ಹಾಸನ: ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ (Shivalinge Gowda) ಸಚಿವ ಸ್ಥಾನ ನೀಡಿ ಎಂದು ಹಾಸನ ಸಂಸದ ಶ್ರೇಯಸ್ ಪಟೇಲ್ (Sheyas Patel), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಹಾಸನ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆ.ಎಂ.ಶಿವಲಿಂಗೇಗೌಡ ಅವರು ಏಕೈಕ ಕಾಂಗ್ರೆಸ್ ಶಾಸಕರಾಗಿದ್ದಾರೆ. ಅತ್ಯಂತ ಸವಾಲಿನ ರಾಜಕೀಯ ಪರಿಸ್ಥಿತಿಯಲ್ಲಿಯೂ ಅವರು ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಬೆಂಬಲವನ್ನು ಕಾಂಗ್ರೆಸ್ ಪರವಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನೂ ಓದಿ: ಡಿಕೆಶಿ ಪಟ್ಟಾಭಿಷೇಕಕ್ಕೆ ರಾಮನಗರದಿಂದ 50 ಸಾವಿರ ಜನ!
ಕಳೆದ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು ಕಾಂಗ್ರೆಸ್ ಮಡಿಲಿಗೆ ತರುವಲ್ಲಿ ಶಿವಲಿಂಗೇಗೌಡರ ಪಾತ್ರ ಮಹತ್ವದ್ದಾಗಿದೆ. ಅವರ ಕಠಿಣ ಪರಿಶ್ರಮ, ಪಕ್ಷದ ಮೇಲಿನ ನಿಷ್ಠೆ ಹಾಗೂ ಸಂಘಟನಾ ಶಕ್ತಿಯಿಂದ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಯಿತು.

ಇದಲ್ಲದೇ, ಶಿವಲಿಂಗೇಗೌಡರು ಸತತವಾಗಿ ಅರಸೀಕೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಪ್ರಸ್ತುತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದು ಅವರ ಮೇಲಿರುವ ಜನರ ವಿಶ್ವಾಸವನ್ನು ತೋರಿಸುತ್ತದೆ.
ವಿಧಾನಸಭೆಯಲ್ಲಿ ತಮ್ಮ ವಾಕ್ಚಾತುರ್ಯ ಹಾಗೂ ರಾಜಕೀಯ ಅನುಭವದಿಂದ ಹೆಸರು ಮಾಡಿರುವ ಶಿವಲಿಂಗೇಗೌಡರು, ಬಿಜೆಪಿ ಹಾಗೂ ಜೆಡಿಎಸ್ ಸಿದ್ಧಾಂತಗಳನ್ನು ಸದಾ ಪ್ರಬಲವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಜೊತೆಗೆ, ಕಾಂಗ್ರೆಸ್ ಪಕ್ಷದ ತತ್ವ ಮತ್ತು ನೀತಿಗಳನ್ನು ಸದನದಲ್ಲಿ ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದಾರೆ. ಇದನ್ನೂ ಓದಿ: ಮೂರು ದಿನಗಳ ಬಳಿಕ ಮೌನ ಮುರಿದ ಡಿಕೆ ಶಿವಕುಮಾರ್
ಹಾಸನ ಜಿಲ್ಲೆಯ ಅಭಿವೃದ್ಧಿಗೆ ಅವರು ನಿರಂತರವಾಗಿ ಶ್ರಮಿಸುತ್ತಿದ್ದು, ಸಚಿವ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಮತ್ತಷ್ಟು ವೇಗಗೊಳ್ಳಲಿವೆ. ಜೊತೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಗಟ್ಟಿಯಾಗಲಿದೆ. ಹಾಸನದಲ್ಲಿ ಜೆಡಿಎಸ್ ಹಾಗೂ ಬಿಜೆಪಿಗೆ ಬಲವಾದ ಟಕ್ಕರ್ ನೀಡಲು ಶಿವಲಿಂಗೇಗೌಡರಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡುವುದು ಅಗತ್ಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮನವಿಗೆ ಸ್ಪಂದಿಸಬೇಕೆಂದು ಸಂಸದ ಶ್ರೇಯಸ್ ಪಟೇಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೊಂದೆಡೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಚರ್ಚೆ ಜೋರಾಗಿದ್ದು, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆ ರಾಜ್ಯ ಸಚಿವ ಸಂಪುಟ ಪುನರ್‌ರಚನೆಯಲ್ಲಿ ಯಾರು ಆಯ್ಕೆಯಾಗಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಕೆಲ ಸಚಿವರ ಸ್ಥಾನ ಬದಲಾವಣೆ ಹಾಗೂ ಹೊಸ ಮುಖಗಳಿಗೆ ಅವಕಾಶ ಸಿಗುವ ಸಾಧ್ಯತೆ ಇರುವ ಹಿನ್ನೆಲೆ ಶ್ರೇಯಸ್ ಪಟೇಲ್ ಈ ಪತ್ರ ಬರೆದಿದ್ದಾರೆ.
