ಲಕ್ನೋ: ಅಯೋಧ್ಯೆ ರಾಮಮಂದಿರದ (Ayodhya Ram Mandir) ದೇಣಿಗೆ ಮತ್ತು ಆಭರಣ ಕಳ್ಳತನ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸುಳ್ಳು ಲೆಕ್ಕ ಬರೆದು ಬಾಲರಾಮನ (Balarama) ನಿಧಿಗೆ ಕನ್ನ ಹಾಕುತ್ತಿದ್ದ ಜಾಲಕ್ಕೆ ಪೊಲೀಸರು ‘ಅಷ್ಟ ಬಂಧನ’ ಹಾಕಿದ್ದಾರೆ. ಈ ಮಹಾ ವಂಚನೆ ಪ್ರಕರಣದಲ್ಲಿ ಇದುವರೆಗೆ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಸಂಪೂರ್ಣ ನಂಟಿನ ವಿವರ ಇಲ್ಲಿದೆ.
ಯಾರಿಗೆ ಯಾರ ನಂಟು?
1. ಅನುಕಲ್ಪ್ ಮಿಶ್ರಾ (ಡೊನೇಷನ್ ವೋಚರ್ ಬರಹಗಾರ)
ಇಡೀ ಕಳ್ಳತನದ ಜಾಲದ ಪ್ರಮುಖ ಸೂತ್ರಧಾರರಲ್ಲಿ ಈತನೂ ಒಬ್ಬ. ದೇವಸ್ಥಾನದ ದೇಣಿಗೆಗೆ ಸಂಬಂಧಿಸಿದ ಅಧಿಕೃತ ವೋಚರ್‌ಗಳನ್ನು ಬರೆಯುವ ಪ್ರಮುಖ ಜವಾಬ್ದಾರಿ ಈತನ ಮೇಲಿತ್ತು. ಬ್ಯಾಂಕ್‌ಗೆ ಕಳುಹಿಸುವ ಲೆಕ್ಕದಲ್ಲಿ ನೋಟುಗಳ ಸಂಖ್ಯೆಯನ್ನು ಕಡಿಮೆ ತೋರಿಸಿ, ಸುಳ್ಳು ವೋಚರ್ ಸೃಷ್ಟಿಸುತ್ತಿದ್ದ ಮಾಸ್ಟರ್ ಮೈಂಡ್ ಈತ.
2. ಲವ ಕುಶ್ ಮಿಶ್ರಾ (ಅನುಕಲ್ಪ್ ಮಿಶ್ರಾ ಒಡನಾಡಿ)
ಈತ ಪ್ರಮುಖ ಆರೋಪಿ ಅನುಕಲ್ಪ್ ಮಿಶ್ರಾನ ಹತ್ತಿರದ ಸಂಬಂಧಿ. ಅನುಕಲ್ಪ್ ಶಿಫಾರಸಿನ ಮೇರೆಗೆ ಹಣ ಎಣಿಕೆ ಕೋಣೆಗೆ ನುಸುಳಿದ್ದ ಈತ, ನೇರವಾಗಿ ಕಾಣಿಕೆ ಹಣ ಮತ್ತು ಆಭರಣಗಳನ್ನು ಎಗರಿಸುವ ಕೆಲಸ ಮಾಡುತ್ತಿದ್ದ. ಈತನ ಮನೆಯ ಮೇಲೆಯೇ ಪೊಲೀಸರು ದಾಳಿ ನಡೆಸಿ 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮನ ಲೆಕ್ಕ ‘ರಹಸ್ಯ’ ಬಯಲಾಗಿದ್ದು ಹೇಗೆ? – ಕಳೆದ 20 ದಿನಗಳಲ್ಲಿ ಏನೇನಾಯ್ತು?
3. ಟಿನ್ನು ಯಾದವ್ (ದೇಗುಲದ ಆಡಳಿತಾತ್ಮಕ ವ್ಯವಸ್ಥಾಪಕ)
ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಪ್ರಭಾವಿ ಹುದ್ದೆಯಲ್ಲಿದ್ದ ಈತ, ಟ್ರಸ್ಟ್‌ನ ಪ್ರಮುಖರಾದ ಚಂಪತ್ ರಾಯ್ ಅವರ ಚಾಲಕನೂ ಆಗಿದ್ದ. ತನ್ನ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು, ತಪಾಸಣೆಯಿಲ್ಲದೆ ತನ್ನ ನಿಕಟವರ್ತಿಗಳನ್ನು ಹಣ ಎಣಿಕೆ ಕೋಣೆಗೆ ಸೇರಿಸಲು ಈತನೇ ದಾರಿ ಮಾಡಿಕೊಟ್ಟಿದ್ದ.
4. ರಾಮಶಂಕರ್ ಮಿಶ್ರಾ ಅಲಿಯಾಸ್ ರವಿ ಮಿಶ್ರಾ
ಹಣ/ದೇಣಿಗೆ ಎಣಿಕೆ ಉಸ್ತುವಾರಿಯಾಗಿದ್ದ ಈತ ಇತರ ಸಿಬ್ಬಂದಿ ಜೊತೆ ಸಂಚು ರೂಪಿಸಿದ ಪ್ರಮುಖ. ಹಣ ಎಣಿಕೆಯಲ್ಲಿ ಪುತ್ರ ಮತ್ತು ಅಳಿಯನಿಗೆ ಸ್ಥಾನ ನೀಡಿದ್ದ. ಇದನ್ನೂ ಓದಿ: ಸಿಸಿಟಿವಿ ಕ್ಯಾಮೆರಾವಿದ್ದರೂ ಕಳ್ಳತನ – ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ರ
5. ಮನೀಷ್ ಯಾದವ್ (ಟಿನ್ನು ಯಾದವ್ ಸಂಬಂಧಿ)
ವ್ಯವಸ್ಥಾಪಕ ಟಿನ್ನು ಯಾದವ್‌ನ ವೈಯಕ್ತಿಕ ಶಿಫಾರಸಿನ ಮೇರೆಗೆ ಈತ ಹಣ ಎಣಿಕೆಯ ಕಾರ್ಯಕ್ಕೆ ನಿಯೋಜನೆಗೊಂಡಿದ್ದ. ಸಿಸಿಟಿವಿ ಕ್ಯಾಮರಾಗಳಿಗೆ ಅಡ್ಡ ನಿಂತು, ಕಂತೆಗಳಿಂದ ನೋಟುಗಳನ್ನು ಎಗರಿಸಿ ಬಟ್ಟೆಯೊಳಗೆ ಬಚ್ಚಿಟ್ಟುಕೊಳ್ಳುವ ಕಳ್ಳಾಟದಲ್ಲಿ ಈತ ಸಕ್ರಿಯವಾಗಿ ಭಾಗಿಯಾಗಿದ್ದ.
6. ಅವಿನಾಶ್ ಪಾಂಡೆ (ಖಾತೆದಾರ ಮತ್ತು ಸಿಬ್ಬಂದಿ)
ದೇಗುಲದ ಹಣ ಎಣಿಕೆ ವಿಭಾಗದ ಸಿಬ್ಬಂದಿಯಾಗಿದ್ದ ಈತನ ಡಿಜಿಟಲ್ ಹೆಜ್ಜೆಗುರುತುಗಳನ್ನು ಬೆನ್ನಟ್ಟಿದಾಗ ಇಡೀ ಹಗರಣ ಬಯಲಾಗಿದೆ. ಈತನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದ ದಿನಗಳಂದೇ ಈತನ ವೈಯಕ್ತಿಕ ಬ್ಯಾಂಕ್ ಖಾತೆಗೆ ಕದ್ದ ಹಣದ ದೊಡ್ಡ ಪಾಲಿನ ಮೊತ್ತ ಜಮೆಯಾಗಿರುವುದು ಪತ್ತೆಯಾಗಿದೆ.
7. ಸುಭಾಷ್ ಶ್ರೀವಾಸ್ತವ
ಮಾಜಿ ಬ್ಯಾಂಕ್ ಉದ್ಯೋಗಿಯಾಗಿದ್ದ ಈತ ಕ್ಯಾಶ್ ಕೌಂಟಿಂಗ್ ಉಸ್ತುವಾರಿಯಾಗಿದ್ದ
8. ಕರುಣೇಶ್ ಪಾಂಡೆ
ನಕಲಿ ರಶೀದಿಗಳನ್ನು ಸೃಷ್ಟಿ ಮಾಡಿ ವಂಚನೆಗೆ ಸಾಥ್ ನೀಡುತ್ತಿದ್ದ.

