ಬೆಂಗಳೂರು: ಧರ್ಮಸ್ಥಳದಲ್ಲಿ(Dharmasthala) ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮತ್ತು ಶಾಸಕರ ಆಣೆ-ಪ್ರಮಾಣಕ್ಕೆ ಹಿರಿಯ ನಾಯಕ ಸುರೇಶ್ ಕುಮಾರ್ (Suresh Kumar) ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಪ್ರಕಟಿಸಿ, ನಿಜಕ್ಕೂ ನನಗೆ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಈ ಘೋಷಣೆ ದಿಗ್ಭ್ರಮೆ ಉಂಟು ಮಾಡಿದೆ. ಇದ್ಯಾಕೋ ಸರಿಯಾದ ತೀರ್ಮಾನ ಎಂದೆನಿಸುತ್ತಿಲ್ಲ ಎಂದು ಬರೆದಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಶ್ರೀ ಕ್ಷೇತ್ರ ಧರ್ಮಸ್ಥಳ ಅದರದೇ ಪಾವಿತ್ರ್ಯತೆ ಹೊಂದಿದೆ. ನಾನು ವಿಧಾನಸಭೆಯಲ್ಲಿ ಹೇಳಿದಂತೆ ನನ್ನ ಜೀವನದಲ್ಲಿ ನನ್ನ ತಾಯಿಯ ನಂತರ ನನಗಿರುವ ನಿಜವಾದ ಬಂಧು ಎಂದರೆ ಮಂಜುನಾಥ ಸ್ವಾಮಿ.
ರಾಜಕಾರಣದಲ್ಲಿ ನಡೆದುಬಿಟ್ಟಿರುವ ಕೀಳು ಮಟ್ಟದ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ. ಈ ಅಪಚಾರ ಮಾಡಿರುವವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ
ಈಗಾಗಲೇ ಹಲವರು ಧರ್ಮಸ್ಥಳದ ಹಿರಿಮೆಯನ್ನು ಹಾಳು ಮಾಡುವ ಕೆಲಸವನ್ನು ಮಾಡುವುದರಲ್ಲಿ ವಿಕೃತಾನಂದ ಪಡೆದಿದ್ದಾರೆ. ಇಡೀ ನಾಡಿನ ಜನತೆ ನಂಬಿಕೆ ಇಟ್ಟಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಒಂದೊಮ್ಮೆ ಅಡ್ಡ ಮತದಾನ ಮಾಡಿದ ವೀರರು ಆಣೆ – ಪ್ರಮಾಣ ಮಾಡಿ ತಾವು ಉಳಿದುಕೊಳ್ಳಲು ತಮ್ಮ ನೈತಿಕ ದಿವಾಳಿತನ ತೋರಿಸಿದರೆ, ಅದರಿಂದ ಅಪಚಾರದ ಪ್ರಮಾಣ ಹೆಚ್ಚಾಗುತ್ತದಷ್ಟೇ. ದಯವಿಟ್ಟು ಸ್ವಾಮಿ ಮಂಜುನಾಥನ ಶ್ರೇಷ್ಠತೆಯನ್ನು ಈ ರೀತಿ ಒರೆ ಹಚ್ಚುವುದು ಯಾವುದೇ ಕಾರಣಕ್ಕೂ ಬೇಡ.
ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನದ (Cross Voting) ವಿವಾದ ಇದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ಪಕ್ಷದ ಎಲ್ಲಾ 63 ಶಾಸಕರಿಂದಲೂ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿರುವ(Dharmasthala) ಶ್ರೀ ಮಂಜುನಾಥ ಸ್ವಾಮಿಯ ಮುಂದೆ ಆಣೆ-ಪ್ರಮಾಣ ಮಾಡಿಸಲು ಕಮಲ ಪಾಳಯ ನಿರ್ಧರಿಸಿದೆ.
