ಕಡಲಿಂದ ನಾಡು… ಕಡಲಿಂದ ಕಾಡು… ಕಡಲಿಂದ ತಾನೆ ಒಡಲಾಗೂಡು. ಬಹುನಿರೀಕ್ಷೆಯ ಕರಾವಳಿ (Karavali) ಸಿನಿಮಾದ ಸೋಲ್ ಆಫ್ ಕರಾವಳಿ ಹಾಡು ರಿಲೀಸ್ ಆಗಿದ್ದು ಕರಾವಳಿ ಜನರ ಹೃದಯ ಗೆದ್ದಿದೆ. ಕರಾವಳಿಯ ಹೆಮ್ಮೆ ಕಂಬಳ ಈ ಹಾಡಿನ ಹೈಲೆಟ್. ಸಂಪೂರ್ಣ ಕಂಬಳದ(Kambala) ಚಿತ್ರಣ ಈ ಹಾಡಿನ ಮೂಲಕ ತೆರೆದಿಡಲಾಗಿದೆ. ಗುರುದತ್ ಗಾಣಿಗ(Gurudatha Ganiga) ನಿರ್ದೇಶನದ ಪ್ರಜ್ವಲ್ ದೇವರಾಜ್(Prajwal Devaraj), ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಕರಾವಳಿ ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾದ ಪ್ರಮೋಷನ್ ಚಟುವಟಿಕೆಗಳು ಭರದಿಂದ ನಡೆಯುತ್ತಿದೆ.
ಕಡಲ ನಾಡಿಗೆ ಕೈ ಬೀಸಿ ಕರೆಯುತ್ತಿರುವ ಈ ಅದ್ಭುತ ಹಾಡಿನ ಸಂಪೂರ್ಣ ಚಿತ್ರೀಕರಣ ಕಟಪಾಡಿ ಕಂಬಳ ಟ್ರ್ಯಾಕ್ ನಲ್ಲಿ ಮಾಡಲಾಗಿದೆ. ಕಟಪಾಡಿಯಲ್ಲಿ(Katpadi) ನಡೆಯುವ ಕಂಬಳಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ. ಕರಾವಳಿ ಭಾಗದಲ್ಲಿ ನಡೆಯುವ ಕಂಬಳಗಳಲ್ಲಿಯೇ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವ ಕಂಬಳ ಕಟಪಾಡಿ ಕಂಬಳ. ತೀರಾ ಸಾಂಪ್ರಾದಾಯಿಕವಾಗಿ ಇಲ್ಲಿ ಕಂಬಳ ನಡೆಸಿಕೊಂಡು ಬರಲಾಗುತ್ತಿದೆ. ವಿಶೇಷ ಎಂದರೆ ಸುಮಾರು 700ವರ್ಷಗಳಿಂದನೂ ಒಂದೇ ಕುಟುಂಬ ಕಂಬಳ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಟ ದರ್ಶನ್ ಪುತ್ರನಿದ್ದ ಕಾರು ಅಪಘಾತ – ವಿನೀಶ್ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ
ಇಷ್ಟು ದೊಡ್ಡ ಇತಿಹಾಸ ಇರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಕರಾವಳಿ ತಂಡ ಅವಕಾಶವನ್ನು ಅಷ್ಟೆ ಅದ್ಭುತವಾಗಿ ಬಳಸಿಕೊಂಡಿದೆ ಎನ್ನುವುದು ಹಾಡು ನೋಡಿದ್ರೆ ಗೊತ್ತಾಗುತ್ತಿದೆ. ಸಾಂಪ್ರದಾಯಿಕ ಕ್ರೀಡೆ ಕಂಬಳವನ್ನು ಅಷ್ಟೇ ನೈಜ್ಯವಾಗಿ ಚಿತ್ರೀಕರಣ ಮಾಡುವುದು ಸಹ ಸಿನಿಮಾತಂಡಕ್ಕೆ ದೊಡ್ಡ ಸವಾಲಾಗಿತ್ತು. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿ ಈಗ ಪ್ರೇಕ್ಷಕರ ಕರಾವಳಿ ದರ್ಶನ ಮಾಡಿಸಲು ಸಜ್ಜಾಗಿದೆ ಸಿನಿಮಾತಂಡ. ಸೋಲ್ ಆಫ್ ಕರಾವಳಿ ಹಾಡನ್ನ ಖ್ಯಾತ ಗಾಯಕ ಸಾಯಿ ವಿಗ್ನೇಶ್ ಹಾಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯ ಈ ಹಾಡಿಗಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಸಿನಿಮಾದ ಹೈಲೆಟ್ ಕಂಬಳ ಜೊತೆಗೆ ಅಲ್ಲಿನ ಸಂಸ್ಕೃತಿ, ಸೊಗಡನ್ನು ಛಾಯಾಗ್ರಾಹಕ ಅಭಿಮನ್ಯೂ ಸದಾನಂದನ್ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಪ್ರಜ್ವಲ್ ದೇವರಾಜ್ಗೆ ನಾಕಿಯಾಗಿ ಸಂಪದಾ ನಟಿಸಿದ್ದಾರೆ. ಇನ್ನೂ ಉಳಿದಂತೆ ಸಿನಿಮಾದ ಪವರ್ ಫುಲ್ ಪಾತ್ರದಲ್ಲಿ ನಟ ಮಿತ್ರ, ರಮೇಶ್ ಇಂದಿರ, ಶ್ರೀಧರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಕರಾವಳಿ, ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ಗಾಣಿಗ ಫಿಲ್ಮ್ಸ್ನಲ್ಲಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ಕೆವಿಎನ್ ಪ್ರೊಡಕ್ಷನ್ ಕರಾವಳಿ ಸಿನಿಮಾವನ್ನು ಪ್ರೆಸೆನ್ಸ್ ಮಾಡುವ ಜೊತೆಗೆ ವಿತರಣೆಯನ್ನು ಮಾಡುತ್ತಿರುವುದು ವಿಶೇಷ.
