ ರಕ್ತ ಪರೀಕ್ಷೆ ನಡೆಸಿ ಸಕ್ಕರೆ ಅಂಶವನ್ನು ಪರಿಶೀಲಿಸಬೇಕು. ಹಾಗೆಯೇ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ನೀಡಬೇಕು. ರಕ್ತ ಪರೀಕ್ಷೆ ಮತ್ತು ಇಂಜೆಕ್ಷನ್ ನೀಡಲು ಆಸ್ಪತ್ರೆಗೆ ಹೋದರೆ ನೂರಾರು ರೂಪಾಯಿ ಹಣ ನೀಡಬೇಕು. ಆದ್ದರಿಂದ ತಂದೆ ಮನೆಯಲ್ಲಿ ಮಗಳಿಗೆ ಇಂಜೆಕ್ಷನ್ ಮತ್ತು ರಕ್ತ ಪರೀಕ್ಷೆ ನಡೆಸುತ್ತಾರೆ. ಸಕ್ಕರೆ ಅಂಶ ಕಡಿಮೆ ಆದಾಗ ದೀಪಿಕಾಗೆ ಇಂಜೆಕ್ಷನ್ ನೀಡೋದು ಅನಿವಾರ್ಯವಾಗಿದೆ.

ದೀಪಿಕಾಗೆ ಸಕ್ಕರೆ ಅಂಶ ಕಡಿಮೆಯಾದ್ರೆ ಪಿಟ್ಸ್ ಬರುತ್ತೆ. ಹಾಗಾಗಿ ಆಕೆಯ ಸಕ್ಕರೆ ಅಂಶದ ಬಗ್ಗೆ ಪೋಷಕರು ಗಮನ ನೀಡಲೇಬೇಕು. ಮಕ್ಕಳ ಆರೋಗ್ಯ ನೋಡುತ್ತಾ ದುರಗಪ್ಪ ಮನೆಯಲ್ಲಿ ಕುಳಿತರೆ ಹೊಟ್ಟೆ ತುಂಬಲ್ಲ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಸಾಲಗಾರರಾಗಿದ್ದಾರೆ. ಪ್ರತಿದಿನ ದೀಪಿಕಾಗೆ ಇಂಜೆಕ್ಷನ್ ನೀಡಬೇಕಾಗಿದ್ದರಿಂದ ನೂರಾರು ರೂಪಾಯಿ ಹಣ ಖರ್ಚು ಮಾಡಬೇಕು. ವೈದ್ಯರು ನೀಡಿರುವ ಇಂಜೆಕ್ಷನ್ ಗಳನ್ನು ಫ್ರಿಡ್ಜ್ ನಲ್ಲಿ ಇರಿಸುವಂತೆ ಹೇಳಿದ್ದಾರೆ. ವಿದ್ಯುತ್ ಸಂಪರ್ಕವೇ ಇಲ್ಲದ ಈ ಜೋಪಡಿಯಲ್ಲಿ ಫ್ರಿಡ್ಜ್ ಕನಸಿನ ಮಾತು. ಹಾಗಾಗಿ ಇಂಜೆಕ್ಷನ್ ಗಳನ್ನು ಮಡಿಕೆಯಲ್ಲಿ ಇಡುತ್ತೇವೆ ಎಂದು ದುರ್ಗಪ್ಪ ಹೇಳಿಕೊಂಡಿದ್ದರು.

ಇದೊಂದು ಅನುವಂಶಿಕ ಕಾಯಿಲೆಯಾಗಿದ್ದು, ಸಕ್ಕರೆ ಅಂಶ ಕಡಿಮೆ ಆಯ್ತು ಅಂದ್ರೆ ಮಕ್ಕಳಿಗೆ ಪಿಟ್ಸ್ ಬರುವ ಸಾಧ್ಯತೆ ಇದೆ. ಈ ಕಾಯಿಲೆ ಲಕ್ಷ ಮಕ್ಕಳಿಗೆ ಒಂದರಿಂದ ಇಬ್ಬರಲ್ಲಿ ಮಾತ್ರ ಕಾಣಿಸುತ್ತದೆ. ನಾವು ಪ್ರಾಥಮಿಕ ಚಿಕಿತ್ಸೆ ನೀಡಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಲಾಗಿತ್ತು. ದಂಪತಿ ಮಗಳನ್ನು ಕರೆದುಕೊಂಡು ಹೋದಾಗ ದೀಪಿಕಾಗೆ ಸಕ್ಕರೆ ಅಂಶ ಕಡಿಮೆ ಇರೋದು ಗೊತ್ತಾಗಿದೆ. ಪ್ರತಿದಿನ ದೀಪಿಕಾಗೆ ಚಿಕಿತ್ಸೆ ನೀಡಬೇಕು. ಇಲ್ಲವಾದ್ರೆ ಅದು ಆಕೆಯ ಪ್ರಾಣಕ್ಕೆ ಅಪಾಯ ಎಂದು ಡಾ. ಅಮರೇಶ್ ಪಾಟೀಲ್ ತಿಳಿಸಿದ್ದರು.

ಇಬ್ಬರು ಮಕ್ಕಳಿಗೂ ಪ್ರತಿದಿನ ಔಷಧಿಯ ಉಪಚಾರ ಬೇಕಿದೆ. ಈಗಾಗಲೇ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿರುವ ದುರ್ಗಪ್ಪ ಸಹಾಯದ ನಿರೀಕ್ಷೆಯಲ್ಲಿದ್ದರು. ಈ ಕುಟುಂಬಕ್ಕೆ ಆಡಳಿತ ರೂಡ ಸರ್ಕಾರ ಸ್ಪಂದಿಸುವುದಕ್ಕೂ ಮುನ್ನ ಎರಡು ಪುಟ್ಟ ಕಂದಮ್ಮಗಳ ಚಿಕಿತ್ಸೆ ಭರಿಸಲು ಕುಮಾರಸ್ವಾಮಿ ಜವಾಬ್ದಾರಿ ತಗೆದುಕೊಂಡಿದ್ದು ಎನ್ನರ ಮೆಚ್ಚುಗೆಗೆ ಕಾರಣವಾಗಿದೆ.