ಗದಗ: ವಿಧಾನ ಪರಿಷತ್ ಚುನಾವಣೆಯಲ್ಲಿ (Vidhan Parishad Election) ಅಡ್ಡ ಮತದಾನ (Cross Voting) ಮಾಡಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಗದಗ(Gadag) ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ(Chandru Lamani) ಅವರು ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವುದು ಸಂಪೂರ್ಣ ಸುಳ್ಳು ಸುದ್ದಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾವು ಅಡ್ಡ ಮತದಾನ ಮಾಡಿದ್ದೇವೆ ಎಂದು ಮಾಧ್ಯಮಗಳಲ್ಲಿ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಬಿಜೆಪಿಯಿಂದ ಒಬ್ಬ ಅಭ್ಯರ್ಥಿಗೆ 30 ಮತಗಳಂತೆ, ಇಬ್ಬರು ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಒಟ್ಟು 60 ಶಾಸಕರ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ನಮಗೂ ಸಹ ಪಕ್ಷದಿಂದ ಸ್ಪಷ್ಟವಾಗಿ ವಿಪ್ ಜಾರಿ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡುದರು.
ನನಗೆ ಕೃಷ್ಣಾ ನಾಯಕ್ ಹಾಗೂ ದುರ್ಯೋಧನ ಐಹೊಳೆ ಅವರಿಗೆ ಎನ್‌ಡಿಎ (NDA) ಅಭ್ಯರ್ಥಿಗೆ ಮತ ಹಾಕಬೇಕು ಎಂದು ಪಕ್ಷದಿಂದ ವಿಪ್ ನೀಡಲಾಗಿತ್ತು. ಅದರಂತೆ ನಾವೆಲ್ಲರೂ ಪಕ್ಷದ ಆದೇಶವನ್ನು ಅತ್ಯಂತ ಪ್ರಾಮಾಣಿಕವಾಗಿ ಪಾಲಿಸಿ, ಎನ್‌ಡಿಎ ಅಭ್ಯರ್ಥಿಗೇ ಮತ ಚಲಾಯಿಸಿದ್ದೇವೆ. ಆದರೆ, ಯಾರೋ ಮಾಡಿದ ಅಡ್ಡ ಮತದಾನಕ್ಕೆ ನಮ್ಮ ಹೆಸರುಗಳನ್ನು ತೇಲಿ ಬಿಟ್ಟಿರುವುದು ನಮಗೆ ತೀವ್ರ ನೋವುಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಹೋಗುವವರು ಈಗಲೇ ಹೊರಟು ಬಿಡಿ – ಅಡ್ಡ ಮತದಾನ ಮಾಡಿದವರ ಮೇಲೆ ಹೆಚ್‌ಡಿಕೆ ಗರಂ
ಯಾವುದೇ ಆಧಾರ ಅಥವಾ ದಾಖಲೆಗಳಿಲ್ಲದೆ ವಿನಾಕಾರಣ ನಮ್ಮ ಹೆಸರುಗಳನ್ನು ಬಳಸಿ ನಮಗೆ ಮುಜುಗರ ಉಂಟು ಮಾಡಬೇಡಿ ಮತ್ತು ನಮ್ಮ ಹೆಸರನ್ನು ಹಾಳು ಮಾಡಲು ಯತ್ನಿಸಬೇಡಿ ಎಂದು ಅವರು ಮಾಧ್ಯಮಗಳು ಹಾಗೂ ರಾಜಕೀಯ ವಲಯಕ್ಕೆ ಮನವಿ ಮಾಡಿದರು.
ಅಡ್ಡ ಮತದಾನದ ಕುರಿತು ತನಿಖೆ ನಡೆಸಲು ಬಿಜೆಪಿ ನಾಯಕ ಸಿ.ಟಿ. ರವಿ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು (Fact-Finding Team) ರಚಿಸಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿ.ಟಿ. ರವಿ ಅವರು ಇದುವರೆಗೆ ನಮ್ಮನ್ನು ನೇರವಾಗಿ ಸಂಪರ್ಕಿಸಿಲ್ಲ. ಪಕ್ಷವು ಅವರ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಆ ಸಮಿತಿಯು ನಡೆಸುವ ತನಿಖೆ ಹಾಗೂ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾನು ಮುಕ್ತವಾಗಿ ಸಿದ್ಧನಿದ್ದೇನೆ. ಏಕೆಂದರೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರಕಟಿಸಿದರು.
ತಾವು ಪಕ್ಷದ ನಿಷ್ಠಾವಂತ ಸಿಪಾಯಿಯಾಗಿದ್ದು, ಪಕ್ಷದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿರುವುದಾಗಿ ಚಂದ್ರು ಲಮಾಣಿ ಮತ್ತೊಮ್ಮೆ ದೃಢಪಡಿಸಿದರು.
