ಲಕ್ನೋ: ರಾಮ ಮಂದಿರದಲ್ಲಿ ಪಡೆದ ದೇಣಿಗೆಗಳ ದುರುಪಯೋಗದ (Ram Mandir Donation Row) ಆರೋಪದ ಮೇಲೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ 8 ಜನರನ್ನ ಬಂಧಿಸಲಾಗಿದೆ. ಜೂನ್ 23 (ಮಂಗಳವಾರ) ಎಸ್‌ಐಟಿ (SIT) ತನ್ನ ಪ್ರಾಥಮಿಕ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಸುಮಾರು 7.5 ಕೋಟಿ ರೂ. ಕಾಣೆಯಾಗಿರುವ ಗಂಭೀರ ಆರೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು – ದೇವಾಲಯದಲ್ಲಿ ದೇಣಿಗೆಯಾಗಿ ಸ್ವೀಕರಿಸಿದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನ ಎಣಿಸುವ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಸಿಟಿವಿ ಕ್ಯಾಮೆರಾವಿದ್ದರೂ ಕಳ್ಳತನ – ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ರಹಸ್ಯ ಕ್ಯಾಮೆರಾದಲ್ಲಿ ಬಯಲಾಗಿದ್ದೇಗೆ?

ಎಲ್ಲಾ ಆರೋಪಿಗಳು ಅಯೋಧ್ಯೆಯಲ್ಲಿಯೇ (Ayodhya) ಇದ್ದರು ಮತ್ತು ನಿನ್ನೆ (ಜೂನ್ 25-ಗುರುವಾರ) ತಡರಾತ್ರಿ ಅವರನ್ನ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಪೊಲೀಸರು ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ದೇಗುಲದ ಹಣಕಾಸು ವಿವರ ನೀಡಲು ಟ್ರಸ್ಟ್ ಅಸಮ್ಮತಿ ಸೂಚಿಸಿರುವುದ ಕೂಡ ಗಮನ ಸೆಳೆದಿದೆ. ಇದನ್ನೂ ಓದಿ: ರಾಮಭಕ್ತರ ಅಗ್ನಿಪರೀಕ್ಷೆ ಬೇಡ, ಕಾಣಿಕೆ ಹಣದಲ್ಲಿ ಅಕ್ರಮ ಎಸಗುವವರನ್ನು ಬಿಡುವುದಿಲ್ಲ: ಯೋಗಿ ಆದಿತ್ಯನಾಥ್ ಎಚ್ಚರಿಕೆ
ರಾಮ ಮಂದಿರ ದೇಣಿಗೆ ಅವ್ಯವಹಾರದ ಕುರಿತು ತನಿಖೆ ನಡೆಸಿದ ವಿಶೇಷ ತನಿಖಾ ತಂಡ 13 ದಿನದಲ್ಲಿ ಪ್ರಾಥಮಿಕ ವರದಿ ಸಲ್ಲಿಸಿದ್ದು, ಅನೇಕ ಸಂಗತಿಗಳನ್ನು ಹೊರಹಾಕಿದೆ. ಕಳೆದ 20 ದಿನದಲ್ಲಿ ಏನೇನಾಯ್ತು ಅಂತ ನೋಡುವುದಾದ್ರೆ?

ಜೂನ್ 7
– ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆಯಿಂದ 7.50 ಕೋಟಿ ಕಳ್ಳತನ ಆರೋಪ
– ಅಂದು ಸಂಜೆಯೇ ಎಕ್ಸ್ ನಲ್ಲಿ ಅಖಿಲೇಶ್ ಯಾದವ್ ಪೋಸ್ಟ್
– ಅಂದು ಸಂಜೆಯೇ ಚಂಪತ್ ರಾಯ್ ಸ್ಪಷ್ಟೀಕರಣ
ಜೂನ್ 8
– ಸಮಾಜವಾದಿ ಪಕ್ಷದ ಆರೋಪ ತಿರಸ್ಕರಿಸಿದ ಚಂಪತ್ ರಾಯ್
– ಸಂಜೆ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅಯೋಧ್ಯೆಗೆ ಭೇಟಿ, ಮರು ದಿನ ವಾಪಸ್
ಜೂನ್ 9
– ಪ್ರಧಾನಿ ಮೋದಿಗೆ ಬಿಜೆಪಿ ಮುಖಂಡ ಡಾ.ರಜನೀಶ್ ಶರ್ಮಾ ದೂರು
– ಸಿಬಿಐ ಅಥವಾ ಇಡಿ ಯಂತಹ ಸ್ವತಂತ್ರ ಸಂಸ್ಥೆಗಳಿಂದ ತನಿಖೆಗೆ ಪತ್ರದಲ್ಲಿ ಮನವಿ
ಜೂನ್ 10
– ಪ್ರಕರಣದ ವಿವರ ಕೋರಿದ ಪ್ರಧಾನಿ ಕಾರ್ಯಾಲಯ
– ವಿಸ್ತೃತ ವರದಿ ನೀಡುವಂತೆ ಸೂಚನೆ
– ಅದೇ ದಿನ ನೃಪೇಂದ್ರ ಮಿಶ್ರಾ ಮತ್ತೆ ಅಯೋಧ್ಯೆಗೆ ಭೇಟಿ, 4 ಗಂಟೆಗಳ ಕಾಲ ಸಭೆ
ಜೂನ್ 11
– ರಾಮಮಂದಿರದ ಮಾಜಿ ಲೆಕ್ಕ ಪರಿಶೋಧಕ ಮಹಿಪಾಲ್ ಸಿಂಗ್ ವೀಡಿಯೋ ಬಿಡುಗಡೆ
– 2021-22ರಲ್ಲೇ ಕಳ್ಳತನ ಪತ್ತೆಯಾಗಿತ್ತು
– ಸಿಸಿಟಿವಿ ವೀಡಿಯೋ ಡಿಲೀಟ್ ಮಾಡಿದ್ದಾರೆ ಎಂದು ವೀಡಿಯೋ ಸಂದೇಶ
ಜೂನ್ 13
ಟ್ರಸ್ಟ್ ನಿಂದ ತನಿಖೆಗೆ ಮನವಿ – ಎಸ್ ಐ ಟಿ ರಚಿಸಿದ ಉತ್ತರ ಪ್ರದೇಶ ಸರ್ಕಾರ
ಜೂನ್ 15
– ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ , ಗೋಪಾಲ್ ರಾಯ್ ಬಳಿ ಮಾಹಿತಿ ಸಂಗ್ರಹಿಸಿದ ಎಸ್ ಐ ಟಿ
– 8-10 ಸಿಬ್ಬಂದಿಗೆ 6 ಗಂಟೆ ಕಾಲ ವಿಚಾರಣೆ
ಜೂನ್ 16
– ಚಂಪತ್ ರಾಯ್ ಮತ್ತು ಗೋಪಾಲ್ ರಾಯ್ ಜೊತೆ ತಲಾ 4 ಗಂಟೆಗಳ ಕಾಲ ಎಸ್ ಐ ಟಿ ಪ್ರಶ್ನೋತ್ತರ
– ಟ್ರಸ್ಟ್ ನ 11 ತಿಂಗಳ ದಾಖಲೆಗಳನ್ನು ನೀಡುವಂತೆ ಸೂಚನೆ
– ರಾಮ ಮಂದಿರದ ದೇಣಿಗೆ/ಕಾಣಿಕೆ ಎಣಿಕಾ ಸಿಬ್ಬಂದಿ ವಿಚಾರಣೆ
ಜೂನ್ 17
– ಬ್ಯಾಂಕ್ ಅಧಿಕಾರಿಗಳು ಮತ್ತು ಎಣಿಕಾ ಉಸ್ತುವಾರಿಯ ಖಾಸಗಿ ಏಜೆನ್ಸಿ ವಿಚಾರಣೆ
– ಬ್ಯಾಂಕ್ ಸ್ಟೇಟ್ ಮೆಂಟ್, ಹಣಕಾಸು ವ್ಯವಹಾರಗಳ ದಾಖಲೆ ಪರಿಶೀಲಿಸಿದ ಎಸ್ ಐ ಟಿ
ಜೂನ್ 18
– 10 ಗಂಟೆಗಳ ಕಾಲ ಮಂದಿರದ ಆವರಣದಲ್ಲಿದ್ದ ಎಸ್ ಐ ಟಿ
– ಡಾ.ಅನಿಲ್ ಮಿಶ್ರಾಗೆ 4 ಗಂಟೆಗಳ ವಿಚಾರಣೆ
– ಟಿನ್ನೂ ಯಾದವ್ ಗೆ ಒಂದೂವರೆ ಗಂಟೆ ವಿಚಾರಣೆ
– ಅನಿಲ್ – ಟಿನ್ನೂ ಉತ್ತರಗಳ ಕ್ರಾಸ್ ಚೆಕ್
ಜೂನ್ 19
– ಚಂಪತ್ ರಾಯ್, ಅನಿಲ್ ಮಿಶ್ರಾ, ಗೋಪಾಲ್ ರಾಯ್ ಜೊತೆ ಪ್ರತ್ಯೇಕವಾಗಿ ಎಸ್ ಐ ಟಿ ವಿಚಾರಣೆ
– ಸ್ಟೇಟ್ ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ವಿಚಾರಣೆ
ಜೂನ್20
– ಎಲ್ಲ ಆರೋಪಿಗಳು ಮತ್ತು ಶಂಕಿತರ ಬ್ಯಾಂಕ್ ಖಾತೆ ಮಾಹಿತಿ ಸಂಗ್ರಹಿಸಿದ ಎಸ್ ಐ ಟಿ
– ಸಾಕ್ಷ್ಯಗಳ ಸಂಗ್ರಹ
– ತನಿಖೆ ಮುಗಿಸಿ ಸಾಕ್ಷ್ಯಗಳ ಜೊತೆ ಲಕ್ನೋಗೆ ತೆರಳಿದ ಎಸ್ ಐ ಟಿ
ಜೂನ್ 23
– 20 ಪುಟಗಳ ಪ್ರಾಥಮಿಕ ತನಿಖಾ ವರದಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್ ಗೆ ಹಸ್ತಾಂತರಿಸಿದ ಎಸ್ ಐ ಟಿ
ಜೂನ್ 25
– ಎಸ್ ಐ ಟಿ ವರದಿ ಆಧರಿಸಿ ಎಫ್ ಐ ಆರ್ ದಾಖಲು
– 8 ಆರೋಪಿಗಳ ಬಂಧನ
ಜೂನ್ 26
– ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ
