ನವದೆಹಲಿ: ಡೇ ಕೇರ್‌ನಲ್ಲಿ(Day Care) ನಡೆದ ನಿರ್ಲಕ್ಷ್ಯದಿಂದ 2 ವರ್ಷದ ಮಗುವೊಂದು(Child Biting) ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಜೂನ್ 22ರಂದು ಸಿಐಡಿಸಿಒ ಪ್ರದೇಶದ ಫಸ್ಟ್‌ಕ್ರೈ ಇಂಟೆಲ್ಲಿಟಾಟ್ಸ್ ಪ್ರೀ-ಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10:30ರ ಸುಮಾರಿಗೆ ವಕೀಲೆಯಾಗಿರುವ ತಾಯಿ ತಮ್ಮ 2 ವರ್ಷದ ಮಗುವನ್ನು ಡೇ ಕೇರ್‌ನಲ್ಲಿ ಬಿಟ್ಟು ಹೋಗಿದ್ದರು.
ಸ್ವಲ್ಪ ಸಮಯದ ಬಳಿಕ ಒಂದು ಮಗು ಹೊರಗೆ ಹೋಗಲು ಯತ್ನಿಸಿತು. ಆಗ ಆರೈಕೆ ಸಿಬ್ಬಂದಿ ಆ ಮಗುವನ್ನು ಕರೆದುಕೊಂಡು ಹೊರಗೆ ಹೋಗಿ, ಉಳಿದ ಮೂವರು ಮಕ್ಕಳನ್ನು ಕೋಣೆಯೊಳಗೆ ಲಾಕ್ ಮಾಡಿ ಬಾಗಿಲು ಮುಚ್ಚಿದ್ದಾರೆ.
ಕೋಣೆಯಲ್ಲಿ ಯಾವುದೇ ಶಿಕ್ಷಕಿ ಅಥವಾ ಸಿಬ್ಬಂದಿ ಇರಲಿಲ್ಲ. ಇದರಿಂದ ಮಕ್ಕಳು ಭಯಗೊಂಡು ಅಳಲು ಆರಂಭಿಸಿದ್ದಾರೆ. ಇದೇ ವೇಳೆ ಒಂದು ಮಗು ಮತ್ತೊಂದು ಮಗುವನ್ನು ಪದೇ ಪದೇ ಕಚ್ಚಿದೆ.
ಸಿಸಿಟಿವಿ ದೃಶ್ಯದಲ್ಲಿ ಸುಮಾರು 15 ನಿಮಿಷಗಳ ಅವಧಿಯಲ್ಲಿ ಮಗುವಿಗೆ 25 ಬಾರಿ ಕಚ್ಚಿರುವುದು ದಾಖಲಾಗಿದೆ. ಮಗು ನೋವಿನಿಂದ ಅಳುತ್ತಿದ್ದರೂ ಸುಮಾರು 45 ನಿಮಿಷಗಳ ಕಾಲ ಯಾರೂ ಒಳಗೆ ಹೋಗಿ ನೋಡಿಲ್ಲ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಮಗುವಿನ ಮುಖ, ಮೂಗು, ತುಟಿ, ಎದೆ, ಬೆನ್ನು ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಧ್ಯಾಹ್ನ 2 ಗಂಟೆಯವರೆಗೆ ಈ ಘಟನೆ ಬಗ್ಗೆ ಶಾಲಾ ಆಡಳಿತ ಪೋಷಕರಿಗೆ ಮಾಹಿತಿ ನೀಡಿರಲಿಲ್ಲ. ಮಗು ಕೇವಲ ಸಣ್ಣ ಗಾಯ ಮಾಡಿಕೊಂಡಿದೆ ಎಂದು ತಿಳಿಸಲಾಗಿತ್ತು. ಆದರೆ ಮಗುವಿನ ಬಟ್ಟೆ ತೆಗೆದು ನೋಡಿದಾಗ ದೇಹದ ಹಲವು ಭಾಗಗಳಲ್ಲಿ ಗಾಯಗಳಿರುವುದು ಕಂಡುಬಂದಿದೆ.ಇದನ್ನೂ ಓದಿ: NCERT ಹೊಸ ಪಠ್ಯದಲ್ಲಿ ಮೊದಲ ಬಾರಿಗೆ SIR ಸೇರ್ಪಡೆ
ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಡೇ ಕೇರ್‌ನ ಸಿಇಒ, ಇಬ್ಬರು ವ್ಯವಸ್ಥಾಪಕರು, ಪ್ರಾಂಶುಪಾಲೆ ಹಾಗೂ ಆರೈಕೆ ಸಿಬ್ಬಂದಿ ಸೇರಿ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸದಂತೆ 10 ಲಕ್ಷ ರೂಪಾಯಿ ಹಾಗೂ ಮೂರು ವರ್ಷ ಉಚಿತ ಶಿಕ್ಷಣ ನೀಡುವ ಆಫರ್ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಜೊತೆಗೆ ನಮ್ಮಿಂದ ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿ ಆಡಳಿತ ನಿರ್ಲಕ್ಷ್ಯ ತೋರಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಪ್ರಕರಣದ ಬಗ್ಗೆ ಶಿಕ್ಷಣ ಇಲಾಖೆಯೂ ತನಿಖೆ ಆರಂಭಿಸಿದೆ. ಶಾಲೆಗೆ ಅಗತ್ಯ ಪೌರಾಡಳಿತ ಅನುಮತಿ ಇಲ್ಲ ಎಂಬ ಮಾಹಿತಿಯೂ ಹೊರಬಿದ್ದಿದೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.ಇದನ್ನೂ ಓದಿ: ಕೇಂದ್ರದಿಂದ ಗುಡ್‌ನ್ಯೂಸ್ – ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವು

