ಚಾಮರಾಜನಗರ: ತಮಿಳುನಾಡು ಸಚಿವ ಸಫಾರಿ ನಡೆಸಿದ್ದು ನಿಜ. ಆದರೆ, ಆ ವೀಡಿಯೊ ಬಂಡೀಪುರದ್ದಲ್ಲ. ಮಧುಮಲೈನಲ್ಲಿ ಸಫಾರಿ ವೀಡಿಯೊ ಎಂದು ಬಂಡೀಪುರ ಡಿಸಿಎಫ್ ನಂದೀಶ್ ತಿಳಿಸಿದ್ದಾರೆ.
ಸಫಾರಿ ವೇಳೆ ತಮಿಳುನಾಡು ಸಮಾಜ ಕಲ್ಯಾಣ ಸಚಿವ ವಣ್ಣಿ ಅರಸು ಕಾಡಾನೆ ಹಾಗೂ ಹುಲಿಯನ್ನು ಬೆನ್ನಟ್ಟಿ ರೀಲ್ಸ್ ಮಾಡಿದ್ದರು. ಸಫಾರಿ ವಾಹನದಿಂದ ಇಳಿದು ಹುಲಿ ಹಾಗೂ ಆನೆಗಳ ಕಡೆ ಹೋಗಿ ಅವುಗಳು ಹೆದರಿ ಓಡುವಂತೆ ಮಾಡಿ ರೀಲ್ಸ್ ಮಾಡಿದ್ದರು. ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಘಟನೆ ಕುರಿತು ಬಂಡೀಪುರ ಡಿಸಿಎಫ್ ಮಾತನಾಡಿದ್ದಾರೆ.
ನ.10 ರಂದು ಬಂಡೀಪುರದಲ್ಲಿ ಸಚಿವ ವಣ್ಣಿ ಅರಸು ಸಫಾರಿ ನಡೆಸಿದ್ದರು. ಆದರೆ, ವೈರಲ್ ವೀಡಿಯೊ ಬಂಡೀಪುರದಲ್ಲಿ ನಡೆದ ಘಟನೆಯಲ್ಲ. ಪಕ್ಕದ ತಮಿಳುನಾಡಿನ ಮಧುಮಲೈ ಅರಣ್ಯದಲ್ಲಿ ನಡೆದಿರುವ ಘಟನೆಯಾಗಿದೆ. ರೀಲ್ಸ್ನಲ್ಲಿ ನಮ್ಮ ಸಫಾರಿ ವಾಹನ ಇರುವುದು ನಿಜ. ಬಂಡೀಪುರದಲ್ಲಿ ಸಫಾರಿ ಮಾಡುವಾಗ ಬಳಸಿದ ವಾಹನ ಹಾಗೂ ಮಧುಮಲೈನಲ್ಲಿ ಸಫಾರಿ ಮಾಡುವಾಗ ಕೆಳಗಿಳಿದಿರುವ ವೀಡಿಯೊ ಮಿಕ್ಸ್ ಮಾಡಿ ರೀಲ್ಸ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ವಾಹನದಿಂದ ಇಳಿಯಲು ಅವಕಾಶವೇ ಇಲ್ಲ. ಪ್ರಾಥಮಿಕ ತನಿಖೆಯಿಂದ ಇದು ಬಂಡೀಪುರದಲ್ಲಿ ನಡೆದ ಘಟನೆ ಅಲ್ಲ. ಆದರೂ ನಮ್ಮ ಸಫಾರಿ ವಾಹನದ ಡ್ಯಾಶ್ ಕ್ಯಾಮೆರಾ ಮತ್ತೊಮ್ಮೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
