– ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ಥಾನ
ನವದೆಹಲಿ: 2025 ರ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ (Operation Sindoor) ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ 6 ಸೈನಿಕರ (Soldiers) ಹೆಸರುಗಳನ್ನ ಸರ್ಕಾರ ಮೊದಲಬಾರಿಗೆ ಬಹಿರಂಗಪಡಿಸಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತೀಯ ಭೂಸೇನೆಯ ಐವರು ಮತ್ತು ವಾಯುಸೇನೆಯ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ. ಈ ಹುತಾತ್ಮರ ಹೆಸರುಗಳನ್ನು ದೆಹಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ (National War Memorial) 3D ರೂಪದಲ್ಲಿ ಕೆತ್ತಲಾಗುವುದು. ದೇಶಕ್ಕಾಗಿ ಅವರು ಮಾಡಿದ ಬಲಿದಾನವನ್ನ ಭಾರತೀಯರು ಎಂದೂ ಮರೆಯುವುದಿಲ್ಲ ಎಂದು ಸೇನೆ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಹುತಾತ್ಮರಾದ 6 ಯೋಧರು ಯಾರು?
– ಸುಬೇದಾರ್ ಮೇಜರ್ ಪವನ್ ಕುಮಾರ್, ಪ್ರಧಾನ ಕಚೇರಿ 10 ಪದಾತಿ ದಳ
– ರೈಫಲ್‌ಮ್ಯಾನ್ ಸುನಿಲ್ ಕುಮಾರ್, ವೀರ ಚಕ್ರ, 4 ಜಮ್ಮು ಮತ್ತು ಕಾಶ್ಮೀರ ಲಘು ಪದಾತಿ ದಳ
– ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್, 5 ಫೀಲ್ಡ್ ರೆಜಿಮೆಂಟ್
– ವಾಯುಯಾನ ತಂತ್ರಜ್ಞ ಮುರಳಿ ನಾಯಕ್, 851 ಲೈಟ್ ರೆಜಿಮೆಂಟ್
– ಹವಾಲ್ದಾರ್ ಸುನಿಲ್ ಕುಮಾರ್ ಸಿಂಗ್, 237 ಫೀಲ್ಡ್ ವರ್ಕ್‌ಶಾಪ್ ಕಂಪನಿ
– ಭಾರತೀಯ ವಾಯುಪಡೆಯ ಸಾರ್ಜೆಂಟ್ ಸುರೇಂದ್ರ ಕುಮಾರ್, ವಾಯು ಪದಕ, 39 ವಿಂಗ್

2025ರಲ್ಲಿ ನಡೆದ ವಿವಿಧ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಎಲ್ಲಾ ಸೈನಿಕರ ಪಟ್ಟಿಯೊಂದಿಗೆ, ಆಪರೇಷನ್ ಸಿಂಧೂರ್‌ನ ಈ ವೀರರ ಹೆಸರುಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿರುವ ‘ತ್ಯಾಗ ವೃತ್ತ’ ದೇಶದ ಧೈರ್ಯಶಾಲಿಗಳಿಗೆ ಸಮರ್ಪಿತವಾಗಿದ್ದು, ಇದು 16 ವೃತ್ತಾಕಾರದ ಗ್ರಾನೈಟ್ ಗೋಡೆಗಳನ್ನ ಒಳಗೊಂಡಿದೆ. ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನ ಹೆಸರು, ಶ್ರೇಣಿ ಮತ್ತು ಘಟಕವನ್ನು ಈ ಗೋಡೆಗಳ ಇಟ್ಟಿಗೆಗಳ ಮೇಲೆ ಕೆತ್ತಲಾಗಿದೆ.

ಈಗ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಹುತಾತ್ಮರಾದ 6 ಯೋಧರು ಕೂಡ, ರಾಷ್ಟ್ರೀಯ ಯುದ್ಧ ಸ್ಮಾರಕದ ಈ ತ್ಯಾಗ ವೃತ್ತದ ಶಾಶ್ವತ ಭಾಗವಾಗಲಿದ್ದಾರೆ.
2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ, ಭಯೋತ್ಪಾದಕರು 26 ಮುಗ್ಧ ಭಾರತೀಯ ನಾಗರಿಕರನ್ನು ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ ಹೆಸರಿನ ಸೇನಾ ಕಾರ್ಯಾಚರಣೆ ಪ್ರಾರಂಭಿಸಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತ್ತು.
