– ಬಾಲರಾಮನ ಆಭರಣಗಳೂ ಚೋರಿ!
– ಎಣಿಕೆಗೆ ಬಂಧು-ಬಳಗದ ಬಳಕೆ
ಲಕ್ನೋ: ಕಾಣಿಕೆ ಹುಂಡಿಯಿಂದ ನಿರಂತರವಾಗಿ ನಾಪತ್ತೆಯಾಗುತ್ತಿದ್ದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು, ಸಿಸಿಟಿವಿ ಕ್ಯಾಮರಾಗಳಿಗೆ ಕಣ್ಣು ಮುಚ್ಚಾಲೆ ಆಡುತ್ತಿದ್ದ ಸಿಬ್ಬಂದಿ, ಬ್ಯಾಂಕ್ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಕಿಲಾಡಿ ಆಟ. ಇದು ಅಯೋಧ್ಯೆ (Ayodhya) ರಾಮ ಮಂದಿರದ (Ram Mandir) ಇತಿಹಾಸದಲ್ಲೇ ನಡೆದ ಅತ್ಯಂತ ವ್ಯವಸ್ಥಿತ ದೇಣಿಗೆ ಕಳ್ಳತನದ ಇನ್ಸೈಡ್ ಸ್ಟೋರಿ.
ದೇಶ-ವಿದೇಶಗಳ ಭಕ್ತರು ಬಾಲರಾಮನಿಗೆ (Balarama) ಕೋಟ್ಯಂತರ ರೂಪಾಯಿ ದೇಣಿಗೆ ನೀಡುತ್ತಿದ್ದರೆ ಅದೇ ಮಂದಿರದ ಆಡಳಿತ ಮಂಡಳಿಯ ನಂಬಿಕಸ್ಥ ಸಿಬ್ಬಂದಿ ದೇವರ ಹಣಕ್ಕೇ ಕನ್ನ ಹಾಕುತ್ತಿದ್ದರು. ಮೇ ಕೊನೆಯ ವಾರದಲ್ಲಿ ಆರಂಭವಾದ ಸಣ್ಣದೊಂದು ಅನುಮಾನ ಈಗ ದೊಡ್ಡ ಮಟ್ಟದ ಹಗರಣವನ್ನು ಮುಂದೆ ತಂದಿಟ್ಟಿದೆ.
ಅನುಮಾನ ಬಂದಿದ್ದು ಹೇಗೆ?
ಸಾಮಾನ್ಯವಾಗಿ ದೇವಸ್ಥಾನದ ಒಂದು ದೇಣಿಗೆ ಡಬ್ಬದಲ್ಲಿ 6 ರಿಂದ 7 ಲಕ್ಷ ರೂಪಾಯಿ ಸಂಗ್ರಹವಾಗುತ್ತದೆ. ಆದರೆ ಕಳೆದ ಕೆಲವು ವಾರಗಳಿಂದ ಕಾಣಿಕೆ ಪೆಟ್ಟಿಗೆಯಿಂದ 500 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳು ನಿರಂತರವಾಗಿ ನಾಪತ್ತೆಯಾಗುತ್ತಿದ್ದವು. ಇದು ಟ್ರಸ್ಟ್‌ನ ಪದಾಧಿಕಾರಿಗಳಲ್ಲಿ ತೀವ್ರ ಆತಂಕ ಹಾಗೂ ಅನುಮಾನ ಮೂಡಿಸಿತ್ತು.
ಬಟ್ಟೆಯೊಳಗೆ ಹಣ!
ಸಿಸಿ ಕ್ಯಾಮೆರಾ ಅಳವಡಿಸಿದ್ದರೂ ಮೋಸದಾಟ ನಡೆಯುತ್ತಿರುವ ಶಂಕೆ ಬಲವಾದ ತಕ್ಷಣ ಹಣ ಎಣಿಕೆ ಮಾಡುವ ಕೋಣೆಯಲ್ಲಿ ಅತ್ಯಂತ ರಹಸ್ಯವಾಗಿ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಈ ರಹಸ್ಯ ಕ್ಯಾಮೆರಾದಲ್ಲಿ ಕಳ್ಳರ ಕಳ್ಳಾಟ ಬಯಲಾಗಿದೆ.
ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಹಣವನ್ನು ಕಳ್ಳತನ ಮಾಡಿದರೆ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ ಎನ್ನುವುದನ್ನು ಇವರಿಗೆ ಗೊತ್ತಿತ್ತು. ಈ ಕಾರಣಕ್ಕೆ ಎಣಿಕೆ ತಂಡದಲ್ಲಿದ್ದ ಓರ್ವ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾಕ್ಕೆ ಕಾಣಿಸದಂತೆ ಅಡ್ಡಲಾಗಿ ನಿಲ್ಲುತ್ತಿದ್ದನು. ಆತ ಅಡ್ಡ ನಿಂತ ತಕ್ಷಣ, ಉಳಿದ ಸಿಬ್ಬಂದಿ ನೋಟಿನ ಕಂತೆಗಳಿಂದ ಹಣವನ್ನು ಎಗರಿಸಿ ತಾವು ಧರಿಸಿದ್ದ ಬಟ್ಟೆಯೊಳಗೆ ಅತ್ಯಂತ ಚಾಣಾಕ್ಷತನದಿಂದ ಬಚ್ಚಿಡುತ್ತಿದ್ದರು.
ಬ್ಯಾಂಕ್‌ಗೂ ಮೋಸ:
ಆರೋಪಿಗಳು ಹಣ ಎಗರಿಸಲು ಕೇವಲ ಬಟ್ಟೆಯೊಳಗೆ ಬಚ್ಚಿಡುತ್ತಿರಲಿಲ್ಲ, ಬದಲಿಗೆ ಬ್ಯಾಂಕ್ ವ್ಯವಸ್ಥೆಯನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಹಣ ಎಣಿಕೆ ಮಾಡುವ ಸಿಬ್ಬಂದಿ ಪ್ರತಿ ನೋಟಿನ ಕಂತೆಗೂ ಹೆಚ್ಚುವರಿ ನೋಟುಗಳನ್ನು ಸೇರಿಸುತ್ತಿದ್ದರು. ಆದರೆ ಮುಖ್ಯ ಲೆಕ್ಕದಲ್ಲಿ ಮಾತ್ರ ನೋಟುಗಳ ಸಂಖ್ಯೆ ಕಡಿಮೆ ಎಂದು ತೋರಿಸುತ್ತಿದ್ದರು. ಇದನ್ನೂ ಓದಿ: ದೇಣಿಗೆ ಕಳ್ಳತನ ವಿವಾದ: ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ರಾಜೀನಾಮೆ
ತಪಾಸಣೆ ಇಲ್ಲ:
ವೈಯಕ್ತಿಕ ಶಿಫಾರಸುಗಳ ಮೂಲಕ ಹಣ ಎಣಿಕೆಯ ಕಾರ್ಯಕ್ಕೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದೇ ಈ ಕಳ್ಳತನಕ್ಕೆ ಮುಖ್ಯ ಕಾರಣ. ಎಣಿಕೆಗೆ ಬರುವ ಯಾರಿಗೂ ಕೂಡ ಯಾವುದೇ ನಿಯಮಿತ ತಪಾಸಣೆ (Checking) ಇರಲಿಲ್ಲ. ಇದು ಆರೋಪಿಗಳಿಗೆ ವರದಾನವಾಗಿ ಪರಿಣಮಿಸಿತು.
ದೇಗುಲದ ಆಡಳಿತಾತ್ಮಕ ವ್ಯವಸ್ಥಾಪಕ ಹಾಗೂ ಚಂಪತ್ ರಾಯ್ ಅವರ ಚಾಲಕನಾಗಿದ್ದ ಟಿನ್ನು ಯಾದವ್, ತನ್ನ ಸಂಬಂಧಿ ಮನೀಷ್ ಯಾದವ್ ಎಂಬಾತನನ್ನು ಹಣ ಎಣಿಕೆ ಕಾರ್ಯಕ್ಕೆ ಶಿಫಾರಸು ಮಾಡಿ ಸೇರಿಸಿದ್ದನು. ಮತ್ತೊಬ್ಬ ಆರೋಪಿ ಅನುಕಲ್ಪ್ ಮಿಶ್ರಾ ತನ್ನ ಸಂಬಂಧಿ ಲವ ಕುಶ್ ಮಿಶ್ರಾ*ನನ್ನೂ ಇದೇ ಕೆಲಸಕ್ಕೆ ಸೇರಿಸಿದ್ದನು. ಡೊನೇಷನ್ ಬಾಕ್ಸ್ ಓಪನ್ ಆಗುತ್ತಿದ್ದಂತೆ ಇವರೆಲ್ಲರೂ ನೋಟುಗಳನ್ನು ಕದಿಯಲು ಶುರು ಮಾಡುತ್ತಿದ್ದರು.
ಆಭರಣಗಳೂ ಚೋರಿ!
ಆರೋಪಿಗಳು ಕೇವಲ ನಗದು ಹಣವನ್ನಷ್ಟೇ ಅಲ್ಲ, ಭಕ್ತರು ಬಾಲರಾಮನಿಗೆ ಭಕ್ತಿಯಿಂದ ಅರ್ಪಿಸಿದ್ದ ಚಿನ್ನಾಭರಣಗಳನ್ನೂ ದೋಚಿದ್ದಾರೆ. ರಾಮಲಲ್ಲಾನಿಗೆ ದಾನವಾಗಿ ಬಂದಿದ್ದ ಕಿವಿಯೋಲೆ, ಮೂಗುತಿ, ಬಳೆಗಳು, ಕಾಲುಂಗುರ ಮತ್ತು ಇತರೆ ಬೆಲೆಬಾಳುವ ಆಭರಣಗಳನ್ನು ಅಧಿಕೃತವಾಗಿ ದೇಗುಲದ ಲೆಕ್ಕದ ಪುಸ್ತಕದಲ್ಲಿ ದಾಖಲಿಸುವ ಮುನ್ನವೇ ಕಾಣಿಕೆ ಪೆಟ್ಟಿಗೆಯಿಂದ ದೋಚಲಾಗಿತ್ತು. ಇದನ್ನೂ ಓದಿ: ರಾಮಭಕ್ತರ ಅಗ್ನಿಪರೀಕ್ಷೆ ಬೇಡ, ಕಾಣಿಕೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್ ಎಚ್ಚರಿಕೆ
ಸಿಕ್ಕಿಬಿದ್ದಿದ್ದು ಹೇಗೆ?
ಟ್ರಸ್ಟ್‌ನ ಸಿಬ್ಬಂದಿ ಅವಿನಾಶ್ ಪಾಂಡೆ ಎಂಬಾತನ ಸಿಸಿಟಿವಿ ದೃಶ್ಯಾವಳಿಗಳನ್ನು ತನಿಖಾ ತಂಡ ಸಂಪೂರ್ಣವಾಗಿ ಪರಿಶೀಲಿಸಿತು. ಕಳ್ಳತನ ನಡೆದ ದಿನಾಂಕಗಳು ಮತ್ತು ಅಂದು ಬ್ಯಾಂಕ್‌ನಲ್ಲಿ ಠೇವಣಿಯಾದ ಹಣದ ವಿವರಗಳನ್ನು ಹೋಲಿಕೆ ಮಾಡಿದಾಗ ಸತ್ಯ ಹೊರಬಂದಿದೆ. ಕಳ್ಳತನ ನಡೆದ ಅದೇ ದಿನವೇ ಅವಿನಾಶ್ ಪಾಂಡೆಯ ವೈಯಕ್ತಿಕ ಬ್ಯಾಂಕ್ ಖಾತೆಗೆ ಕದ್ದ ಹಣದ ಪಾಲು ಜಮೆಯಾಗಿರುವುದು ಪತ್ತೆಯಾಗಿದೆ.
ಸದ್ಯ ಅನುಕಲ್ಪ್ ಮಿಶ್ರಾ ಮತ್ತು ಆತನ ಸಂಬಂಧಿ ಲವ ಕುಶ್ ಮಿಶ್ರಾ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದರು. ಡೊನೇಷನ್ ವೋಚರ್ ಬರೆಯುವ ಪ್ರಮುಖ ಹೊಣೆ ಅನುಕಲ್ಪ್ ಮಿಶ್ರಾ ಮೇಲಿತ್ತು. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಲವ ಕುಶ್ ಮಿಶ್ರಾ ಮನೆಯ ಮೇಲೆ ದಾಳಿ ನಡೆಸಿ 10 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ.
