ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರಿಗೆ ಕಾನೂನು ಸಂಕಷ್ಟ ಎದುರಾಗಿದ್ದು, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು(Bengaluru Magistrate Court) ಅವರ ವಿರುದ್ಧ ಜಾಮೀನು ರಹಿತ ವಾರಂಟ್ (Non-Bailable Warrant) ಜಾರಿಗೊಳಿಸಿದೆ.
ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿ (Voter ID) ಹೊಂದಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ಈ ಕಠಿಣ ಕ್ರಮ ಕೈಗೊಂಡಿದೆ.
ದೇಶದ ಚುನಾವಣಾ ನಿಯಮಗಳ ಪ್ರಕಾರ ಯಾವುದೇ ಒಬ್ಬ ನಾಗರಿಕ ಭಾರತದ ಯಾವುದೇ ಮೂಲೆಯಲ್ಲಿ ಕೇವಲ ಒಂದು ಮತದಾರರ ಗುರುತಿನ ಚೀಟಿಯನ್ನು ಮಾತ್ರ ಹೊಂದಲು ಅವಕಾಶವಿರುತ್ತದೆ. ಆದರೆ, ನಟ ಪ್ರಕಾಶ್ ರಾಜ್ ಅವರು ನಿಯಮ ಬಾಹಿರವಾಗಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ರಾಜ್ಯಗಳದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ನಾಲ್ಕೂ ರಾಜ್ಯಗಳಲ್ಲಿ ಪ್ರಕಾಶ್ ರಾಜ್ ಹೆಸರಿನಲ್ಲಿ ಮತದಾರರ ಗುರುತಿನ ಚೀಟಿಗಳು ಇರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಇದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ಈ ಅಕ್ರಮದ ಕುರಿತಾಗಿ ದಿಲೀಪ್ ಕುಮಾರ್ ಎಂಬುವವರು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ನ್ಯಾಯಾಲಯವು ಈ ಹಿಂದೆ ಪ್ರಕಾಶ್ ರಾಜ್ ಅವರಿಗೆ ಎರಡು ಬಾರಿ ಸಮನ್ಸ್ (ನೋಟಿಸ್) ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ನಟ ಪ್ರಕಾಶ್ ರಾಜ್ ಅವರು ನ್ಯಾಯಾಲಯದ ನೋಟಿಸ್‌ಗೆ ಕ್ಯಾರೆ ಎನ್ನದೆ ವಿಚಾರಣೆಯಿಂದ ದೂರ ಉಳಿದಿದ್ದರು.
ನ್ಯಾಯಾಲಯದ ಆದೇಶವನ್ನು ಪದೇ ಪದೇ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್, ಇದೀಗ ಅವರ ವಿರುದ್ಧ ನೇರವಾಗಿ ಜಾಮೀನು ರಹಿತ ವಾರಂಟ್ (NBW) ಹೊರಡಿಸಿದೆ.
