ಗದಗ: ಪ್ರಾಮಾಣಿಕವಾಗಿ ಎನ್‌ಡಿಎ(NDA) ಅಭ್ಯರ್ಥಿಗೆ ಮತ ಹಾಕಿದ್ದೇನೆ. ಧರ್ಮಸ್ಥಳ ಮಂಜುನಾಥನ ಮೇಲೆ ಮಾತ್ರವಲ್ಲ, ಯಾವುದೇ ದೇವರ ಮೇಲೆ ಪ್ರಮಾಣ ಮಾಡಲು ಹೇಳಿದರೂ ಮಾಡುತ್ತೇನೆ. ಅಡ್ಡ ಮತದಾನ (Cross Voting) ಮಾಡಿದ್ದು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ(BJP MLA) ಡಾ. ಚಂದ್ರು ಲಮಾಣಿ (Dr. Chandru Lamani) ಹೇಳಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಪಬ್ಲಿಕ್ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿ, ಯಾವುದೇ ಆಧಾರವಿಲ್ಲದೆ ನಮ್ಮ ಹೆಸರು ಹರಿದಾಡುತ್ತಿದೆ. ಸತ್ಯಶೋಧನಾ ಸಮಿತಿಯಲ್ಲಿ ಅಡ್ಡ ಮತದಾನ ಮಾಡಿರುವುದು ಸಾಬೀತಾದರೆ ರಾಜೀನಾಮೆ ಹಾಗೂ ರಾಜಕೀಯ ನಿವೃತ್ತಿ ಪಡೆಯುವ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಿಗೂ ಈಗಾಗಲೇ ತಿಳಿಸಿದ್ದೇನೆ ಎಂದರು.
ಇನ್ನು ಶಾಸಕ ದಿನಕರ ಶೆಟ್ಟಿ ಆರೋಪಗಳ ಕುರಿತು ಪ್ರತಿಕ್ರಿಯಿಸಿ, ದಿನಕರ ಶೆಟ್ಟಿ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಯಾವುದೇ ಬ್ಲ್ಯಾಕ್‌ಮೇಲ್‌ಗೆ ನಾವು ಬಗ್ಗುವುದಿಲ್ಲ. ನಾವು ಬಗ್ಗದ ಕಾರಣ ನನ್ನ ವಿರುದ್ಧ ಏನೆಲ್ಲಾ ಷಡ್ಯಂತ್ರಗಳು ನಡೆದಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಫೋನ್ ಟ್ಯಾಪಿಂಗ್ ಅಷ್ಟೇ ಅಲ್ಲಾ, ಯಾವುದೇ ತನಿಖೆಗೂ ನಾನು ಸಿದ್ಧ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯೋದು ಬೇಡ – ಸುರೇಶ್ ಕುಮಾರ್ ಆಕ್ಷೇಪ
ಪಕ್ಷ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧ. ನನ್ನ ವಿರುದ್ಧ ಇರುವ ಪ್ರಕರಣಕ್ಕೂ ಅಡ್ಡ ಮತದಾನ ಆರೋಪಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಪ್ರಕರಣ ದಾಖಲಿಸಲಾಗಿದೆ. ಆ ಪ್ರಕರಣವನ್ನು ಅಡ್ಡ ಮತದಾನದ ವಿಚಾರಕ್ಕೆ ಲಿಂಕ್ ಮಾಡಬೇಡಿ. ಯಾರದ್ದೋ ಹೆಸರನ್ನು ಮುಚ್ಚಿಡಲು ನಮ್ಮಂತಹವರ ಹೆಸರುಗಳನ್ನು ಎಳೆದು ತರುತ್ತಿದ್ದಾರೆ. ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಪಕ್ಷದಿಂದ ಸೂಚನೆ ನೀಡಲಾಗಿತ್ತು. ಆ ಸೂಚನೆಯನ್ನು ಪ್ರಾಮಾಣಿಕವಾಗಿ ಪಾಲಿಸಿ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದು ಚಂದ್ರು ಲಮಾಣಿ ಹೇಳಿದರು..ಇದನ್ನೂ ಓದಿ: ನಾನು ಅಡ್ಡ ಮತದಾನ ಮಾಡಿಲ್ಲ, ಮುಜುಗರ ಉಂಟು ಮಾಡಬೇಡಿ: ಚಂದ್ರು ಲಮಾಣಿ

